More

    ದೀಪಾವಳಿ ರಾಶಿ ಭವಿಷ್ಯ|ಇಂದಿನಿಂದ 2021ರ ನ. 5ರ ವರೆಗೆ…

    ದೀಪಾವಳಿ ರಾಶಿ ಭವಿಷ್ಯ|ಇಂದಿನಿಂದ 2021ರ ನ. 5ರ ವರೆಗೆ...

    ಶಾರ್ವರಿ ಸಂವತ್ಸರದ ದೀಪಾವಳಿಯಿಂದ (16 ನವೆಂಬರ್ 2020) ಪ್ಲವ ಸಂವತ್ಸರದ ದೀಪಾವಳಿಯ ತನಕ (5 ನವೆಂಬರ್ 2021)

    | ರಮ್ಯಾ ಗುಹಾ ದ್ವಾರಕಾನಾಥ್

    ಮೇಷ

    ಸೂರ್ಯನಿಗೆ ಉಚ್ಚರಾಶಿಯಾದ ಮೇಷವು ನಿಮ್ಮ ಜೀವನದಲ್ಲಿ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಈಗಾಗಲೇ ರಾಹು-ಕೇತು ಬದಲಾಗಿದ್ದು, ನಿಮ್ಮ ಜೀವನಶೈಲಿ ಬದಲಾಯಿಸಿಕೊಂಡು ಏಕಾಗ್ರತೆಯಿಂದ ವಲ್ಲಿ-ದೇವಸೇನಾ ಸಹಿತನಾದ ಶ್ರೀ ಸುಬ್ರಹ್ಮಣ್ಯನನ್ನು ಆರಾಧಿಸಿ. 20ನೇ ನವೆಂಬರ್​ನಲ್ಲಿ ಗುರುವು ಶನಿಯೊಂದಿಗೆ ದಶಮ ಸ್ಥಾನಕ್ಕೆ ಬಂದು ಸೇರಿ ನೀಚನಾಗುತ್ತಾನೆ. ಆದರೂ ಗುರುವು ಯಾವುದೇ ಕೆಟ್ಟ ಫಲವನ್ನೂ ನೀಡುವುದಿಲ್ಲ. ಶನಿಯಿಂದ ಆಲಸ್ಯವಾಗಬಹುದು. ರಾಹುವಿನಿಂದ ಏಕಾಗ್ರತೆಯ ಕೊರತೆ ಉಂಟಾಗಬಹುದು. ಸಾಲ ಪಡೆಯಬೇಡಿ, ಸಾಲವಾಗಿ ಹಣ ನೀಡಬೇಡಿ. ಧರ್ಮಕ್ಕೆ ಕೈ ಮುಂದಿರಲಿ. ಶನಿಯ ಜತೆ ಇರುವ ಗುರುವಿಗೆ ಪೀಠಾಪುರದ ದತ್ತಾತ್ರೇಯನನ್ನು ಆರಾಧಿಸಿ, ದತ್ತ ಭಜನೆ ಮಾಡಿ. ದತ್ತ ಸಹಸ್ರನಾಮ ಪಠಿಸಿ. ಏಪ್ರಿಲ್ 5ರ ನಂತರ ಏಕಾದಶದಲ್ಲಿ ಗುರುವು ಬಂದು ಸೇರಿ ಭಾಗ್ಯದ ಬಾಗಿಲು ತೆರೆಯುತ್ತದೆ. ಜನ್ಮಕೊಟ್ಟ ತಾಯಿ, ಒಡಹುಟ್ಟಿದ ಸಹೋದರಿಯನ್ನು ನಮ್ರತೆಯಿಂದ ಭಕ್ತಿಪೂರ್ವಕವಾಗಿ ದೇವರಂತೆ ಕಾಣಿ, ಪೂಜಿಸಿ, ಗೌರವಿಸಿ. ಮೇಷಾಧಿಪತಿ ಕುಜ ಹಾಗೂ ಗುರು-ಶನಿ ಸಂಪರ್ಕ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಕುಂದು ಮಾಡುತ್ತದೆ. ಅನಗತ್ಯ ಖರ್ಚು ಬೇಡ. ಲಕ್ಷ್ಮಿಯನ್ನು ಆರಾಧಿಸಿ.

    ವೃಷಭ

    ಪಿತೃಗಳಿಗೆ ಪ್ರೀತಿಯಾದ ಹಲಸಿನಹಣ್ಣು ಬಹು ರುಚಿ. ಜೇನುತುಪ್ಪ ಸೇರಿಸಿದರೆ ಅದರ ಸವಿ ಮೈಮರೆಸುತ್ತದೆ. ಹಾಗೆಯೇ ನಿಮ್ಮ ಜೀವನ. ಒಂಬತ್ತರ ಗುರುವು ಬಂದು ಸೇರಿ, ಸ್ವಕ್ಷೇತ್ರ ಶನಿಯು ನಿಮ್ಮನ್ನು ಬಲಾಢ್ಯನನ್ನಾಗಿ ಮಾಡುತ್ತಾನೆ. ಲಗ್ನದಲ್ಲಿ ರಾಹುವಿರುವುದರಿಂದ ಆತಂಕ, ಸಮಯಕ್ಕೆ ಒದಗದ ಹಣಕಾಸಿನ ಚಿಂತೆ ನಿಮ್ಮನ್ನು ಕಾಡಬಹುದು. ರಾಹುವಿನಿಂದ ಹಳೆಯದಾದ ರೋಗಗಳು ಮರುಕಳಿಸದಂತೆ ನೋಡಿಕೊಳ್ಳಿ. ಧನ್ವಂತರಿಯನ್ನು ಪ್ರಾರ್ಥಿಸಿ. ನಿಮ್ಮ ಮನಸ್ಸು ದಾನ-ಧರ್ಮದ ಕಡೆಗಿರಲಿ. ನಿಮ್ಮನ್ನು ಪೋಷಿಸಿ ಬೆಳೆಸಿದ ಗುರುವಿಗೆ ನಮನವಿರಲಿ, ಪ್ರೀತಿಯಿರಲಿ. ಮರೆಯದೆ ದೀಪಾವಳಿ ದಿನದಂದು ಹನ್ನೊಂದು ದಾಳಿಂಬೆ ಪುಷ್ಪವನ್ನು ಈಶ್ವರನಿಗೂ, ಲಕ್ಷ್ಮಿಗೂ ಅರ್ಪಿಸಿ. ದುಡ್ಡಿನ ದಾಹವನ್ನು ನೀಗಿ ದಾರಿತೋರುತ್ತಾರೆ. ಬಂದವರಿಗೆ ಕೈಲಾದ ಸಹಾಯ ಮಾಡಿ. ವೈದ್ಯೋ ನಾರಾಯಣೋ ಹರಿಃ ಎನ್ನುವಂತೆ, ವೈದ್ಯರಲ್ಲದಿದ್ದರೆ ದೇವರ ಸೇವೆ ಮಾಡಿ. ಕುಂಭಕೋಣದ ಹತ್ತಿರವಿರುವ ಸ್ವಾಮಿನಾಥ(ಸುಬ್ರಹ್ಮಣ್ಯ) ದರ್ಶನ ಪಡೆದು ವಿಭೂತಿ ಅಭಿಷೇಕ ಮಾಡಿಸಿ. ದೇಶ ಕಟ್ಟಬೇಕೆಂಬ ಆಸೆಯಿದ್ದರೆ ದೇಶಸಂಚಾರ ಕೈಗೊಳ್ಳಿ. ಆರು ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ. ಜಯವು ನಿಮ್ಮದೇ.

    ಮಿಥುನ

    ನವೆಂಬರ್ 20ರವರೆಗೆ ಗುರುಬಲವಿದ್ದು, ಅಲ್ಲಿಂದ ಮುಂದೆ ಅತ್ತ ಸಾಗುತ್ತಾನೆ. ದೀಪಾವಳಿಯು ಸಾಲುಸಾಲು ದೀಪ ಹಚ್ಚಿ ಆನಂದಿಸುವ ಕಾಲ. ಮೈಮರೆತರೆ, ದೀಪದೊಂದಿಗೆ ಆಟವಾಡಿದರೆ ಹಾವಳಿಯಾದೀತು ಎಚ್ಚರ. ಗುರುವಿನ ಕರುಣೆಗೆ ನರಸೋಬವಾಡಿ ದತ್ತಾತ್ರೇಯನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಅಲ್ಲಿಯೇ ಪಂಚಗಂಗಾ ಸಂಗಮದಲ್ಲಿ ಸ್ನಾನಮಾಡಿ ಪ್ರಸಾದ ಸ್ವೀಕರಿಸಿ ಬಂದು ಹಿತ್ತಾಳೆ ಗಂಟೆಯನ್ನು ದಾನ ಮಾಡಿ. ಗುರುವಿನ ದರ್ಶನವಾದ ನಂತರ ಇಡಗುಂಜಿ ಮಹಾಗಣಪತಿ ಸನ್ನಿಧಿಗೆ ಹೋಗಿ ನಿಮ್ಮ ಪ್ರಾರ್ಥನೆ ಇಟ್ಟು ಬನ್ನಿ, ಕೆಲಸ ಕೈಗೂಡುವುದು. ದೀಪವು ಆರದಂತೆ ಬೆಳಕನ್ನು ಕೊಟ್ಟು ಮಹಾವಿಷ್ಣುವೇ ನಿಮ್ಮನ್ನು ಕಾಪಾಡುತ್ತಾನೆ. ಕಾರ್ತಿಕ ಸೋಮವಾರದಂದು ಶಿವಪೂಜೆ ಮಾಡಿ ಬೆಟ್ಟದ ನೆಲ್ಲಿಕಾಯಿ ದೀಪ ಹಚ್ಚಿ. ದಾರಿದ್ರ್ಯ ಹನನವಾಗುತ್ತದೆ. 2021ರ ಏಪ್ರಿಲ್ 5ಕ್ಕೆ ಒಂಬತ್ತನೆಯ ಮನೆಯ ಗುರುವು ಸಂತೋಷ ನೀಡಿ ಹರಸುತ್ತಾನೆ. ‘ಓಂ’ಕಾರ ಮಂತ್ರ ಪಠಿಸಿ. ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಹಣ ಹಾಗೂ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ.

    ಕಟಕ

    ಗುರುವು ನವೆಂಬರ್ 20ರವರೆಗೂ ಷಷ್ಠದಲ್ಲಿದ್ದು, ನಂತರ ಶನಿಯನ್ನು ಬಂದು ಸೇರುತ್ತಾನೆ. ಸುಖಕ್ಕೆ ಕಡಿಮೆಯಿರುವುದಿಲ್ಲ. ಕಟಕ ರಾಶಿ ಚಂದ್ರನ ಮನೆ. ಮಂದಸ್ಮಿತ, ಉಲ್ಲಾಸಮಯ ಪೌರ್ಣಮಿ ಚಂದ್ರನು ಎಷ್ಟು ಚಂದವೋ ಹಾಗೆಯೇ ನಿಮಗೆ ಸುಖ, ಸಂತಸ ಕೊಟ್ಟು ಹರಸಲು ಬಂದಿದ್ದಾನೆ. ಶ್ರೀಗುರು ದಕ್ಷಿಣಾಮೂರ್ತಿಯು ಸತ್ಯವನ್ನು, ಬಾಳಿನ ಬೆಳಕನ್ನು ತೋರಿಸಿ ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ. ಪ್ರತಿ ಶನಿವಾರ ಶನಿಗ್ರಹಕ್ಕಾಗಿ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಬಿಲ್ವಪತ್ರೆಯಿಂದ ವಿಷ್ಣುವನ್ನು ಪೂಜಿಸಿ. ಸದಾಕಾಲ ರಾಮನಾಮ (ಶ್ರೀರಾಮ ಜಯರಾಮ ಜಯ ಜಯ ರಾಮ) ಜಪಿಸಿ. ದೇವರು, ಧರ್ಮದಲ್ಲಿ ನಿಷ್ಠೆಯಿರಲಿ. ಏನೂ ಕುಂದುಕೊರತೆ ಬರಲಾರದು. ಏಪ್ರಿಲ್ 5ಕ್ಕೆ ಗುರುವು ಅಷ್ಟಮಕ್ಕೆ ಬರುತ್ತಾನೆ. ಅದು ಶನಿಯ ಮನೆಯಾಗಿರುವುದರಿಂದ ಸಪ್ತಮ ಶನಿಯು ಅಷ್ಟಮ ಗುರುವು ನಿಮ್ಮನ್ನು ಯಾವ ತೊಂದರೆಗೂ ಸಿಲುಕಿಸುವುದು ಬೇಡ. ನಿಮ್ಮ ಪರಮಾತ್ಮನು ವಾಸವಾಗಿರುವ ದೇಹ, ಆರೋಗ್ಯ ಕಾಪಾಡಿಕೊಳ್ಳಿ. ಮೃತ್ಯುಂಜಯ ಮಂತ್ರ, ಧನ್ವಂತರಿ ಮಹಾಮಂತ್ರ ಜಪಿಸಿ.

    ಸಿಂಹ

    ಪಂಚಮ ಗುರುವು ಷಷ್ಠಕ್ಕೆ ಹೋಗಿ, ಷಷ್ಠ ಶನಿಯು ಸ್ವಕ್ಷೇತ್ರದಲ್ಲಿದ್ದು, ನಿಮಗೆ ತೀವ್ರವಾದ ಆಘಾತ, ಆರೋಗ್ಯ ಸಮಸ್ಯೆ, ದುಡ್ಡಿನ ಕೊರತೆ ಮಾಡುವುದಿಲ್ಲ. ನಿತ್ಯವೂ ಗುರು ಚರಿತ್ರೆಯ ಪಾರಾಯಣ ಮಾಡಿ. ಕೈಲಾದಷ್ಟು ಅನ್ನದಾನ ಮಾಡಿ. ಆರರ ಗುರುವು ಒಳ್ಳೆಯದನ್ನು ಮಾಡದಿದ್ದರೂ ಕೇಡನ್ನು ಮಾಡಲಾರ. ಆರರ ಶನಿ ಪರಾಕ್ರಮ, ಯಶಸ್ಸು, ಧೈರ್ಯ, ಕೀರ್ತಿಯನ್ನು ತುಂಬಿ ಹೊಸದಾದ ಗೃಹ, ವಾಹನಗಳನ್ನು, ಸಂಪತ್ತನ್ನು ತಂದುಕೊಡುತ್ತಾನೆ. ಸೂರ್ಯರಾಶಿಯಲ್ಲಿ ಹುಟ್ಟಿದವರು ಜಗತ್ತಿಗೆ ಒಡೆಯನಾದ ಸೂರ್ಯನನ್ನು ನಿತ್ಯವೂ ಪ್ರಾರ್ಥಿಸಬೇಕು. ಸಂಜೀವಿನಿ ಮಹಾಮೃತ್ಯುಂಜಯ ಮಂತ್ರ ಜಪ ಮಾಡಿ, ನಿತ್ಯ ಶಿವನಿಗೆ ರುದ್ರಾಭಿಷೇಕ ಮಾಡಿ. ಸಾಲ ತೀರಿಸಲು ಸಕಾಲ. ಕೀರ್ತಿಗಾಗಿ ಹಿಗ್ಗಬೇಡಿ – ನಿಂದನೆಗಾಗಿ ಕುಗ್ಗಬೇಡಿ, ಸಂತನಂತೆ ಬಾಳಿ. 2021ರ ಏಪ್ರಿಲ್​ನಲ್ಲಿ ಗುರುವು ಮುಂದಿನ ಮನೆಗೆ ಬಂದು ನಿಮ್ಮನ್ನು ಕಾಪಾಡುತ್ತಾನೆ. ಮಾರ್ಗ ಶಿರ, ಪುಷ್ಯ, ಮಾಘ, ಫಾಲ್ಗುಣಗಳಲ್ಲಿ ನಿಧಾನವಾಗಿ ಸಾಗಿ. ಆತುರ ಬೇಡ.

    ಕನ್ಯಾ

    ನವೆಂಬರ್ 20ರಿಂದ ಗುರುವಿನ ಸಂಚಾರ. 2021ರ ಏಪ್ರಿಲ್ 5ರಿಂದ ಆರನೇ ಮನೆಗೆ ಸಂಚರಿಸುತ್ತಾನೆ. ಇನ್ನು ಆರು ತಿಂಗಳ ಕಾಲ ನಿಮಗೆ ದೈವಬಲವಿದೆ. ಹಾಗೆಯೇ ಪಂಚಮದ ಶನಿಯ ಸಂಕಟವೂ ಇದೆ. ಕುಲದೇವರನ್ನು, ಮಾತಾ-ಪಿತೃಗಳನ್ನು ಮರೆತವರು ಭ್ರಷ್ಟರು ಎಂದು ಶಾಸ್ತ್ರಗಳೇ ಸಾರುತ್ತವೆ. ವಿನಮ್ರತೆಯಿರಲಿ. ಪ್ರಾಮಾಣಿಕ ಜೀವನ ನಡೆಸಿದರೆ ಆರ್ಥಿಕ ಸದೃಢತೆ ಕಾಣುವಿರಿ. ವೆಂಕಟೇಶ್ವರ- ವೆಂ ಎಂದರೆ ಪಾಪದಾಹತ, ಕಟ ಎಂದರೆ ಕತ್ತರಿಸುವವನು, ಈಶ ಎಂದರೆ ಸರ್ವವನ್ನೂ ಸಲಹುವವನು ಎಂದರ್ಥ. ಪಾಪದಿಂದ ಉಂಟಾಗಿರುವ ವ್ಯಾಧಿಯನ್ನು ಕಳೆದುಕೊಳ್ಳುವ ಸಮಯ. ಮನೆಯ ಗುರುಗಳನ್ನು ಕರೆದು ಧನ್ವಂತರಿ ಹೋಮ, ಮೃತ್ಯುಂಜಯ ಹೋಮವನ್ನು ಮಾಡಿ. ಯಾರನ್ನೂ ಹೀಯಾಳಿಸಬೇಡಿ. ತೇಜೋವಧೆ ಮಾಡಬೇಡಿ. ಜೀವನ ಕೊಟ್ಟಿರುವುದು ಭೋಗಿಸುವುದಕ್ಕಲ್ಲ, ಆತ್ಮನಲ್ಲಿ ಪರಮಾತ್ಮನನ್ನು ನೋಡುವುದಕ್ಕೆ. ಶ್ರೀರಾಮನನ್ನು ಭಜಿಸಿ, ಪೂಜಿಸಿ. ನಿತ್ಯ ಒಂದು ಸರ್ಗದಂತೆ ರಾಮಾಯಣ ಪಾರಾಯಣ ಮಾಡಿ. ಸಕಲವೂ ಲಭಿಸಿ ಸುಖ-ಶಾಂತಿ ಹೊಂದುವಿರಿ.

    ತುಲಾ

    ತುಲಾರಾಶಿಯ ಉಚ್ಚ ಶನಿಯು ಚತುರ್ಥದಲ್ಲಿದ್ದು, ನಿಮಗೆ ಮುಕ್ಕಣ್ಣನ ಅನುಗ್ರಹ ಇರುವಂತೆ ನೋಡಿಕೊಳ್ಳುತ್ತಾನೆ. ನವೆಂಬರ್ 20ರಿಂದ ಚತುರ್ಥದ ಗುರುವು ಅನಿರೀಕ್ಷಿತವಾಗಿ ಕೆಲವು ಅಹಿತಕರ ಬೆಳವಣಿಗೆ ಕೊಟ್ಟು ಮನಸ್ಸನ್ನು ಅಸ್ಥಿರಗೊಳಿಸುತ್ತಾನೆ. ಯಾವುದೇ ದೊಡ್ಡ ವಿಚಾರಗಳನ್ನು ತೀರ್ವನಿಸುವಾಗ ಗುರುಹಿರಿಯರ, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ತಂದೆಯನ್ನು ಪೂಜಿಸಿ, ಆಶೀರ್ವಾದ ಪಡೆದುಕೊಳ್ಳಿ. ತುಲಾ ರಾಶಿ ನ್ಯಾಯದ ಸಂಕೇತ. ಅನ್ಯಾಯದಿಂದ ಹಣದ ಗಳಿಕೆ ಬೇಡ. ಚತುರ್ಥ ಗುರುವಿಗೆ ನಿತ್ಯವೂ ಸುಂದರಕಾಂಡದ ಒಂದು ಸರ್ಗವನ್ನು ಪಠಿಸಿ ಶನಿವಾರದಂದು ಹನುಮಂತನಿಗೆ ಮಾಷ ಭಕ್ಷ್ಯಳನ್ನು ನೈವೇದ್ಯ ಮಾಡಿ ಹಂಚಿ. ಶ್ರೀರಾಮನಂತೆ ಕೀರ್ತಿಶಾಲಿಯಾಗಿ ವೈಭವವಾಗಿ ಬದುಕಿ. ಕೋರ್ಟು, ಕಚೇರಿಗಳಲ್ಲಿ ಜಯ ನಿಮ್ಮದಾಗುತ್ತದೆ. ಏಪ್ರಿಲ್ 2021ರಿಂದ ಗುರುವು ಪಂಚಮಕ್ಕೆ ಬಂದು ಗುರುವಿನ ಅನುಗ್ರಹವಾಗುತ್ತದೆ. ಅತಿಯಾದ ಆಯಾಸದ ಯೋಜನೆ, ಅನಗತ್ಯ ವೆಚ್ಚ ಮಾಡದಿರಿ. ಸ್ವಾತಿ ನಕ್ಷತ್ರದಂದು ಲಕ್ಷ್ಮೀನರಸಿಂಹ ದರ್ಶನ ಮಾಡಿ ಪೂಜಿಸಿ.

    ವೃಶ್ಚಿಕ

    ಕಾರ್ತಿಕ ಶುದ್ಧ ಷಷ್ಟಿಯಂದು ಗುರುವು ಮೂರನೇ ಮನೆಯ ಶನಿಯನ್ನು ಸೇರುತ್ತಾನೆ. ಅಕ್ಟೋಬರ್, ನವೆಂಬರ್​ನ ದ್ವಿತೀಯ ಗುರುವು ದಾರಿಯನ್ನು, ಧನದ ಚೀಲವನ್ನು ನಿಮ್ಮ ಕೈಸೇರಲು ಅನುಗ್ರಹಿಸುತ್ತಾನೆ. ಮೂರರ ಶನಿಯು ನಿಮಗೆ ಬರಬೇಕಾದ ಪರಿಪೂರ್ಣವಾದ ಕಷ್ಟಪಟ್ಟ ಹಣವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ತೃತೀಯ ಗುರುವು ಮನೆಯಲ್ಲಿ ಸಂತಸ, ಸಂತಾನ, ಸಂಪತ್ತನ್ನು ವೃದ್ಧಿಸುತ್ತಾನೆ. ನೀವು ಮಾಡಿದ ಕರ್ಮಕ್ಕೆ (ಕೆಲಸ) ಲಾಭವು ಬಂದು, ಕೇತು-ರಾಹುಗಳ ಸಂಘರ್ಷದಿಂದ ನಿಮ್ಮ ಸುತ್ತಮುತ್ತ ನೀಚ ಜನರಿಂದ ಸುತ್ತುವರಿಯುವ ಸಮಯ ಬರಬಹುದು. ಎಚ್ಚರ. ನಿಮ್ಮ ಗುರುಗಳ ಮೂಲಕ ಚಂಡೀಪಾರಾಯಣ ಮಾಡಿಸಿ. ಆಗ ಅನ್ಯರ ಹೀನದೃಷ್ಟಿಯಿಂದ ರಕ್ಷಣೆ ಸಿಕ್ಕಿ, ನಿಮ್ಮ ಧನವು ನಿಮ್ಮಲ್ಲೇ ಸ್ಥಿರವಾಗುತ್ತದೆ. ದೇಶ-ಕಾಲವನ್ನು ಪರಿಗಣಿಸಿ ಕೊಲ್ಹಾಪುರದ ಮಹಾಲಕ್ಷ್ಮೀಯನ್ನು ಪೂಜಿಸಿ. ಶನಿವಾರದಂದು ಮನೆಯಲ್ಲಿಯೇ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿಗಳಿಂದ ಅರ್ಚಿಸಿ, ಪೂಜಿಸಿ. ಏಪ್ರಿಲ್ 5ರಂದು ಗುರು ಪಲ್ಲಟವಾಗಿ ಚತುರ್ಥಕ್ಕೆ ಬರಲಿದ್ದಾನೆ. ಶ್ರೀಹರಿಯನ್ನು ಪೂಜಿಸಿ. ಗುರುವಾಕ್ಯ ಪಾಲಿಸಿ.

    ಧನು

    ನವೆಂಬರ್ 20ರಿಂದ ಗುರುವು ಶನಿಯೊಂದಿಗೆ ಸಂಚರಿಸಿ ನಿಮ್ಮ ಸಜ್ಜನಿಕೆಯನ್ನು, ಜನಾನುರಾಗವನ್ನು ಕಾಪಾಡಿ ಕೊಟ್ಟರೂ, ಬೇರೆಯವರು ನಿಮ್ಮ ಹಿಂಬಾಲಕರನ್ನು ಅಪಹರಿಸುವ ಭಯವಿದೆ. ಶನಿಯು ಮಕರದಲ್ಲಿ ಗುರುವಿನ ಜತೆಗೆ ಕುಳಿತು ನಿಮ್ಮನ್ನು ರಕ್ಷಣೆ ಮಾಡುವ ಜವಾಬ್ದಾರಿ ದೇವರ ಮೇಲೆಯೇ ಇರುತ್ತದೆ. ಧನು ರಾಶಿಯವರು ಭಗವದ್ಭಕ್ತರಾಗಿ ಗುರುವಿನಲ್ಲಿ ಶ್ರದ್ಧಾಯುಕ್ತ ಭಕ್ತಿಯನ್ನು, ದೃಢವಾದ ಗುರುಭಕ್ತಿ ಕೊಡು ಎಂದು ದೇವರನ್ನು ಪ್ರಾರ್ಥಿಸಿ. ನಿಮ್ಮ ಕೀರ್ತಿಗೆ ಚ್ಯುತಿ ಇಲ್ಲ. ದುಡ್ಡಿಗೆ ಬರವಿಲ್ಲ. ಸಂತಸಕ್ಕೆ ಎಣೆಯಿಲ್ಲ. ಜವಾಬ್ದಾರಿ ಕೆಲಸಗಳನ್ನು ಖುದ್ದಾಗಿ ಮಾಡಿಕೊಳ್ಳಿ. ಹನ್ನೆರಡರಲ್ಲಿ ಕೇತುವಿನ ಎಚ್ಚರಿಕೆಯ ಗಂಟೆಯನ್ನು ಕೇಳಿ, ಸಮೂಹದಲ್ಲಿದ್ದಾಗ ಯಾರ ಬಗ್ಗೆಯೂ ಮಾತನಾಡಬೇಡಿ. ಶ್ರೀರಾಮಚಂದ್ರನಂತೆ ಜಯ ಸಾಧಿಸುವುದರಲ್ಲಿ ಸಂದೇಹ ಬೇಡ. ಆರೋಗ್ಯವಂತರಾಗಿ ಬಾಳಲು ಈಶ್ವರನ ಕರುಣೆ ಅಗತ್ಯ. ಇದನ್ನು ಸಂರಕ್ಷಣೆ ಮಾಡಲು ತಂದೆ, ಕುಲ ಗುರುಗಳ ಅನುಗ್ರಹ ಆವಶ್ಯಕ. ಮನೋಧೈರ್ಯಕ್ಕೆ ಶ್ರೀಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸಿ.

    ಮಕರ

    ಮಕರ ರಾಶಿಯಲ್ಲಿ ಶನಿಯಿದ್ದು, ದೀಪಾವಳಿಯ ನಂತರ ಗುರುವು ಶನಿಯೊಡನೆ ಇದ್ದು ನಿಮಗೆ ನಿಮ್ಮ ಪೂರ್ವ ಪುಣ್ಯಾನುಸಾರವಾಗಿ ಅಲ್ಪಸ್ವಲ್ಪ ಸುಖ, ಶಾಂತಿಯನ್ನು ನೀಡುವ ಸಮಯ. ಗುರು-ಶನಿಗಳು ಮಕರ ರಾಶಿಯಲ್ಲಿ ಇರುವುದರಿಂದ ಪ್ರತಿ ತಿಂಗಳ ಎರಡು ಪ್ರದೋಷ ಸೋಮವಾರಗಳಲ್ಲಿ ಪೂಜೆ ಮಾಡಿ. ಮನಸ್ಸಿಗೆ ಶಾಂತಿ ಲಭಿಸಿ ಕಾರ್ಯೋನ್ಮುಖರಾಗಿ ಮಾಡುತ್ತದೆ. ಶರೀರಕ್ಕೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಬರಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ. 2021ರ ಏಪ್ರಿಲ್ 5ರ ನಂತರ ಗುರುವು ಎರಡನೇ ಮನೆಗೆ ಬಂದು ನಿಮ್ಮ ಕಹಿನೆನಪುಗಳನ್ನು ಹೋಗಲಾಡಿಸಿ ಸವಿ ಉಣಬಡಿಸುತ್ತಾನೆ. ಧರ್ಮಕರ್ಮಾಧಿಪತಿ ಶನಿಯು ದೈವಭಕ್ತರನ್ನು, ಸಂತರನ್ನು, ಈಶ್ವರನ ಪೂಜೆ ಮಾಡುವವರನ್ನು ಬಾಧಿಸುವುದಿಲ್ಲ. ರಾಹು-ಕೇತು ಅನುಗ್ರಹಕ್ಕಾಗಿ ಗಣಪನನ್ನು ಎಳ್ಳುಂಡೆ, ಗರಿಕೆಗಳಿಂದ ಪೂಜಿಸಿ. ಶಿವಪಾರ್ವತಿಯನ್ನು, ಷಣ್ಮುಖನನ್ನು ಸ್ತುತಿಸಿ. ಪ್ರತಿ ತಿಂಗಳ ಶುಕ್ಲ ಹಾಗೂ ಕೃಷ್ಣ ಚತುರ್ದಶಿಯಂದು ಶಿವಸಹಸ್ರನಾಮ ಪಠಣ ಮಾಡಿ. ಕೆಲಸವಿಲ್ಲದೆ, ಕಾರಣವಿಲ್ಲದೆ ಮಾತು, ತಿರುಗಾಟ ಬೇಡ.

    ಕುಂಭ

    ಹನ್ನೆರಡರ ಶನಿಯ ಜತೆಗೆ ಗುರು ಬಂದು ಸೇರಿ ಮಾನಸಿಕ ಅಧೈರ್ಯ ನಿಮ್ಮನ್ನು ಕಾಡುವುದು. ಪಾಂಡವರಿಗೆ ಅರಣ್ಯವಾಸವಾದಾಗ ಶ್ರೀಕೃಷ್ಣನನ್ನು ಆರಾಧಿಸಿ, ಪೂಜಿಸಿ ಯುದ್ಧದಲ್ಲಿ ಗೆದ್ದು ಎಲ್ಲ ರಾಜ್ಯ ಸಂಪತ್ತನ್ನೂ ವಾಪಸ್ಸು ಪಡೆದರು. ಅಂತೆಯೇ ಉಡುಪಿಯ ಅನಂತೇಶ್ವರನನ್ನು ಅಥವಾ ತಿರುವನಂತಪುರದಲ್ಲಿರುವ ಅನಂತಪದ್ಮನಾಭನನ್ನು ಪೂಜಿಸಿ. ಇಷ್ಟಾರ್ಥಗಳನ್ನು ಪಡೆಯುವ ಕಾಲ ಬರುತ್ತದೆ. ಅದಕ್ಕಾಗಿ ಕೊಲ್ಲೂರು ಮೂಕಾಂಬಿಕೆಯನ್ನು ದರ್ಶನ ಮಾಡಿ ಅಲ್ಲೇ ತ್ರಿಮಧುರ ಪೂಜೆ ಮಾಡಿಸಿ ರಾತ್ರಿಯನ್ನು ಸನ್ನಿಧಿಯಲ್ಲಿ ಕಳೆದು ಆನಂತರದಲ್ಲಿ ಕುಂಭಾಶಿ ಆನೆಗುಡ್ಡೆಯ ಗಣಪತಿಯನ್ನು, ಸಾಲಿಗ್ರಾಮದ ಗುರುನರಸಿಂಹನನ್ನು ಪೂಜಿಸಿ. ಏಪ್ರಿಲ್ 5ರಂದು ಗುರುವಿನ ಸಂಚಾರದ ನಂತರ ಮುಖದಲ್ಲಿ ನಗು ಮೂಡಿಬರಲಿದೆ. ಮಾತು ಕಡಿಮೆಯಿರಲಿ. ಧ್ಯಾನ, ತಪೋನಿಷ್ಠೆ ಅಧಿಕವಾಗಲಿ. ಒಟ್ಟಿನಲ್ಲಿ ಈ ವರ್ಷದ ರಾಶಿಫಲದಲ್ಲಿ ಶೇ. 50 ಉತ್ತಮವಾಗಿಯೂ, ಶೇ. 50 ಭಾಗ ಕಠಿಣವಾಗಿಯೂ ಇರುತ್ತದೆ.

    ಮೀನ

    ನವೆಂಬರ್ 20ರಿಂದ ಗುರುವು ಹನ್ನೊಂದರಲ್ಲಿ ಶನಿಯ ಜತೆಗಿದ್ದು, ಕೈಲಾಸ ಮುಟ್ಟಲು ಎರಡೇ ಗೇಣು ಸಾಕು. ಏಕಾದಶದ ಶನಿ ಲಾಭ, ಕೀರ್ತಿ ಕೊಟ್ಟು, ಗುರುವು ಸುಖ, ಸಂಪತ್ತು, ಆರೋಗ್ಯ ಕೊಟ್ಟು ನಿಮ್ಮನ್ನು ಕಾಪಾಡುತ್ತಾನೆ. ಎರಡು ಗ್ರಹಗಳು ಏಕಾದಶದಲ್ಲಿ ಸೇರಿ ನಿಮ್ಮ ಧರ್ವಚರಣೆಯನ್ನು, ತ್ಯಾಗ, ಸಹಾಯ, ದಾನಗಳನ್ನು ನೋಡುತ್ತಿರುತ್ತಾರೆ. 2021ರಲ್ಲಿ ಗುರುವು ಹನ್ನೆರಡನೇ ಮನೆಯನ್ನು ಸೇರುತ್ತಾನೆ. ಅಧರ್ಮ, ಸತ್ಯಕ್ಕೆ ದೂರವಾದದ್ದು ಎಂದೂ ಉಳಿಯುವುದಿಲ್ಲ. ಅದಕ್ಕೇ ರಾಷ್ಟ್ರಕ್ಕೆ ಅಂಟಿರುವ ಸೋಂಕು ರೋಗವೇ ಸಾಕ್ಷಿ. ಮನುಷ್ಯನ ನಿದ್ರೆಗೆಡಿಸುತ್ತದೆ, ಪ್ರವಾಹ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ, ಬುದ್ಧಿವಂತರಾದ ಮೀನರಾಶಿಯ ಜನರು ರಾಶ್ಯಾಧಿಪತಿ ಗುರುವನ್ನು ಪೂಜಿಸಿ ತಮಗೂ ರಾಷ್ಟ್ರಕ್ಕೂ ಹಿತವಾಗಲಿ ಎಂದು ಬೇಡುವುದು ಅನಿವಾರ್ಯ. ಗುರುವು ಮಕರದಲ್ಲಿರುವಾಗ ಶೃಂಗೇರಿ ಶಾರದಾಪೀಠದ ಗುರುಗಳನ್ನು ಪೂಜಿಸಿ, ಆರಾಧಿಸಿ, ನಿತ್ಯವೂ ಪ್ರಾರ್ಥಿಸಿ. ಬದುಕು ಬಂಗಾರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts