More

    ಭತ್ತದ ಇಳುವರಿ ಇಳಿಕೆ: ಒಂದು ಕೋಟಿ ಟನ್ ಅಕ್ಕಿ ಕೊರತೆ? ನುಚ್ಚಕ್ಕಿ ರಫ್ತು ಬ್ಯಾನ್

    ನವದೆಹಲಿ: ಪ್ರಸಕ್ತ ವರ್ಷದಲ್ಲಿ ಭತ್ತ ಬೆಳೆಯುವ ನಾಲ್ಕು ರಾಜ್ಯಗಳಲ್ಲಿ ಬರದ ಪರಿಸ್ಥಿತಿ ಇರುವ ಕಾರಣ ರೈತರು ಭತ್ತ ಬಿಟ್ಟು ಬೇರೆ ಬೆಳೆ ಬಿತ್ತಿದ್ದಾರೆ. ಹೀಗಾಗಿ ಈ ಮುಂಗಾರು ಹಂಗಾಮಿನಲ್ಲಿ 1 ಕೋಟಿಯಿಂದ 1.20 ಕೋಟಿ ಟನ್ ಅಕ್ಕಿ ಇಳುವರಿ ಕಡಿಮೆ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಬರ ಆವರಿಸಿದೆ. ಇದರಿಂದ ಸುಮಾರು 1 ಕೋಟಿ ಟನ್ ಅಕ್ಕಿ ಕೊರತೆ ಆಗಲಿದೆ. ಇದನ್ನು ಸರಿದೂಗಿಸಲು ಅಕ್ಕಿ ನುಚ್ಚಿನ ರಫ್ತನ್ನು ಸರ್ಕಾರ ನಿಷೇಧಿಸಿದೆ. ಜತೆಗೆ ಬಾಸುಮತಿಯೇತರ ಆದರೆ ಕುಚ್ಚಲಕ್ಕಿ ಬಿಟ್ಟು ಉಳಿದ ಮಾದರಿಯ ಅಕ್ಕಿ ರಫ್ತಿನ ಮೇಲೆ ಶೇ. 20 ತೆರಿಗೆ ಹೇರಿದೆ. ಈ ಕುರಿತ ಅಧಿಸೂಚನೆಯನ್ನು ಸಾಮಾನ್ಯ ವಿದೇಶಿ ವಹಿವಾಟಿನ ನಿರ್ದೇಶನಾಲಯ (ಡಿಜಿಎಫ್​ಟಿ) ಹೊರಡಿಸಿದೆ.

    ದೇಶೀಯ ಕುಕ್ಕುಟೋದ್ಯಮ ಮತ್ತು ಆಹಾರ ತಯಾರಿಕೆಗೆ ನುಚ್ಚಿನ ಕೊರತೆ ಎದುರಾಗಿರುವುದು ಇದಕ್ಕೆ ಕಾರಣ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾನ್ಶು ಪಾಂಡೆ ತಿಳಿಸಿದ್ದಾರೆ.

    2021-22ರಲ್ಲಿ ಸುಮಾರು 40 ಲಕ್ಷ ಟನ್ ನುಚ್ಚು ರಫ್ತಾಗಿದೆ. ಇದರಲ್ಲಿ 10.60 ಲಕ್ಷ ಟನ್ ಚೀನಾಕ್ಕೆ ಪೂರೈಕೆ ಆಗಿದೆ. ಕುಚುಲಕ್ಕಿ ಮತ್ತು ಬಾಸುಮತಿ ಅಕ್ಕಿಯನ್ನು ನಿರ್ಬಂಧ ಕ್ರಮದಿಂದ ಹೊರಗಿಡಲಾಗಿದೆ. ಏಕೆಂದರೆ ಇವೆರಡೂ ಮಾದರಿಯ ಅಕ್ಕಿಯು ಅನೇಕ ದೇಶದ ಸಾಮಾನ್ಯ ಆಹಾರ ಆಗಿದೆ ಎಂದು ಪಾಂಡೆ ಹೇಳಿದ್ದಾರೆ. ಅಕ್ಕಿ ನುಚ್ಚಿನ ರಫ್ತು ನಿರ್ಬಂಧದಿಂದ ಭಾರತೀಯ ಆಹಾರ ನಿಗಮ (ಎಫ್​ಸಿಐ) ಮೇಲಿನ ಒತ್ತಡ ಕಡಿಮೆ ಆಗಲಿದೆ. ಜತೆಗೆ ಅಕ್ಕಿ ನುಚ್ಚಿನಿಂದ ತಯಾರಿಸುವ ಎಥನಾಲ್​ಗೆ ಪೂರೈಕೆ ಕೊರತೆ ಆಗದಂತೆ ನೋಡಿಕೊಳ್ಳಬಹುದು ಎಂದಿದ್ದಾರೆ.

    2021-22ರಲ್ಲಿ 81 ಸಾವಿರ ಟನ್ ನುಚ್ಚನ್ನು ಎಫ್​ಸಿಐ ಎಥನಾಲ್ ತಯಾರಿಕೆಗೆ ಪೂರೈಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಗಸ್ಟ್​ವರೆಗೆ ನುಚ್ಚಕ್ಕಿ ಬೇಡಿಕೆ 10.40 ಲಕ್ಷ ಟನ್​ಗೆ ಏರಿಕೆ ಆಗಿದೆ. ಮುಕ್ತ ಮಾರುಕಟ್ಟೆಯಲ್ಲಿ ನುಚ್ಚಕ್ಕಿ ದೊರೆಯುತ್ತಿಲ್ಲ. ಹೀಗಾಗಿ ಇದರ ಬೆಲೆ ಕೂಡ ಹೆಚ್ಚಳ ಆಗಿದೆ.

    ಜಾಗತಿಕವಾಗಿ ಸವಾಲು

    ಭಾರತದಲ್ಲಿ ಭತ್ತ ಬಿತ್ತನೆ ಪ್ರದೇಶ ಕಡಿಮೆ ಆಗಿರುವುದುರಿಂದ ಜಾಗತಿಕವಾಗಿ ಅಕ್ಕಿ ಪೂರೈಕೆ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ, ಜಾಗತಿಕ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ (ಚೀನಾ ಮೊದಲ ಸ್ಥಾನ) ಶೇ. 40ರಷ್ಟು ಭಾರತದಲ್ಲಿ ಬೆಳೆಯಲಾಗುತ್ತದೆ. 2021-22ನೇ ಸಾಲಿನಲ್ಲಿ 2.12 ಕೋಟಿ ಟನ್ ಅಕ್ಕಿ ರಫ್ತಾಗಿದ್ದು, ಈ ಪೈಕಿ ಸುಮಾರು 40 ಲಕ್ಷ ಟನ್ ಅಕ್ಕಿ ಬಾಸುಮತಿಯದ್ದಾಗಿದೆ. ಪ್ರಸಕ್ತ ವರ್ಷದಲ್ಲಿ ಆಗಸ್ಟ್ ವರೆಗೆ 93.50 ಲಕ್ಷ ಟನ್ ಅಕ್ಕಿ ರಫ್ತು ಆಗಿದೆ. ಕಳೆದ ವರ್ಷ ಇದೇ ವೇಳೆ 83.60 ಲಕ್ಷ ಟನ್ ಅಕ್ಕಿ ರಫ್ತಾಗಿತ್ತು.

    ವಿಡಿಯೋ: ನಡುರಸ್ತೆಯಲ್ಲೇ ಯುವಕ-ಯುವತಿ ಮಾಡಿದ ಈ ಕೆಲಸ ಈಗ ಭಾರೀ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts