More

    ಇಂದು ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ಮುಖಾಮುಖಿ

    ಮುಂಬೈ: ಗೆಲುವಿನ ಲಯಕ್ಕೆ ಮರಳುವ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಬುಧವಾರ ಎದುರಾಗಲಿವೆ. ಡೆಲ್ಲಿ ಆಲ್ರೌಂಡರ್ ಮಿಚೆಲ್ ಮಾರ್ಷ್‌ಗೆ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ, ತಂಡದಲ್ಲಿ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಇದರಿಂದ ಕೋವಿಡ್ ಆತಂಕದ ಛಾಯೆ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪುಣೆಯಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮುಂಬೈನ ಬ್ರಬೋರ್ನ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದ್ದು, ಡೆಲ್ಲಿ ತಂಡದ ಇತರ ಆಟಗಾರರ ವರದಿ ನೆಗೆಟಿವ್ ಬಂದಿರುವುದು ಸಮಾಧಾನಕರ ಸಂಗತಿ. ಹಿಂದಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಉಭಯ ತಂಡಗಳು ಗೆಲುವಿನ ಒತ್ತಡದಲ್ಲಿವೆ. ಗಾಯದ ಸಮಸ್ಯೆಯಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಮಯಾಂಕ್ ಅಗರ್ವಾಲ್ ಚೇತರಿಕೆ ಕಂಡಿದ್ದು, ಪಂಜಾಬ್ ತಂಡದ ಅಗ್ರ ಕ್ರಮಾಂಕದ ಬಲ ಹೆಚ್ಚಿಸಿದೆ.

    * ಡೆಲ್ಲಿಗೆ ದಿಢೀರ್ ಕುಸಿತದ ಭೀತಿ
    ಆರಂಭಿಕ ಹಂತದಲ್ಲಿ ಪೃಥ್ವಿ ಷಾ ಹಾಗೂ ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡುತ್ತಿದ್ದರೂ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡಕ್ಕೆ ಹಿನ್ನಡೆಯಾಗುತ್ತಿದೆ. ರೊವ್ಮನ್ ಪೊವೆಲ್ ಇದುವರೆಗೂ ಮಿಂಚಿಲ್ಲ. ಲಲಿತ್ ಯಾದವ್ ನಿಸ್ತೇಜ ನಿರ್ವಹಣೆ ಮುಂದುವರಿದಿದೆ. ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಆಲ್ರೌಂಡರ್‌ಗಳಾಗಿ ಗುರುತಿಸಿಕೊಂಡರೂ ಬ್ಯಾಟಿಂಗ್‌ನಲ್ಲಿ ಲಯಕಂಡುಕೊಂಡಿಲ್ಲ. ಮುಸ್ತಾಫಿಜರ್ ರೆಹಮಾನ್, ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಗಮನಸೆಳೆಯುತ್ತಿದ್ದಾರೆ.

    * ಪಂಜಾಬ್‌ಗೆ ಮಯಾಂಕ್ ಬಲ
    ಆದರೆ, ಮಯಾಂಕ್ ನಿರ್ವಹಣೆ ಮಾತ್ರ ಲೀಗ್‌ನಲ್ಲಿ ಇದುವರೆಗೂ ಹೇಳಿಕೊಳ್ಳುವಂತಿಲ್ಲ. ಅನುಭವಿ ಶಿಖರ್ ಧವನ್, ಜಿತೀಶ್ ಶರ್ಮ, ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್‌ನಲ್ಲಿ ಆಸರೆಯಾಗುತ್ತಿದ್ದಾರೆ. ಕಗಿಸೊ ರಬಾಡ, ವೈಭವ್ ಅರೋರ, ಅರ್ಷ್‌ದೀಪ್ ಸಿಂಗ್ ಹಾಗೂ ರಾಹುಲ್ ಚಹರ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

    ಟೀಮ್ ನ್ಯೂಸ್:
    ಡೆಲ್ಲಿ: ಮಿಚೆಲ್ ಮಾರ್ಷ್ ಅಲಭ್ಯತೆಯಿಂದಾಗಿ ಮೂರನೇ ಕ್ರಮಾಂಕದಲ್ಲಿ ಮಂದೀಪ್ ಸಿಂಗ್ ಅಥವಾ ಸರ್ಫ್ರಾಜ್ ಖಾನ್ ಕಣಕ್ಕಿಳಿಯಬಹುದು.

    ಪಂಜಾಬ್ ಕಿಂಗ್ಸ್:
    ಮಯಾಂಕ್ ಅಗರ್ವಾಲ್ ತಂಡಕ್ಕೆ ವಾಪಸಾದರೆ ಆರಂಭಿಕ ಪ್ರಭ್‌ಸಿಮ್ರಾನ್ ಸಿಂಗ್ ಹೊರಗುಳಿಯಲಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 28, ಪಂಜಾಬ್: 15, ಡೆಲ್ಲಿ: 13

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts