More

    ದೆಹಲಿ ಅಜ್ಜನ ರಾಷ್ಟ್ರಪ್ರೇಮದ ಸೈಕಲ್ ಯಾತ್ರೆ

    ವಿಜಯವಾಣಿ ವಿಶೇಷ ತೇರದಾಳ
    ಅಖಂಡ ಹಿಂದು ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಹಿರಿಯ ಜೀವಿಯೊಬ್ಬರು ಸೈಕಲ್ ಮೂಲಕ ಸಾವಿರಾರು ಕಿ.ಮೀ ಅಂತರ ದೆಹಲಿಯಿಂದ ಅಖಂಡ ಭಾರತವನ್ನು ಸಂಚರಿಸುತ್ತಿರುವುದು ಹಿಂದು ಅಭಿಮಾನಿಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ.
    ಜೀವನಪ್ರಕಾಶ ಎಂಬ 73ನೇ ವಯಸ್ಸಿನ ಹಿರಿಯ ಜೀವಿ ದೆಹಲಿಯಿಂದ ಹೊರಟು ಚಿಕ್ಕೊಡಿ ಮಾರ್ಗವಾಗಿ ಭಾನುವಾರ ಮಹಾಲಿಂಗಪುರ ಮಾರ್ಗವಾಗಿ ರಬಕವಿ-ಬನಹಟ್ಟಿ ಮೂಲಕ ಜಮಖಂಡಿಯತ್ತ ಸಾಗಿದರು.

    ಮೈಕೊರೆಯುವ ಚಳಿಯಲ್ಲಿ ಮುಂದುವರಿದ ಇವರ ಯಾತ್ರೆ ಭಾನುವಾರ ಎರಡು ತಿಂಗಳು ಆರನೇ ದಿನ ಪೂರೈಸಿದೆ. ಜಮಖಂಡಿ-ವಿಜಯಪುರ ಮಾರ್ಗವಾಗಿ ಬೀದರದ ಗುರುದ್ವಾರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ತೆಲಂಗಾಣ ರಾಜ್ಯ ಸೇರಿ ವಿವಿಧ ಮಾರ್ಗಗಳ ಮೂಲಕ ಅಯೋಧ್ಯೆ ಶ್ರೀರಾಮ ದರ್ಶನ ಪಡೆದುಕೊಳ್ಳಲಿದ್ದಾರೆ. ಅಂದಾಜು ಒಂದು ತಿಂಗಳು ಪ್ರಯಾಣ ಮುಂದುವರಿಯಲಿದೆ ಎನ್ನಲಾಗಿದೆ.

    ಏಕೆ ಈ ಯಾತ್ರೆ: 1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನ ಮೂಲ ಕುಟುಂಬದವರಾದ ಜೀವನಪ್ರಕಾಶ ಕುಟುಂಬಸ್ಥರು ಅಲ್ಲಿನ ಮೂಲಭೂತವಾದಿಗಳಿಂದ ದಬ್ಬಾಳಿಕೆಗೆ ಒಳಗಾಗಿ, ಅವರ ಅಣ್ಣ ಮತ್ತು ಅಕ್ಕ ಇಬ್ಬರೂ ಹತ್ಯೆಗೊಳಗಾಗುತ್ತಾರೆ. ಇದನ್ನು ಕಂಡ ಜೀವನಪ್ರಕಾಶ ಅಲ್ಲಿಂದ ತೆರಳಿ ಭಾರತದ ಉತ್ತರಪ್ರದೇಶಕ್ಕೆ ಆಗಮಿಸಿ ವಾಸವಾಗಿದ್ದಾಗಿ ತಿಳಿಸಿದರು. ಹೀಗಾಗಿ ಕುಟುಂಬ ಕಳೆದುಕೊಂಡ ಜೀವನಪ್ರಕಾಶ ಬದುಕಿರುವವರೆಗೂ ಅಖಂಡ ಹಿಂದು ರಾಷ್ಟ್ರ ನಿರ್ಮಾಣದ ಸಂಕಲ್ಪ ಹೊಂದಿದ್ದಾರೆ. ಭಾರತದ ದೆಹಲಿಯಲ್ಲಿ ನೆಲೆ ನಿಂತು ಹಿಂದುತ್ವದ ಪ್ರಸಾರ ಮತ್ತು ರಾಷ್ಟ್ರದ ಅಭಿಮಾನದ ಬದುಕು ಸಾಗಿಸುತ್ತಾ ಬಂದಿದ್ದು, ಯಾವುದೇ ಪ್ರಚಾರ ಬಯಸದೆ ಅಖಂಡ ಭಾರತದಲ್ಲೆಡೆ ಸೈಕಲ್ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದು, ಎಂತವರಲ್ಲೂ ರೋಮಾಂಚನಗೊಳಿಸಿದೆ.

    ಸೈಕಲ್ ಜಾಗೃತಿ: ಚಿಕ್ಕದಾದ ಸೈಕಲ್‌ಗೆ ಭಾರತ ಧ್ವಜ, ಭಗವಾ ಧ್ವಜ ಹಾಗೂ ಸೈನಿಕ ಚಿನ್ಹೆ ಸೂಚಿಸುವ ನಾಲ್ಕು ಧ್ವಜ ಕಟ್ಟಲಾಗಿದೆ. ಹವಾ ತುಂಬಲು ಪಂಪ್, ಮುಂಭಾಗದ ಬ್ಯಾಗ್‌ನಲ್ಲಿ ಕಾವಿ ಬಟ್ಟೆ, ಹಿಂಭಾಗದಲ್ಲಿ ಹಾಸಿಗೆ, ನೀರಿನ ಬಾಟಲ್ ಅದರ ಹಿಂದೆ ಕಾಣುವಂತೆ ಅಖಂಡ ಭಾರತ ಸೈಕಲ್ ಯಾತ್ರೆ ಎಂಬ ನಾಮಲಕ ಅಳವಡಿಸಿದ್ದಾರೆ. ಸ್ವತಃ ಕಾವಿಧರಿಸಿದ ಜೀವನಪ್ರಕಾಶ ಯುವಕರಂತೆ ಸೈಕಲ್ ತುಳಿಯುವ ಉತ್ಸಾಹವು ಬೆರಗು ಮೂಡಿಸುತ್ತದೆ. ಹಿಂದಿ ಭಾಷೆಯಲ್ಲಿ ಮಾತನಾಡುವ ಅವರು ಬಹಳಷ್ಟು ಸರಳತೆ ಮತ್ತು ಸಂಯಮವನ್ನು ಅಳವಡಿಸಿಕೊಂಡಿರುವುದು ಕಾಣಸಿಗುತ್ತದೆ.

    ಹಿಂದುಪರ ಯುವಕರಿಂದ ಗೌರವ ಸನ್ಮಾನ: ಮಾರ್ಗ ಮಧ್ಯೆ ಸೈಕಲ್ ತುಳಿಯುತ್ತಾ ಸಾಗುತ್ತಿದ್ದ ಅಜ್ಜನನ್ನು ನಮ್ಮ ವರದಿಗಾರ ಪ್ರವೀಣ ಬುದ್ನಿ ಮಾತನಾಡಿಸಿದಾಗ, ಅಜ್ಜನ ರಾಷ್ಟ್ರಪ್ರೇಮದ ಅನಾವರಣವಾಯಿತು. ಅಲ್ಲಿಂದ ಹಿಂದುಪರ ಯುವಕರಿಗೆ ಮಾಹಿತಿ ನೀಡಿದಾಗ ಬನಹಟ್ಟಿಯ ಮಹಾದೇವಪ್ಪ ಬಂಗಲೆ ಬಳಿ ಅವರನ್ನು ಗೌರವಪೂರಕವಾಗಿ ಸನ್ಮಾನಿಸಿ, ರಾಷ್ಟ್ರಪ್ರೇಮ ಹಾಗೂ ಹಿಂದುಪರ ಘೋಷಣೆ ಹಾಕಲಾಯಿತು.
    ಹಿಂದು ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಐನೂರು ವರ್ಷಗಳ ನಂತರ ಶ್ರೀರಾಮ ಮಂದಿರ ಒಂದುಕಡೆ, ಇನ್ನೊಂದೆಡೆ ಉತ್ತರಪ್ರದೇಶದ ಜೀವನಪ್ರಕಾಶ ಅವರು ಭಾರತದಲ್ಲಿ ಹಿಂದು ರಾಷ್ಟ್ರವಾಗಬೇಕು. ದೇಶದ ಸಂಸ್ಕೃತಿ, ಸಂಸ್ಕಾರ ನೆಲೆಗೊಳ್ಳುವ ಉದ್ದೇಶದಿಂದ ಬನಹಟ್ಟಿಯ ಕಾಡಸಿದ್ಧೇಶ್ವರ ಪುಣ್ಯಭೂಮಿಗೆ ಆಗಮಿಸಿದ್ದು ಖುಷಿ ತಂದಿದ್ದು, ಅವರ ಪ್ರಯಾಣ ಯಶಸ್ವಿಯಾಗಲಿ ಎಂದರು.

    ಬಸವರಾಜ ಮನ್ಮಿ, ಬಜರಂಗದಳದ ರಬಕವಿ-ಬನಹಟ್ಟಿ ಪ್ರಖಂಡ ಸಂಚಾಲಕ ಮಲ್ಲಿಕಾರ್ಜುನ ಸವದಿ, ಅಶೋಕ ರಾವಳ, ರಾಚಪ್ಪ ಶಿರೋಳ, ಚೆನ್ನಾಳ ಇತರರಿದ್ದರು. ಅಭಿಮಾನಿ ಯುವತಿಯೊಬ್ಬಳು ಅಜ್ಜನ ರಾಷ್ಟ್ರಪ್ರೇಮಕ್ಕೆ ತಲೆಬಾಗಿ ಕಾಲಿಗೆ ನಮಸ್ಕರಿಸುವುದು ರಾಷ್ಟ್ರೀಯತೆಯ ಭಾವ ಮೂಡುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts