More

    ಸಂಕಟಹರ ವೆಂಕಟರಮಣ ಗೋವಿಂದ

    ಕೆ.ಕೆಂಚಪ್ಪ ಮೊಳಕಾಲ್ಮೂರು
    ಸುಮಾರು 200 ವರ್ಷಗಳ ಇತಿಹಾಸ ಸಾರುವ ಇಲ್ಲಿನ ಕೋಟೆ ಬಡಾವಣೆಯ ಪೂರ್ವ ದಿಕ್ಕಿನಲ್ಲಿ ನೆಲೆಸಿರುವ ಶ್ರೀ ವೆಂಕಟರಮಣ ಸ್ವಾಮಿಯ ಸುಕ್ಷೇತ್ರ ಚಿಕ್ಕ ತಿರುಪತಿ ಎಂದು ಪ್ರತೀತಿ ಪಡೆದಿದ್ದು, ಮೂಲ ತಿರುಪತಿಯ ಮಹತ್ವವನ್ನು ಬಿಂಬಿಸುತ್ತಿದೆ.

    ನಾಡಿನ ಭಕ್ತಕೋಟಿಯ ಕೋರಿಕೆ ಈಡೇರಿಸುವ ಸುಕ್ಷೇತ್ರವಿದು. ಭಕ್ತರ ಕಷ್ಟ, ಕಾರ್ಪಣ್ಯಗಳ ನಿವಾರಿಸಲು ಒಲಿದು ಬಂದ ವೆಂಕಟರಮಣ ಎಂದೇ ಕರೆಯಲಾಗುತ್ತಿದೆ. ಸನಾತನವಾಗಿರುವ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಲೌಕಿಕ ತತ್ವಗಳ ಸತ್ಯ, ಸತ್ಕಾರ‌್ಯಗಳ ನಂಬಿಕೆಯಲ್ಲಿ ಈ ದೇವಸ್ಥಾನಕ್ಕೆ ನಡೆದುಕೊಳ್ಳುವವರ ಭಕ್ತರ ಸಂಖ್ಯೆ ಸಾಕಷ್ಟಿದೆ. ಅಲ್ಲದೆ, ಮನದಲ್ಲಿ ಚಿಕ್ಕ ತಿರುಪತಿ ಎಂಬ ಅಚಲವಾದ ನಂಬಿಕೆ ಬೇರೂರಿದೆ.

    ಪಲ್ಲಕ್ಕಿ ಸೇವೆ: ಮಾಧ್ವ ಸಂಪ್ರದಾಯದ ಪ್ರಕಾರ ಯುಗಾದಿ, ನವರಾತ್ರಿ, ವಿಜಯದಶಮಿ, ಆಯುಧಪೂಜೆ ದಿನ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಹಾಗೂ ಶ್ರಾವಣ ಮಾಸದಲ್ಲಿ ಹೆಣ್ಣು ಮಕ್ಕಳು ವ್ರತಾಚರಣೆ ಹಾಗೂ ವಿಶೇಷ ಧಾರ್ಮಿಕ ಪೂಜಾ ಕಾರ್ಯ ನಡೆಯುತ್ತವೆ. ಭಕ್ತಿ ಪೂರ್ವಕವಾಗಿ ಸ್ವಾಮಿಯ ಕೃಪೆ ಸಿಕ್ಕರೆ ಸಾಕು ಮನೆಯಲ್ಲಿ ಶಾಂತಿ, ವ್ಯವಹಾರ, ಶುಭ ಕಾರ್ಯಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ.

    ದೇವರ ರಂಗಮ್ಮ ಅವರ ಭಕ್ತಿಯನ್ನು ಮೆಚ್ಚಿದ ಬಾಲ ಗೋಪಾಲ ಇಲ್ಲಿ ಬಂದು ನೆಲೆಗೊಂಡಿದ್ದಾನೆ ಎಂಬ ಪ್ರತೀತಿ ಇದೆ. ದೇವಸ್ಥಾನದ ಆವರಣದಲ್ಲಿ ಈಶ್ವರ ಲಿಂಗ, ನಂದಿಯ ಏಕ ಶಿಲೆ ಪ್ರತಿಮೆ ಕೆತ್ತನೆ ಮಾಡಲಾಗಿದೆ.

    ಹಿನ್ನೆಲೆ:
    ಸಾಹಿತ್ಯ ದಿಗ್ಗಜ ತಳುಕಿನ ಶ್ರೀ ವೆಂಕಣ್ಣಯ್ಯ, ಶ್ರೀ ತ.ಸು.ಶಾಮರಾವ್ ಹಾಗೂ ತರಾಸು ಅವರ ಹಿರಿಯ ತಲೆಮಾರಿನ ಮನೆತನದ ದೇವರ ಗಂಗಮ್ಮ ವಿವಾಹ ಆದ ನಂತರ ಅವರ ಕುಟುಂಬವು ಮೊಳಕಾಲ್ಮೂರಿನಲ್ಲಿ ನೆಲೆಸಿತ್ತು. ಗಂಗಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ವಿಗ್ರಹವನ್ನು ಸಣ್ಣ ಕಲ್ಲಿನಲ್ಲಿ ಮಾಡಿಕೊಂಡು ಆಹಾರ, ನಿದ್ರೆ ಲೆಕ್ಕಿಸದೆ ನಿತ್ಯ ಪೂಜೆ ಮಾಡುತ್ತಿದ್ದರು. ಕುಟುಂಬಸ್ಥರು ದೇವರ ಗಂಗಮ್ಮನನ್ನ ಬಿಟ್ಟು ತಿರುಪತಿಗೆ ಹೋದಾಗ ಸ್ವಾಮಿಯ ದರ್ಶನ ಭಾಗ್ಯ ನನಗಿಲ್ಲ ಎಂದು ಕೊರಗುತ್ತ ಮೊಸರು ಕಡೆಯುತ್ತಿದ್ದಾಗ ಕೃಷ್ಣ ಬಾಲಲೀಲೆ ತೋರಿ ದರ್ಶನ ಕೊಡುತ್ತಿದ್ದಂತೆ. ಇಲ್ಲೇ ನೆಲೆಸಬೇಕೆಂಬ ಕೋರಿಕೆಗೆ ಒಪ್ಪಿದ ಎಂಬ ಕತೆ ಇದೆ. ಪಕ್ಕದಲ್ಲೇ ಮಂತ್ರಾಲಯ ಗುರುರಾಘವೇಂದ್ರ ಮೃತ್ತಿಕಾ ಬೃಂದಾವನ ಮಠ ಸ್ಥಾಪನೆಗೂ ತರಾಸು ಮನೆತನದ ಕೃಪೆ ಇದೆ ಎನ್ನಲಾಗಿದೆ.

    ————-

    ವೆಂಕಟರಮಣಸ್ವಾಮಿ ಆರಾಧಕರಿಗೆ ಕಷ್ಟ ನಿವಾರಣೆ ಆಗಿ ಸುಖ ಜೀವನದ ಕೃಪೆ ಸಿಗಲಿದೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ದೀಪದ ಪೂಜೆ ನೆರವೇರಿಸುವ ವಾಡಿಕೆ ಇದೆ. ನಾಡಿನ ಭಕ್ತರ ಕೋರಿಕೆ ಈಡೇರಿಸುವ ಪುಣ್ಯಕ್ಷೇತ್ರ ಇದಾಗಿದೆ.
    ಲೀಲಾವತಿ ಪಾಳೇಗಾರ ಸಿದ್ದಣ್ಣ ಕೋಟೆ ಬಡಾವಣೆ ನಿವಾಸಿ.

    ————-
    ಸ್ವಾಮಿಯ ದರ್ಶನಕ್ಕೆ ತಿರುಪತಿಗೆ ಹೋಗಬೇಕಂತೇನಿಲ್ಲ. ಭಕ್ತಿಯಿಂದ ಇಲ್ಲಿನ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಾಲ ಗೋಪಾಲನಿಗೆ ತಲೆಬಾಗಿ ಭಕ್ತಿ ಮೆರೆದರೆ ಎಲ್ಲವನ್ನೂ ಕರುಣಿಸಲಿದ್ದಾನೆ.
    ಡಾ. ಪಿ.ಎಂ.ಮಂಜುನಾಥ ದೊಡ್ಡಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts