More

    ಮಾಸಿಕ ಸಹಾಯಧನ ಹೆಚ್ಚಳಕ್ಕೆ ಒತ್ತಾಯ

    ಬಳ್ಳಾರಿ : ಮಾಸಿಕ ಸಹಾಯಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ, ಬ್ರಿಟಿಷರು ಅವರ ಕಾಲದಲ್ಲೆ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದರೂ ಈಗಲೂ ಇದು ಕರ್ನಾಟಕದಲ್ಲಿ ಮುಂದುವರೆದಿರಲು ಸರ್ಕಾರಗಳ ಉದಾಸೀನ ಹಾಗೂ ನಿರ್ಲಕ್ಷೃವೇ ಪ್ರಮುಖ ಕಾರಣವಾಗಿದೆ. ಕಳೆದ ಎರಡು ದಶಕಗಳಿಂದ ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದ ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರನ್ನು ಸಂಘಟಿಸಲಾಗುತ್ತಿದೆ ಎಂದರು.

    ರಾಜ್ಯದಲ್ಲಿರುವ ಒಂದು ಲಕ್ಷ ದೇವದಾಸಿ ಮಹಿಳೆಯರ ಕುಟುಂಬಕ್ಕೆ ಆದ್ಯತೆಯ ಮೇರೆಗೆ ಪ್ರತಿ ವರ್ಷ ಕನಿಷ್ಟ 1 ಸಾವಿರ ಕೋಟಿ ರೂ. ಹಾಗೂ ಸರ್ಕಾರದ ವಶದಲ್ಲಿರುವ ಜಮೀನಿನಲ್ಲಿ ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸುವ ಮೂಲಕ ಅವರ ಕುಟುಂಬಗಳನ್ನು ಸ್ವಾವಲಂಬಿಯಾಗಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

    ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ಗಣತಿಯಲ್ಲಿ ಬಿಟ್ಟು ಹೋದವರನ್ನು ಮರು ಸೇರ್ಪಡೆ ಮಾಡಬೇಕು. ಮದುವೆಗೆ ಪ್ರೋತ್ಸಾಹ ಧನವನ್ನು 5 ಲಕ್ಷ ರೂ. ನೀಡಬೇಕು. ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ಸ್ವ ಸಹಾಯ ಗುಂಪುಗಳ ಸುತ್ತು ನಿಧಿಯನ್ನು ಎರಡು ಲಕ್ಷ ರೂ.ಗಳಿಗೆ ಮತ್ತು ಶೇ.75 ಸಹಾಯಧನ ಮತ್ತು ಉಳಿದ ಸಾಲಕ್ಕೆ ಬಡ್ಡಿ ಇರದ ಸಾಲವನ್ನು ಕನಿಷ್ಟ 50 ಲಕ್ಷ ರೂ ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

    ನಿವೇಶನ ರಹಿತರಿಗೆ 80*80 ಚದರ ಅಡಿ ಸ್ಥಳದಲ್ಲಿ ಕನಿಷ್ಟ 7 ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಡಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಹೋಬಳಿಗೊಂದರಂತೆ ಪ್ರತಿ ತಿಂಗಳು ಕನಿಷ್ಟ 4 ಸಾವಿರ ರೂ. ಸಹಾಯಧನ, ಊಟ- ವಸತಿ ಸೌಲಭ್ಯ ಒದಗಿಸಬೇಕು ಎಂದರು.

    ವಿವಿಧ ವೃತ್ತಿಯಲ್ಲಿ ತೊಡಗಲು 5 ಲಕ್ಷ ರೂ.ಗಳವರೆಗೆ ಶೇ.75 ರಷ್ಟು ಸಹಾಯಧನ ಮತ್ತು ಶೂನ್ಯಬಡ್ಡಿದರಲ್ಲಿ ಸಾಲ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶಾವಕಾಶ ಒದಗಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವವರೆಗೆ ತಲಾ 10 ಸಾವಿರ ರೂ.ಗಳ ನಿರುದ್ಯೋಗ ಭತ್ಯೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಕಾಲ ಉದ್ಯೋಗವನ್ನು ಕಡ್ಡಾಯವಾಗಿ ಒದಗಿಸಬೇಕು. ಕೂಲಿ ಮೊತ್ತವನ್ನು 700 ರೂ.ಗೆ ಹೆಚ್ಚಿಸಬೇಕು ಎಂದು ತಿಳಿಸಿದರು.

    ಸಂಘದ ಜಿಲ್ಲಾಧ್ಯಕ್ಷೆ ಬಿ.ಮೈಲಮ್ಮ, ಕಾರ್ಯದರ್ಶಿ ಎ. ಸ್ವಾಮಿ, ಗಾಳಮ್ಮ, ರೇಣುಕಮ್ಮ, ಲಕ್ಷ್ಮೀ, ಮಾರಮ್ಮ, ಪದ್ಮಾ, ಯಲ್ಲಮ್ಮ, ರುದ್ರಮ್ಮ, ಹಂಪಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts