More

    ಈರುಳ್ಳಿ ಬೀಜಕ್ಕೆ ಡಿಮಾಂಡಪ್ಪೋ ಡಿಮಾಂಡು

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ

    ಕಳೆದ ವರ್ಷ ಉಳ್ಳಾಗಡ್ಡಿ ಬೆಳೆಗೆ ಬಂಗಾರದ ಬೆಲೆ ಸಿಕ್ಕಿದೆ. ಹೀಗಾಗಿ, ಈ ವರ್ಷ ಉಳ್ಳಾಗಡ್ಡಿ ಬೀಜಕ್ಕೆ ಡಿಮಾಂಡಪ್ಪೋ ಡಿಮಾಂಡ್ ಎನ್ನುವಂತಾಗಿದೆ.

    ಗಗನಕ್ಕೇರಿದ್ದ ಉಳ್ಳಾಗಡ್ಡಿ ದರದಿಂದ ಆಕರ್ಷಿತರಾಗಿರುವ ರೈತರು ಈ ವರ್ಷ ಉಳ್ಳಾಗಡ್ಡಿ ಬೆಳೆದು ಹೆಚ್ಚು ಆದಾಯ ಗಳಿಸುವ ಕನಸು ಕಂಡಿದ್ದಾರೆ. ಅದರಂತೆ ಎಲ್ಲೆಡೆ ಉಳ್ಳಾಗಡ್ಡಿ ಬಿತ್ತನೆ ಜೋರಾಗಿದ್ದು, ಬೀಜಕ್ಕೆ ಭಾರಿ ಬೇಡಿಕೆ ಬಂದಿದೆ. ಅಭಾವ ಕೂಡ ತಲೆದೋರಿದೆ. ಇನ್ನು ಉಳ್ಳಾಗಡ್ಡಿ ಬೀಜದ ದರವಂತೂ ಏರುತ್ತಲೇ ಸಾಗಿದೆ.

    ಗದಗ ಜಿಲ್ಲೆಯ ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷೆ್ಮೕಶ್ವರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಜಿಲ್ಲೆಯ ಕಣವಿ ಹೊಸೂರ, ಶಿರುಂದ-ಯಲಿಶಿರುಂದ, ಲಕ್ಕುಂಡಿ, ಅಡರಕಟ್ಟಿ, ಲಕ್ಷೆ್ಮೕಶ್ವರ, ರೋಣ ಭಾಗದಲ್ಲಿ ರೈತರೇ ಬೀಜಗಳನ್ನು ಬೆಳೆಯುತ್ತಾರೆ. ಆದರೆ, ಕಳೆದ ವರ್ಷ ರೈತರು ಖರ್ಚುವೆಚ್ಚದ ಲೆಕ್ಕ ಹಾಕಿ ಬೀಜೋತ್ಪಾದನೆಗೆ ಹಿಂದೇಟು ಹಾಕಿದ್ದರು. ಇದರಿಂದ ಬೀಜಗಳ ಕೊರತೆಯುಂಟಾಗಿ ದರ ಹೆಚ್ಚಲು ಕಾರಣವಾಗಿದೆ.

    ರೈತರು ಬೀಜ ಮಾರಾಟ ಕೇಂದ್ರಗಳಿಗೆ, ಬೀಜ ಬೆಳೆದ ರೈತರ ಮನೆ ಬಾಗಿಲಿಗೆ ಯಡತಾಕುತ್ತಿದ್ದಾರೆ. ಉಳ್ಳಾಗಡ್ಡಿ ಬೀಜಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಸ್ಥಳೀಯ ರೈತರು ಬೆಳೆದ ಉಳ್ಳಾಗಡ್ಡಿ ಬೀಜ ಹಾಗೂ ನಾನಾ ಕಂಪನಿಗಳ ಬೀಜದ ದರ ದಿನದಿಂದ ದಿನಕ್ಕೆ ಏರುತ್ತ ಸಾಗಿದೆ.

    ದುಪ್ಪಟ್ಟು ದರದಲ್ಲಿ ಮಾರಾಟ: ಈ ಹಿಂದೆ ವಿವಿಧ ಕಂಪನಿಯ ಉಳ್ಳಾಗಡ್ಡಿ ಬೀಜ ಪ್ರತಿ ಕೆ.ಜಿ.ಗೆ 300- 600 ರೂ. ಮತ್ತು ರೈತರು ಬೆಳೆದ ಬೀಜ ಪಡಿ (4 ಶೇರು) ಒಂದಕ್ಕೆ 1200- 1500 ರೂ. ದರವಿತ್ತು. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 400- 1200 ರೂ. ದರದಲ್ಲಿ ಬೀಜ ಮಾರಾಟವಾಗುತ್ತಿದೆ. ರೈತರು ಬೆಳೆದ ಪಡಿ (ಅಂದಾಜು 2 ಕೆ.ಜಿ.) ಬೀಜಕ್ಕೆ 3,000 ರೂ. ಮೇಲ್ಪಟ್ಟು ಡಿಮ್ಯಾಂಡ್ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬೀಜ ತರಿಸುವ ವ್ಯಾಪಾರಸ್ಥರು ಕೆ.ಜಿ.ಗೆ 1500 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಜಿಂದಾಲ್, ಲೀಡ್​ಬೆಟರ್, ನೀಲಂ, ಗರವಾ, ಪಂಚಗಂಗಾ, ಪ್ರೇಮ್ ಇಂಡೋ ಅಮೆರಿಕನ್ ಉಳ್ಳಾಗಡ್ಡಿ ಬಿತ್ತನೆ ಬೀಜಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ.

    ಕಳೆದ ವರ್ಷದಂತೆ ಈ ವರ್ಷವೂ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಸಿಗುವ ಆಶಾಭಾವನೆ ರೈತರದ್ದಾಗಿದೆ. ಕಳೆದ ವರ್ಷ ಶಿರಹಟ್ಟಿ/ಲಕ್ಷೆ್ಮೕಶ್ವರ ವ್ಯಾಪ್ತಿಯಲ್ಲಿ 2000 ಸಾವಿರ ಹೆಕ್ಟೇರ್ ಕಪ್ಪು ಮಣ್ಣಿನ ಜಮೀನಿನಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿತ್ತು. ಈ ವರ್ಷ ತಾಲೂಕಿನ ಯಳವತ್ತಿ, ಮಾಗಡಿ, ಗೊಜನೂರ, ಲಕ್ಷೆ್ಮೕಶ್ವರ, ಅಡರಕಟ್ಟಿ, ಬಡ್ನಿ, ರಾಮಗೇರಿ, ಬಸಾಪುರ ಭಾಗದಲ್ಲಿ 2500 ಹೆಕ್ಟೇರ್​ಗಿಂತ ಹೆಚ್ಚು ಕ್ಷೇತ್ರದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಲಿದೆ. ಹೀಗಾಗಿ, ಬೀಜ ದರ ಏರಿದೆ. ರೈತರು ಉಳ್ಳಾಗಡ್ಡಿ ಬೀಜ ಖರೀದಿಯಲ್ಲಿ ಹೆಚ್ಚು ಜಾಗರೂಕರಾಗಬೇಕು. ಖರೀದಿಸಿದ ಬೀಜಕ್ಕೆ ರಸೀದಿ, ಹರಿದ ಪಾಕೀಟು ಕಾಯ್ದಿರಿಸಬೇಕು.

    | ಸುರೇಶ ಕುಂಬಾರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಬಿಟಿ ಹತ್ತಿ ಬೀಜದಂತೆ ಉಳ್ಳಾಗಡ್ಡಿ ಬೀಜಕ್ಕೆ ನಿಗದಿತ ಬೆಲೆ ಇಲ್ಲದ್ದರಿಂದ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ತಮ್ಮದೇ ಆದ ಬೆಲೆಯಲ್ಲಿ ಬೀಜ ಮಾರಾಟ ಮಾಡುತ್ತಿವೆ. ಈ ವೇಳೆ ಕೃತಕ ಅಭಾವ ಸೃಷ್ಟಿಸುವ ಕಂಪನಿಗಳು ಲಾಭದ ಆಸೆಗಾಗಿ ಕಳಪೆ ಬೀಜ ಮಾರಾಟ ಮಾಡುವುದಲ್ಲದೆ, ಹೆಚ್ಚಿನ ದರವನ್ನೂ ಪಡೆಯಬಹುದಾಗಿದೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೀಜ ಸಿಗುವ ವ್ಯವಸ್ಥೆ ಕಲ್ಪಿಸಬೇಕು.

    | ಬಸವರಾಜ ಆದಿ, ಬಸವರಾಜ ಮೆಣಸಿಕಾಯಿ, ರವಿ ಹವಳದ ಬೆಳೆಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts