More

    ನದಿ ತಿರುವು ವಿರೋಧಿಸಿ ಸಿಎಂ ಬಳಿ ನಿಯೋಗ

    ಕಾರವಾರ: ಬೇಡ್ತಿ ಕಣಿವೆಯ ಜಲ ಸಂರಕ್ಷಣೆಗಾಗಿ ಹೋರಾಟ ನಡೆಸಲು ಜಿಲ್ಲೆಯಲ್ಲಿ ಮತ್ತೆ ಸಿದ್ಧತೆ ನಡೆದಿದೆ. ಇದೇ ವಾರ ಸಿಎಂ ಬಳಿ ನಿಯೋಗ ತೆರಳಲಾಗುತ್ತಿದ್ದು, ಬೇಡ್ತಿ-ವರದಾ ನದಿ ಜೋಡಣೆಯ ಡಿಪಿಆರ್ ತಯಾರಿಸುವ ಪ್ರಸ್ತಾಪವನ್ನು ಕೈಬಿಡುವಂತೆ ಮನವಿ ಮಾಡಲು ತೀರ್ವನಿಸಲಾಗುತ್ತಿದೆ. ಮುಂದೆ ಆಡಳಿತದ ನಡೆಯನ್ನು ನೋಡಿ, ಹೋರಾಟದ ರೂಪಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.

    ಯೋಜನೆಗೆ ವಿರೋಧವೇಕೆ..?: ಜಿಲ್ಲೆಯ ನೀರಿನ ಬೇಡಿಕೆ ಈಡೇರಿಸಲು ಬೇಡ್ತಿ ವಿಫಲವಾಗಿದೆ. ಹೀಗಿರುವಾಗ ಹೊರ ಜಿಲ್ಲೆಗೆ ಇಲ್ಲಿನ ನೀರು ಕೊಂಡೊಯ್ದರೆ ಇಲ್ಲಿನ ಜನರ ಪರಿಸ್ಥಿತಿ ಏನು..? ಎಂಬುದು ಬೇಡ್ತಿ ಕೊಳ್ಳದ ನಿವಾಸಿಗಳ ಮೂಲಭೂತ ಪ್ರಶ್ನೆ.

    • ಬೇಡ್ತಿಯ ಭಾಗವಾದ ಕೆಂಗ್ರೆ ಹೊಳೆಯ ನೀರನ್ನು ಶಿರಸಿ ನಗರಕ್ಕೆ ಕುಡಿಯುವ ನೀರಿಗಾಗಿ ಕೊಂಡೊಯ್ಯಲಾಗಿದೆ. ಆದರೆ, ಬೇಸಿಗೆಯಲ್ಲಿ ಹೊಳೆಯಲ್ಲಿ ನೀರು ಕಡಿಮೆಯಾಗುತ್ತದೆ. ಶಿರಸಿ ನಗರಕ್ಕೆ ನೀರಿನ ಕೊರತೆ ಉಂಟಾಗುತ್ತದೆ. ಶಿರಸಿಗೆ ಬೇರೆಡೆಯಿಂದ ನೀರು ತರಲು ಯೋಜಿಸಲಾಗುತ್ತಿದೆ.
    • ಯಲ್ಲಾಪುರ ನಗರಕ್ಕೆ ಬೇಡ್ತಿಯಿಂದ ನೀರು ಕೊಂಡೊಯ್ಯಲಾಗಿದೆ. ಈ ಯೋಜನೆಯೂ ಎರಡೇ ವರ್ಷದಲ್ಲಿ ವಿಫಲವಾಗಿದೆ.
    • ಕಾರವಾರ, ಅಂಕೋಲಾ ನಗರಕ್ಕೆ ಗಂಗಾವಳಿ (ಬೇಡ್ತಿಯನ್ನು ಕರಾವಳಿಯಲ್ಲಿ ಗಂಗಾವಳಿ ಎಂದು ಕರೆಯಲಾಗುತ್ತದೆ) ನೀರನ್ನು ಕೊಂಡೊಯ್ಯಲಾಗಿದೆ. ಆದರೆ, ಇನ್ನಷ್ಟು ನೀರಿನ ಬೇಡಿಕೆ ಇರುವುದರಿಂದ ಚೆಕ್ ಡ್ಯಾಂ ನಿರ್ವಣಕ್ಕೆ ಸಿದ್ಧತೆ ನಡೆದಿದೆ.
    • ಕುಡಿಯುವ ನೀರಿನ ಯೋಜನೆಗೆ ತೊಂದರೆ ಆಗುತ್ತದೆ ಎಂಬ ಕಾರಣ ನೀಡಿ ಬೇಸಿಗೆ ಬಂದ ಕೂಡಲೆ ಶಿರಸಿಯ ಕೆಂಗ್ರೆ ಸಮೀಪ ಹಾಗೂ ಅಂಕೋಲಾದಲ್ಲಿ ಹೆಗ್ಗಾರ, ಕಲ್ಲೇಶ್ವರ ಭಾಗದಲ್ಲಿ ನದಿಗೆ ಅಳವಡಿಸಿದ ಕೃಷಿ ಪಂಪ್​ಸೆಟ್ ಬಳಕೆಗೆ ನಿಷೇಧ ಹೇರಲಾಗುತ್ತದೆ.

    ಸದ್ಯ 12 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡ್ತಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ ನೀರು ಹರಿಸುವ ದೊಡ್ಡ ಮಟ್ಟದ ಯೋಜನೆ ಇದಾಗಿದೆ. ಯೋಜನೆ ವಿಫಲವಾದರೆ, ಇದರ ಜವಾಬ್ದಾರಿ ಹೊರುವವರು ಯಾರು? ಅವರಿಗೇನು ಶಿಕ್ಷೆ ಎಂಬುದು ನಮ್ಮ ಪ್ರಶ್ನೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಒರೆಸುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯ ನೀರಿನ ಬೇಡಿಕೆಯ ಬಗ್ಗೆ ಮೊದಲು ಸಮಗ್ರ ಸಮೀಕ್ಷೆ ನಡೆಯಲಿ. ನಂತರ ಬೇರೆ ಜಿಲ್ಲೆಗೆ ನೀರೊಯ್ಯಲು ಯೋಜಿಸಲಿ.

    ನಾರಾಯಣ ಹೆಗಡೆ, ಗಡಿಕೈ

    ಕಾರವಾರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ನಮ್ಮ ತೋಟಗಳಿಗೆ ಗಂಗಾವಳಿ ನದಿಯಿಂದ ನೀರು ಪಡೆಯುವುದನ್ನು ನಿಷೇಧಿಸಲಾಗಿತ್ತು. ನ್ಯಾಯಾಲಯದ ಮೊರೆ ಹೋಗಿ ನಾವು ನೀರು ಪಡೆಯಬೇಕಾಯಿತು. ಸ್ಥಳೀಯ ಬಳಕೆಗೇ ಸಿಗದ ಬೇಡ್ತಿ ನೀರನ್ನು ಉತ್ತರ ಕರ್ನಾಟಕದ ಇತರ ಭಾಗಗಳಿಗೆ ಕೊಂಡೊಯ್ಯುತ್ತೇವೆ ಎಂಬುದು ಹಾಸ್ಯಾಸ್ಪದ. ಇದೊಂದು ಅವೈಜ್ಞಾನಿಕ ಯೋಜನೆ. ಯೋಜನೆ ಜಾರಿಯಿಂದ ನಮ್ಮ ಭಾಗದ ಕೃಷಿಕರಿಗೆ ಭಾರಿ ಅನ್ಯಾಯವಾಗಲಿದೆ. ಯೋಜನೆ ವಿರುದ್ಧ ಹೋರಾಡುತ್ತೇವೆ.

    ಶಿವರಾಮ ಗಾಂವಕರ್ , ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts