ಮಹಿಳೆ ಮೇಲೆ ಡೆಲಿವರಿ ಬಾಯ್ ಅತ್ಯಾಚಾರ: ಪೊಲೀಸ್ ಫೈರಿಂಗ್​- ಆರೋಪಿ ಅರೆಸ್ಟ್​

Sumit singh
Published on

ನವದೆಹಲಿ: ದಿನಸಿ ಸಾಮಗ್ರಿಗಳನ್ನು ತಲುಪಿಸಲು ಹೋಗಿದ್ದ ಯುವಕನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನೋಯ್ಡಾದಲ್ಲಿ ನಡೆದಿದ್ದು, ಪೊಲೀಸರ ಪಿಸ್ತೂಲ್​ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಗ್ರೇಟರ್ ನೋಯ್ಡಾದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮಹಿಳೆ ತನ್ನ ಮೊಬೈಲ್ ಆ್ಯಪ್‌ನಿಂದ ದಿನಸಿ ವಸ್ತುಗಳ ಖರೀದಿಗೆ ಆರ್ಡರ್ ಮಾಡಿದ್ದರು. ಆರೋಪಿ ಸುಮಿತ್ ಸಿಂಗ್‌ಗೆ ವಸ್ತುಗಳನ್ನು ತಲುಪಿಸಲು ಅಪ್ಲಿಕೇಶನ್‌ನಿಂದ ನಿಯೋಜಿಸಲಾಗಿದೆ. ಆತ ನಿಗದಿತ ಸ್ಥಾನವನ್ನು ತಲುಪಿದಾಗ, ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾನೆ. ಬಳಿಕ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಶುಕ್ರವಾರ ಈ ಘಟನೆ ನಡೆದಿದ್ದು, ಅದೇ ದಿನ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಹಿಡಿಯಲು ಹಲವು ತಂಡಗಳನ್ನು ರಚಿಸಿದ್ದು, ಅಂತಿಮವಾಗಿ ಗ್ರೇಟರ್ ನೋಯ್ಡಾದ ವಸತಿ ಪ್ರದೇಶದಲ್ಲಿ ಆರೋಪಿ ಪತ್ತೆಯಾಗಿದ್ದ.

ಆತನನ್ನು ಬಂಧಿಸಲು ಪೊಲೀಸ್ ತಂಡವು ಸ್ಥಳಕ್ಕೆ ಬಂದಾಗ, ಸುಮಿತ್ ಕಾನ್‌ಸ್ಟೆಬಲ್‌ನಿಂದ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಿದ್ದ. ಬಳಿಕ ಆತನನ್ನು ಹಿಡಿಯಲು ಪೊಲೀಸ್​ ತಂಡಗಳನ್ನು ರಚಿಸಲಾಗಿತ್ತು. ಭಾನುವಾರ ಪೊಲೀಸ್ ತಂಡಗಳು ಅವನಿದ್ದ ಕಡೆ ಬಂದಾಗ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ ಅವನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.

ಸುಮಿತ್ ನನ್ನು ಬಂಧಿಸಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಹಿಂದೆ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇವನನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net