More

  ನಕಲಿಗಳಿಂದ ಎಚ್ಚರಿಕೆ: ಕೃತಕ ಬುದ್ಧಿಮತ್ತೆಯ ಹೊಸ ಅಪಾಯ

  ಮೊದಲು ಸಿನಿಮಾ ನಟಿಯರು, ಈಗ ಪ್ರಧಾನಿಯ ಡೀಪ್​ಫೇಕ್ ವಿಡಿಯೋ ಹರಿದಾಡಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಯಾರದೋ ದೇಹಕ್ಕೆ, ಇನ್ನಾರದೋ ಮುಖ ಅಂಟಿಸಿ, ಚಲನವಲನಗಳನ್ನು ಅಳವಡಿಸುವ ಇಂಥ ವಿಡಿಯೋಗಳಲ್ಲಿ ತಕ್ಷಣಕ್ಕೆ ಅಸಲಿ, ನಕಲಿ ಕಂಡುಹಿಡಿಯುವುದು ಕಷ್ಟಸಾಧ್ಯ. ಖಾಸಗಿತನಕ್ಕೆ ತೀವ್ರ ಅಪಾಯ ಒಡ್ಡಿರುವ ಇಂಥ ವಿಡಿಯೋಗಳನ್ನು ತಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

  ಡೀಪ್​ಫೇಕ್ ತಂತ್ರಜ್ಞಾನದಲ್ಲಿನ ಪ್ರಗತಿಯು ಅದರ ದುರುಪಯೋಗದ ಸಂಭಾವ್ಯತೆಯ ಕಾರಣದಿಂದಾಗಿ ಕಳವಳವನ್ನು ಹುಟ್ಟುಹಾಕಿದೆ. ತಪ್ಪು ಮಾಹಿತಿಯನ್ನು ಹರಡಲು, ವೀಕ್ಷಕರನ್ನು ಮೋಸಗೊಳಿಸಲು, ಸಾರ್ವಜನಿಕ ಅಭಿಪ್ರಾಯವನ್ನು ಕುಶಲತೆಯಿಂದ ರೂಪಿಸಲು ಅಥವಾ ವ್ಯಕ್ತಿಗಳನ್ನು ದೂಷಿಸಲು ಡೀಪ್​ಫೇಕ್ ವಿಡಿಯೋಗಳನ್ನು ಬಳಸುವ ಅಪಾಯವಿದೆ. ಡೀಪ್​ಫೇಕ್ ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ, ಡೀಪ್​ಫೇಕ್ ವಿಡಿಯೋಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಎದುರಿಸಲು ದೃಢವಾದ ಪತ್ತೆ ವಿಧಾನಗಳು ಮತ್ತು ಸಾಧನಗಳು ಅಗತ್ಯವಾಗಿವೆ. ಇದರ ವಿರುದ್ಧ ಹೋರಾಡಲು ಭಾರತದಲ್ಲಿ ಸದ್ಯಕ್ಕೆ ಪ್ರತ್ಯೇಕ ಕಾನೂನಿಲ್ಲ.

  ಕೆಲ ವಾರಗಳ ಹಿಂದೆ ನಟಿ ಊರ್ವಶಿಯ ಎನ್ನಲಾದ ವಿಡಿಯೋ ಹರಿದಾಡಿತ್ತು. ಆ ಬಳಿಕ ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಚರ್ಚೆಗೆ ಗ್ರಾಸವಾಯಿತು. ಇವೆಲ್ಲವೂ, ಡೀಪ್​ಫೇಕ್ (ನಕಲಿ) ವಿಡಿಯೋಗಳು. ಸರಳವಾಗಿ ಹೇಳುವುದಾದರೆ, ಯಾರದೋ ದೇಹಕ್ಕೆ ಇನ್ನಾರದೋ ಮುಖವನ್ನು ಅಳವಡಿಸಿ, ದೇಹ, ಮುಖದ ಚಲನವಲನವನ್ನು ಹೊಂದಿಸಿ, ವಿಡಿಯೋ ಎಡಿಟ್ ಮಾಡುವುದು. ಸಾರ್ವಜನಿಕ ವ್ಯಕ್ತಿಗಳ ವರ್ಚಸ್ಸಿಗೆ ಧಕ್ಕೆ ತರಲು ಮತ್ತು ಸುಳ್ಳುಸಂಗತಿಗಳನ್ನು ಹರಡಲು, ಸೈಬರ್ ಅಪರಾಧಿಗಳು ಇದನ್ನು ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಆಪ್​ಗಳು ಮತ್ತು ಸಂಬಂಧಿತ ತಂತ್ರಜ್ಞಾನ ಜನಸಾಮಾನ್ಯರ ಕೈಗೆ ತಲುಪಿದರೆ ಹೊಸ ಬಗೆಯ ಡಿಜಿಟಲ್ ಭಯೋತ್ಪಾದನೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುವುದರಲ್ಲಿ ಆಶ್ಚರ್ಯವಿಲ್ಲ.

  ಆತಂಕ ವ್ಯಕ್ತಪಡಿಸಿದ ಗಣ್ಯರು: ನಟಿ ರಶ್ಮಿಕಾ ಮಂದಣ್ಣ ನಕಲಿ ವಿಡಿಯೋ ಹರಿದಾಡುತ್ತಿದ್ದಂತೆ ಈ ಬಗ್ಗೆ ಬೇಸರ ಮತ್ತು ಆತಂಕ ವ್ಯಕ್ತಪಡಿಸಿದ ಖ್ಯಾತ ನಟ ಅಮಿತಾಭ್ ಬಚ್ಚನ್, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ‘ಜಾಲತಾಣಗಳು ಡೀಪ್​ಫೇಕ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಟ್ವೀಟ್ ಮಾಡಿದ್ದರು. ‘ನನ್ನ ಕುರಿತ ನಕಲಿ ವಿಡಿಯೋ ಹರಿದಾಡುತ್ತಿರುವುದು ನೋಡಿ ಬೇಸರವಾಗಿದೆ. ತಂತ್ರಜ್ಞಾನದ ದುರ್ಬಳಕೆಯಿಂದ ಈ ರೀತಿಯಾಗುವುದು ಅಪಾಯಕಾರಿ ಮತ್ತು ಭಯಾನಕ. ತಂತ್ರಜ್ಞಾನದ ದುರ್ಬಳಕೆಯಿಂದ ಹೆಚ್ಚಿನ ಜನರು ಅಪಾಯಕ್ಕೆ ಒಳಗಾಗುವ ಮೊದಲು ಎಲ್ಲರೂ ಒಂದಾಗಿ ಇದರ ವಿರುದ್ಧ ಹೋರಾಡಬೇಕು’ ಎಂದು ರಶ್ಮಿಕಾ ಮಂದಣ್ಣ ಹೇಳಿದರು.

  ತಂತ್ರಜ್ಞಾನದ ಕರಾಳತೆ: ಅತ್ಯಾಧುನಿಕ ತಂತ್ರಗಳು ಸೈಬರ್ ಕ್ರಿಮಿನಲ್​ಗಳಿಗೆ ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ದೇಹದ ಮೇಲೆ ಅಂಟಿಸಲು ಅಥವಾ ಅವರ ಮುಖಭಾವ, ಧ್ವನಿ ಅಥವಾ ಸನ್ನೆಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತವೆ. ತಿರುಚಿದ ಈ ವಿಷಯಗಳು ನಿಜವಾದ ರೆಕಾರ್ಡಿಂಗ್ ಅಥವಾ ಚಿತ್ರಗಳಿಂದ ಪ್ರತ್ಯೇಕಿಸಲು ಕಷ್ಟವಾಗುವಂತೆ ಇರುತ್ತವೆ. ಡೀಪ್​ಫೇಕ್​ಗಳು ವ್ಯವಹಾರಗಳಿಗೆ ಮತ್ತು ವ್ಯಕ್ತಿಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ವಂಚಕರು ಈ ತಂತ್ರಜ್ಞಾನವನ್ನು ವಂಚನೆ ಮಾಡಲು, ಬ್ರಾ್ಯಂಡ್​ಗಳನ್ನು ತಪ್ಪಾಗಿ ನಿರೂಪಿಸಲು, ಖ್ಯಾತಿಗೆ ಹಾನಿ ಮಾಡಲು ಬಳಸುತ್ತಿದ್ದಾರೆ.

  ಸಾರ್ವಜನಿಕ ವ್ಯಕ್ತಿಗಳೇ ಹೆಚ್ಚು ಟಾರ್ಗೆಟ್

  ಡೀಪ್​ಫೇಕ್​ಗಳನ್ನು ರಾಜಕಾರಣಿಗಳು, ಸೆಲೆಬ್ರಿಟಿಗಳು ಅಥವಾ ಉದ್ಯಮಿಗಳ ಫ್ಯಾಬ್ರಿಕೇಟೆಡ್ ವಿಡಿಯೋಗಳನ್ನು ರಚಿಸಲು ಬಳಸಲಾಗುತ್ತದೆ. ಇದು ಖ್ಯಾತಿಗೆ ಹಾನಿ ಅಥವಾ ತಪ್ಪುಮಾಹಿತಿಯ ಪ್ರಚಾರಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ, ಕೆಂಡ್ರಿಕ್ ಲಾಮರ್ ಅವರ ಸಂಗೀತ ವಿಡಿಯೋ ‘ದಿ ಹಾರ್ಟ್’ ಭಾಗ 5ರಲ್ಲಿ, ಗಾಯಕನ ಮುಖವು ದಿವಂಗತ ಕೋಬ್ ಬ್ರಾ್ಯಂಟ್​ನ ಮುಖಕ್ಕೆ ಜೋಡಣೆ ಆಗುತ್ತದೆ. ಇದು ಡೀಪ್​ಫೇಕ್ ಆಗಿದ್ದು, ಎರಡು ವರ್ಷಗಳ ಹಿಂದೆ ನಿಧನರಾಗಿದ್ದರೂ ಬ್ರಾ್ಯಂಟ್ ಅವರು ಪ್ರದರ್ಶನ ನೀಡುತ್ತಿರುವಂತೆ ತೋರುತ್ತದೆ. 2018ರಲ್ಲಿ ಬಜ್​ಫೀಡ್ ವಿಡಿಯೋ, ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರ ಮನವೊಲಿಸುವ ಡೀಪ್​ಫೇಕ್ ರೂಪಿಸಿತು. ಇದು ಅವರ ಧ್ವನಿ ಮತ್ತು ಸನ್ನೆಗಳನ್ನು ಸಹ ಅನುಕರಿಸಿದೆ.

  ಇತ್ತೀಚಿನ ಪ್ರಕರಣಗಳು

  ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಹರಿದಾಡಿದ ಬೆನ್ನಲ್ಲೇ, ಸ್ವತಃ ಆ ನಟಿ ಭಾರಿ ಆಘಾತ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ, ನಟಿ ಕತ್ರಿನಾ ಕೈಫ್, ಆ ಬಳಿಕ ನಟಿ ಕಾಜಲ್ ಅವರ ಡೀಪ್​ಫೇಕ್ ವಿಡಿಯೋ ಹರಿದಾಡಿದವು. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಗರ್ಬಾ ನೃತ್ಯ ಮಾಡುತ್ತಿರುವಂತೆ ನಕಲಿ ವಿಡಿಯೋ ಹರಿಬಿಡಲಾಯಿತು. ಇವು ಸೆಲೆಬ್ರಿಟಿಗಳ ಪ್ರಕರಣಗಳಾದರೆ, ವರದಿಯಾಗದ ಪ್ರಕರಣಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ನಟಿಯರ ಡೀಪ್​ಫೇಕ್​ಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಕಾನೂನು ಕ್ರಮಕ್ಕೂ ಆಗ್ರಹಿಸಲಾಗಿದೆ. ವಿಶೇಷವಾಗಿ ಸಾರ್ವಜನಿಕ ವ್ಯಕ್ತಿಗಳ ಈ ರೀತಿಯಲ್ಲಿ ತಿರುಚಲಾದ ವಿಡಿಯೋಗಳ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.

  ಗುರುತಿನ ಕಳ್ಳತನ

  ಸಾಂಪ್ರದಾಯಿಕ ಗುರುತಿನ ಪರಿಶೀಲನಾ ಪ್ರಕ್ರಿಯೆಗಳನ್ನು ಬೈಪಾಸ್ ಮಾಡಲು ಡೀಪ್​ಫೇಕ್​ಗಳನ್ನು ಬಳಸಿಕೊಳ್ಳಬಹುದು. ಸೈಬರ್ ಅಪರಾಧಿಗಳು ಇತರರಂತೆ ಸೋಗು ಹಾಕಲು ಮತ್ತು ನಿರ್ಬಂಧಿತ ಸಂಪನ್ಮೂಲಗಳನ್ನು ಪ್ರವೇಶಿಸಲು ಅಥವಾ ಹಣಕಾಸಿನ ವಂಚನೆಗೆ ಇದನ್ನು ಬಳಸಬಹುದು. ಟೆಸ್ಲಾ ಸಿಇಒ ಎಲಾನ್ ಮಸ್ಕ್​ಗೆ ಸಂಬಂಧಿಸಿರುವ ಅಪ್ಲಿಕೇಶನ್​ನಲ್ಲಿ ಹೂಡಿಕೆ ಮಾಡಲು ಜನರನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋದಲ್ಲಿ ಅವರ ಮುಖ ಮತ್ತು ಧ್ವನಿಯನ್ನು ಬಳಸಲಾಗಿದೆ.

  ಕೃತಕ ಬುದ್ಧಿಮತ್ತೆಯಿಂದ ರೂಪಿಸಲಾಗುತ್ತಿರುವ ಡೀಪ್​ಫೇಕ್ ವಿಡಿಯೋಗಳು ಸಮಾಜಕ್ಕೆ ಹೊಸ ಅಪಾಯವನ್ನು ಸೃಷ್ಟಿಸಿವೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ, ಅರಿವು ಮೂಡಿಸಬೇಕಿದೆ. ಇತ್ತೀಚೆಗೆ ನಾನು ಗರ್ಬಾ ನೃತ್ಯ ಮಾಡುತ್ತಿರುವಂತೆ ವಿಡಿಯೋ ಹರಿಬಿಡಲಾಗಿದೆ. ವಾಸ್ತವದಲ್ಲಿ, ನಾನು ಶಾಲಾದಿನಗಳ ಬಳಿಕ ಈವರೆಗೂ ಗರ್ಬಾ ಆಡಿಲ್ಲ. ತಾವು ನೋಡುತ್ತಿರುವ ವಿಡಿಯೋ ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಲು ಜನರ ಬಳಿ ಇನ್ನೂ ಸೂಕ್ತವಾದ ಪರೀಕ್ಷಾ ವಿಧಾನ ಇಲ್ಲ.

  | ನರೇಂದ್ರ ಮೋದಿ, ಪ್ರಧಾನಿ (ದೆಹಲಿಯ ಬಿಜೆಪಿ ಕಚೇರಿ ಕಾರ್ಯಕ್ರಮದಲ್ಲಿ ಹೇಳಿದ್ದು)

  ಬಿಗಿ ಕಾನೂನುಗಳ ತಯಾರಿ

  ಡೀಪ್​ಫೇಕ್ ವಿಡಿಯೋವನ್ನು ಪತ್ತೆ ಹಚ್ಚಿ, ಅದನ್ನು ತೆಗೆದುಹಾಕುವ ಜವಾಬ್ದಾರಿ ಸಾಮಾಜಿಕ ಜಾಲತಾಣ ವೇದಿಕೆಗಳದ್ದೇ ಆಗಿರಬೇಕು ಎಂಬ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ ಹೊಸ ಕಾನೂನು ರೂಪಿಸುತ್ತಿದೆ. ಹೆಚ್ಚುತ್ತಿರುವ ಡೀಪ್​ಫೇಕ್ ವಿಡಿಯೋ ಅವಾಂತರಗಳನ್ನು ಗಂಭೀರವಾಗಿ ಪರಿಗಣಿಸಿರುವ ಯುರೋಪಿಯನ್ ಒಕ್ಕೂಟ, ಹೊಸ ಹಾಗೂ ಬಿಗಿ ಕಾನೂನಿನ ಬಲದ ಮುಖಾಂತರವೇ ಈ ಪಿಡುಗಿಗೆ ನಿಯಂತ್ರಣ ಹೇರಲು ಮುಂದಾಗಿದೆ. ಅಮೆರಿಕ ಕೂಡ ಇದೇ ದಾರಿಯಲ್ಲಿ ಸಾಗಿದೆ. ಡೀಪ್​ಫೇಕ್ ವಿಡಿಯೋಗಳ ಪ್ರಸಾರ, ಹರಡುವಿಕೆ ತಡೆಯಲು ಅಮೆರಿಕ ಹೊಸ ಕಾನೂನು ರೂಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಇಂಥ ಪ್ರಕರಣಗಳಲ್ಲಿ ಐಟಿ ಮತ್ತು ಕಾಪಿರೈಟ್ ಕಾಯ್ದೆಯ ಅನ್ವಯ ಶಿಕ್ಷೆ ವಿಧಿಸುವ ಅವಕಾಶ ಇದೆಯಾದರೂ, ಡೀಪ್​ಫೇಕ್ ವಿಡಿಯೋ ಸೇರಿದಂತೆ ಸಾಮಾಜಿಕ ಜಾಲತಾಣಗಳು ಮತ್ತು ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಪ್ರತ್ಯೇಕ ಕಾನೂನು ಇಲ್ಲ. ಐಟಿ ಆಕ್ಟ್ ಮತ್ತು ಕಾಪಿರೈಟ್ ಆಕ್ಟ್ ಅನುಸಾರ, ಡೀಪ್​ಫೇಕ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

  ವ್ಯಾಪಾರ ವಂಚನೆ: ವಂಚಕರು, ನೌಕರರು ಅಥವಾ ಗ್ರಾಹಕರನ್ನು ಮೋಸಗೊಳಿಸಲು ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್​ಗಳನ್ನು ಕುಶಲತೆಯಿಂದ ನಿರ್ವಹಿಸಬಹುದು. ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಅಥವಾ ಮೋಸದ ವಹಿವಾಟುಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.

  ನಾವೇನು ಮಾಡಬಹುದು?

  • ಡೀಪ್​ಫೇಕ್ ಅಥವಾ ಯಾವುದೇ ವಿವಾದಾತ್ಮಕ ವಿಡಿಯೋ ಕಾಣಿಸಿದಾಗ ಅದನ್ನು ರಿಪೋರ್ಟ್ ಮಾಡುವುದು.
  • ಸಂತ್ರಸ್ತರ ಬಗ್ಗೆ ಅಪಪ್ರಚಾರ ಬೇಡ. ಸಂತ್ರಸ್ತರಿಗೆ ಯಾವುದೇ ಹಣೆಪಟ್ಟಿ ಕಟ್ಟುವುದು ಬೇಡ.
  • ಇಂಥ ವಿಡಿಯೋಗಳನ್ನು ಶೇರ್ ಮಾಡದಿರಿ. ಪರಿಚಿತರು ಶೇರ್ ಮಾಡಿದ್ದರೆ ಅವರಿಗೂ ತಿಳಿವಳಿಕೆ ನೀಡಿ.

  ಗುರುತಿಸುವುದು ಹೇಗೆ?

  ಡೀಪ್​ಫೇಕ್​ಗಳು ಅಪಾಯಕಾರಿ. ಏಕೆಂದರೆ, ಇವುಗಳು ಅಸಲಿಯಂತೇ ಕಾಣುತ್ತವೆ. ಆದರೆ, ವಿಡಿಯೋ ಡೀಪ್​ಫೇಕ್ ಎಂದು ಗುರುತಿಸಲು ಸಹಾಯ ಮಾಡುವ ಕೆಲವು ಚಿಹ್ನೆಗಳು ಇವೆ.

  • ಎಐ ಡೀಪ್​ಫೇಕ್ ವಿಡಿಯೋವನ್ನು ನಿರ್ವಿುಸುವ ವಿಧಾನದಿಂದಾಗಿ, ನೈಸರ್ಗಿಕ ಕಣ್ಣಿನ ಚಲನೆಗಳು ಮತ್ತು ಮಿಟುಕಿಸುವುದನ್ನು ಸಂಪೂರ್ಣವಾಗಿ ಮರುಸೃಷ್ಟಿಸುವುದು ಕಷ್ಟ.
  • ತುಟಿಗಳ ಚಲನೆ ವೀಕ್ಷಿಸಿ, ಆಡಿಯೋ ಜತೆ ವಿಡಿಯೋ ಹೋಲಿಕೆಯಾಗುತ್ತದೆಯೇ ಎಂಬುದನ್ನು ತುಲನಾತ್ಮಕವಾಗಿ ಪರಿಶೀಲಿಸಬಹುದು.
  • ಬಣ್ಣಗಳು ಮತ್ತು ನೆರಳುಗಳಲ್ಲಿ ಅಸಂಗತತೆಗಳನ್ನು ಪರಿಶೀಲಿಸಬೇಕು.
  • ಸ್ಕಿನ್ ಟೋನ್​ನಲ್ಲಿನ ದೋಷಗಳು ವಿಡಿಯೋ ಡೀಪ್​ಫೇಕ್ ಎಂಬುದಕ್ಕೆ ಮತ್ತೊಂದು ಸೂಚಕ.
  • ಕೆಲವೊಮ್ಮೆದೇಹದ ಆಕಾರ ಅಥವಾ ಮುಖದ ಅಭಿವ್ಯಕ್ತಿಗಳು ಡೀಪ್​ಫೇಕ್ ವಿಡಿಯೋಗಳಲ್ಲಿ ಚಲನೆಯೊಂದಿಗೆ ವಿರೂಪಗೊಳ್ಳಬಹುದು.

  ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

  ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts