More

    ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ; ಶಿರಾ ಉಪಸಮರದಲ್ಲಿ ಸಾರ್ವಜನಿಕ ಬೇಡಿಕೆ

    ತುಮಕೂರು: ಶಿರಾ, ಮಧುಗಿರಿ, ಪಾವಗಡ ತಾಲೂಕುಗಳ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಹುಣಸೆಗೆ ಮಾರುಕಟ್ಟೆ ವಿಸ್ತರಿಸಲು ಅನುಕೂಲವಾಗುವಂತೆ ‘ಹುಣಸೆ ಅಭಿವೃದ್ಧಿ ಮಂಡಳಿ’ ಸ್ಥಾಪನೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಕೂಗು ಎದ್ದಿದೆ.

    ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅನುದಾನ ನೀರಾವರಿ ಸೌಲಭ್ಯವಿರುವ ರೈತರ ಪಾಲಾಗುತ್ತಿದ್ದು, ಮಳೆಯಾಶ್ರಿತ ಹುಣಸೆ, ಬೇವು, ಹೊಂಗೆ ಮತ್ತಿತರ ಅರಣ್ಯ ನಂಬಿ ಬದುಕುತ್ತಿರುವ ರೈತರನ್ನು ಸರ್ಕಾರ ಮರೆತಿದೆ. ಪ್ರಸ್ತುತ ಅಡುಗೆಗೆ ಬಳಸಲಾಗುತ್ತಿರುವ ಹುಣಸೆ ಹಣ್ಣನ್ನು ಇನ್ನಿತರ ಉತ್ಪನ್ನಗಳಿಗೆ ಬಳಸುವ ಬಗ್ಗೆ ಸಂಶೋಧನೆ ನಡೆಯಬೇಕಿದೆ, ಇದಕ್ಕೆ ಪೂರಕವಾಗಿ ತೆಂಗು ಹಾಗೂ ನಾರು ಅಭಿವೃದ್ಧಿಗೆ ಸ್ಥಾಪಿಸಿರುವಂತೆ ಹುಣಸೆ ಅಭಿವೃದ್ಧಿ ಮಂಡಳಿ ಅಗತ್ಯವನ್ನು ಇಲ್ಲಿನ ಸ್ಥಳೀಯರು ಚರ್ಚಿಸಲಾರಂಭಿಸಿದ್ದು, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

    ಕಲ್ಪತರು ನಾಡು ಎಂದೇ ಖ್ಯಾತಿಗಳಿಸಿರುವ ಜಿಲ್ಲೆಯ ಬಹುತೇಕ ಕೃಷಿಕರ ಜೀವಾಳ ಹುಣಸೆ, ಹಲಸು, ಬೇವು, ಹೊಂಗೆ ಹಾಗೂ ಸೀಗೆಕಾಯಿ ಆಗಿದ್ದು ಈ ಉತ್ಪನ್ನಗಳ ಮೌಲ್ಯವರ್ಧನೆಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವವರ ಅಗತ್ಯವಿದೆ. ಅತೀ ಕಡಿಮೆ ಮಳೆ ಬೀಳುವ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿಯೂ ಹುಣಸೆ ಪ್ರಧಾನ ಬೆಳೆಯಾಗಿದೆ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಈ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಬೇಕಿದೆ.

    ಬಹುಜನರ ಕಲ್ಪವೃಕ್ಷ : ಕನಿಷ್ಠ ಬಂಡವಾಳದಲ್ಲಿ ಪಾಳುಬಿದ್ದ ಭೂಮಿಯಲ್ಲಿಯೂ ಬೆಳೆಯಬಹುದಾದ ಹುಣಸೆಯನ್ನು ತುಮಕೂರು ಜಿಲ್ಲೆಯ ಬಹುತೇಕ ಜನರು ಜೀವನೋಪಾಯಕ್ಕಾಗಿ ನಂಬಿದ್ದರೂ ಇದರ ಉಪಉತ್ಪನ್ನಗಳ ಬಗ್ಗೆ ಸಂಶೋಧನೆಗಳು ನಡೆಯದಿರುವುದು ಭವಿಷ್ಯದಲ್ಲಿ ಮಾರುಕಟ್ಟೆ ಸಮಸ್ಯೆ ಎದುರಾಗುವ ಆತಂಕವಿದೆ. ಹುಣಸೆ ಹುಳಿ ಬಳಸಿ ತಯಾರಿಸಬಹುದಾದ ಪೂರಕ ಉತ್ಪನ್ನಗಳ ಬಗ್ಗೆ ಸಂಶೋಧನೆ ಹಾಗೂ ಕೈಗಾರಿಕೆಗಳ ಸ್ಥಾಪನೆಯ ಅಗತ್ಯವಿದೆ.

    ಬಹುಪಯೋಗಿ : ಹುಣಸೆಯ ಹುಳಿಗೆ ಟಾರ್ಟಾರಿಕ್ ಆಮ್ಲ ಕಾರಣ, ಇದರಲ್ಲಿ ವಿಶೇಷವಾಗಿ ಸಿ ಹಾಗೂ ಬಿ ವಿಟಮಿನ್ಸ್, ಆ್ಯಂಟಿ ಆಕ್ಸಿಡೆಂಟ್ಸ್, ಕ್ಯಾರೋಟಿನ್ ಮತ್ತು ಖನಿಜಾಂಶಗಳಾದ ಮೆಗ್ನೀಷಿಯಂ, ಪೊಟ್ಯಾಷಿಯಂ ಇದೆ. ಅದರ ಎಳೆಸೊಪ್ಪು, ಬೀಜದಲ್ಲಿಯೂ ಸಾಕಷ್ಟು ಆರೋಗ್ಯ ಲಾಭಗಳಿದ್ದು ಇದರ ಬಗ್ಗೆ ನಿರಂತರ ಸಂಶೋಧನೆ ಹಾಗೂ ಮೌಲ್ಯವರ್ಧನೆಗೆ ಪೂರಕವಾಗಿ ಅಧ್ಯಯನ ನಡೆಸಲು ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪನೆ ತುರ್ತಾಗಿ ಆಗಬೇಕಿದೆ.

    ಸರ್ಕಾರದ ಬಹುತೇಕ ಅನುದಾನ ನೀರಾವರಿ ಸೌಲಭ್ಯವಿರುವ ರೈತರು ಹಾಗೂ ಅವರ ಬೆಳೆಗಳಿಗೆ ಮೀಸಲಾಗಿದೆ ಆದರೆ, ಜಿಲ್ಲೆಯ ಬಹುಭಾಗದ ವ್ಯಾಪಿಸಿರುವ ಹುಣಸೆ, ಬೇವು, ಹೊಂಗೆ, ಸೀಗೇಕಾಯಿ ಮರೆಯಲಾಗಿದೆ. ಪ್ರಸ್ತುತ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹಿಸಲಾಗುತ್ತಿದೆ.
    ಕೆ.ಟಿ.ತಿಪ್ಪೇಸ್ವಾಮಿ ಪ್ರಗತಿಪರ ರೈತ, ಶಿರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts