More

    15 ದಿನದಲ್ಲಿ 174 ಟನ್ ಮೀನು ಲಭ್ಯ, ಬೇಡಿಕೆ ಪರಿಣಾಮ ಆಯಾ ದಿನವೇ ಖಾಲಿ

    ಉಡುಪಿ: ಲಾಕ್‌ಡೌನ್ ನಡುವೆ ಸರ್ಕಾರ ಮೀನುಗಾರಿಕೆಗೆ ಅನುಮತಿ ನೀಡಿದ ಬಳಿಕ ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 1,74,116 ಕೆ.ಜಿ. ಮೀನುಗಳು ಲಭಿಸಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಪ್ರಸ್ತುತ ಲಭ್ಯತೆ ಪ್ರಮಾಣ ಕಡಿಮೆಯಾಗಿ, ಬೇಡಿಕೆ ಹೆಚ್ಚಿರುವುದರಿಂದ ಆ ದಿನ ಹಿಡಿದ ಮೀನು ಅಂದಿನ ದಿನವೇ ಪೂರ್ಣ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೀನುಗಾರಿಕೆಯು ಸಾರ್ವಜನಿಕರು, ಮೀನುಗಾರರ ಒತ್ತಾಯದ ಮೇರೆಗೆ ಸರ್ಕಾರದ ಆದೇಶದಂತೆ ಏ.13ರಿಂದ ಮತ್ತೆ ಆರಂಭಗೊಂಡಿತು.

    ಸದ್ಯ ಜಿಲ್ಲೆಯ ಸಮುದ್ರದಲ್ಲಿ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ಮಾತ್ರ ನಡೆಯುತ್ತಿದೆ. ಉಡುಪಿ ಮತ್ತು ಕುಂದಾಪುರ ತಾಲೂಕಿನ ಸಮುದ್ರ ತೀರಗಳಲ್ಲಿ ಗುರುತಿಸಿರುವ ಒಟ್ಟು 19 ಇಳಿದಾಣಗಳಲ್ಲಿ ಮೀನು ಹರಾಜು ಹಾಕಲಾಗುತ್ತಿದೆ. ಬಂಗುಡೆ, ಕಲ್ಲರ್, ಎಟ್ಟಿ, ಸಿಲ್ವರ್ ಫಿಶ್, ಕುರ್ಚಿಯಂತಹ ಮೀನುಗಳು ಸಿಗುತ್ತಿವೆ. ಬೇಡಿಕೆ ಹೆಚ್ಚಿರುವುದರಿಂದ ಇಳಿದಾಣಗಳಲ್ಲಿ ಬೆಳಗ್ಗೆ 9ರೊಳಗೆ ಮೀನು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಲ್ಪೆ ನಾಡದೋಣಿ ಮೀನುಗಾರರು.

    ಪ್ರತೀದಿನ 11,607ಕೆ.ಜಿ. ಮೀನು ಲಭ್ಯ: ಜಿಲ್ಲೆಯಲ್ಲಿ ಪ್ರತೀದಿನ ಸರಾಸರಿ 11,607 ಕೆ.ಜಿ. ಮೀನುಗಳು ಸಿಗುತ್ತಿವೆ. ಕುಂದಾಪುರ ಹಾಗೂ ಉಡುಪಿ ತಾಲೂಕಿನಲ್ಲಿ ಸಮುದ್ರಕ್ಕೆ ಇಳಿಯುತ್ತಿರುವ ದೋಣಿಗಳು ದಿನಕ್ಕೆ ಸರಾಸರಿ 7-8 ಟನ್ ಮೀನುಗಳು ಹಿಡಿದು ತರುತ್ತಿವೆ. ಕಳೆದ ಮೂರು ದಿನಗಳಿಂದ ಪ್ರತಿದಿನ 935 ದೋಣಿಗಳು ಮೀನುಗಾರಿಕೆ ನಡೆಸುತ್ತಿವೆ. ಕುಂದಾಪುರದಿಂದ 700, ಉಡುಪಿಯಿಂದ 200 ಬೋಟುಗಳು ಮಾತ್ರ ಇವೆ.

    ಮೀನಿನ ಪ್ರಮಾಣದಲ್ಲಿ ಏರಿಕೆ: ಜಿಲ್ಲೆಯಲ್ಲಿ ಮೀನಿನ ಕೊರತೆ ಇದ್ದರೂ ದಿನ ಕಳೆದಂತೆ ಲಭ್ಯತೆ ಹಿಂದೆಗಿಂತಲೂ ಹೆಚ್ಚಾಗುತ್ತಿವೆ. ಆರಂಭದ ಐದು ದಿನಗಳಲ್ಲಿ 4 ಸಾವಿರದಿಂದ 10 ಸಾವಿರ ಕೆ.ಜಿ.ಯಷ್ಟು, ಇತ್ತೀಚೆಗೆ ಕೆಲ ದಿನಗಳಿಂದ 11 ಸಾವಿರದಿಂದ 15 ಸಾವಿರ ಕೆ.ಜಿ ಮೀನಿನ ಲಭ್ಯತೆ ಪ್ರಮಾಣ ಏರಿಕೆಯಾಗಿದೆ. ಏ.20ರಂದು 15,950 ಕೆ.ಜಿ. ಮೀನುಗಳು ಲಭ್ಯವಾಗಿವೆ. ಆ ದಿನ ಕುಂದಾಪುರದಲ್ಲಿ 680 ಹಾಗೂ ಉಡುಪಿಯಲ್ಲಿ 186 ದೋಣಿಗಳು ಮೀನುಗಾರಿಕೆ ನಡೆಸಿವೆ ಎಂದು ಇಲಾಖಾ ಅಂಕಿಅಂಶಗಳು ತಿಳಿಸುತ್ತವೆ. ಏ.25ರಂದು ಕುಂದಾಪುರ-750, ಉಡುಪಿ-185 ದೋಣಿಗಳಲ್ಲಿ ಮೀನುಗಾರಿಕೆ ನಡೆಸಿದ್ದು, 13,758 ಕೆ.ಜಿ. ಮೀನುಗಳು ಲಭ್ಯವಾಗಿವೆ. 26ರಂದು ಕುಂದಾಪುರ- 740, ಉಡುಪಿ- 195 ದೋಣಿಗಳು(14390 ಕೆ.ಜಿ.) ಮತ್ತು 27ರಂದು ಕುಂದಾಪುರ-728, ಉಡುಪಿ-207 ದೋಣಿಗಳು(14950 ಕೆ.ಜಿ.) ಕಡಲಿಗೆ ಇಳಿದಿವೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಗಣೇಶ್ ಮಾಹಿತಿ ನೀಡಿದರು.

    ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಸದ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರರಿಗೆ ಮೀನು ಸಿಗುತ್ತಿಲ್ಲ. ದಿನಕ್ಕೆ ಏಳೆಂಟು ಟನ್ ಮೀನು ಸಿಗುತ್ತಿದೆ. ಮೀನು ಅಗತ್ಯ ಪದಾರ್ಥ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಂದಲೂ ಮೀನುಗಳು ಜಿಲ್ಲೆಗೆ ಬರುತಿದ್ದು. ಫಿಶ್ ಫ್ಯಾಕ್ಟರಿಗೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
    -ಗಣೇಶ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts