More

  ಅಪರಾಧ ಪ್ರಕರಣಗಳು ಇಳಿಕೆ

  ಮಂಗಳೂರು: ಕರೊನಾ ಸೋಂಕು ಅಪರಾಧ ಚಟುವಟಿಕೆ ನಡೆಸುವವರಿಗೂ ಆತಂಕ ಉಂಟು ಮಾಡಿದ್ದು , ಲಾಕ್‌ಡೌನ್ ಆದ ಬಳಿಕದ 13 ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣ ಎರಡಂಕೆ ಮೀರಿಲ್ಲ. ಅದು ಕೂಡ ನಡೆದಿರುವುದು ಸಾಮಾನ್ಯ ಸ್ವರೂಪದ ಅಪರಾಧ ಕೃತ್ಯಗಳು.

  ಉಭಯ ಜಿಲ್ಲೆಗಳಲ್ಲೂ ಪ್ರತಿದಿನವೂ ಸರಿಸುಮಾರು 10-15 ಪ್ರಕರಣಗಳು ದಾಖಲಾಗುತ್ತಿದ್ದವು. ಇಂದು ಯಾವುದೇ ದೊಡ್ಡ ಮಟ್ಟದ ಅಪರಾಧ ಪ್ರಮಾಣಗಳು ನಡೆಯುತ್ತಿಲ್ಲ. ಕರೋನಾ ಅಪರಾಧಗಳಿಗೂ ನಿಯಂತ್ರಣ ಹೇರಿದೆ.

  ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 21 ಹಾಗೂ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ 18 ಒಟ್ಟು 39 ಪೊಲೀಸ್ ಠಾಣೆಗಳಿವೆ. ಈ ಪೈಕಿ 6 ಸಂಚಾರಿ ಪೊಲೀಸ್ ಠಾಣೆಗಳಿವೆ. ಇದರಲ್ಲಿ ದಿನವೊಂದಕ್ಕೆ ಸರಾಸರಿ 10ರಿಂದ 12 ಅಪಘಾತ ಸಂಬಂಧಿತ ಪ್ರಕರಣಗಳು ದಾಖಲಾಗುತ್ತಿದ್ದವು. ಕಳೆದ 12 ದಿನಗಳಲ್ಲಿ ಕೇವಲ 5 ಅಪಘಾತ ಪ್ರಕರಣಗಳು ದಾಖಲಾಗಿವೆ. ಅಪಘಾತದಿಂದ ಒಂದು ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ಎರಡು ಮಹಿಳಾ ಪೊಲೀಸ್ ಠಾಣೆಗಳಿದ್ದು, ಇಲ್ಲಿಗೆ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿ ದಿನಕ್ಕೆ ಕನಿಷ್ಠ 6 ಪ್ರಕರಣಗಳಾದರೂ ಬರುತ್ತವೆ. ಪ್ರಸ್ತುತ ಈ ಪ್ರಕರಣಗಳೂ ಕಡಿಮೆಯಾಗಿವೆ. ಇತರ ಠಾಣೆಗಳಲ್ಲಿ 13 ದಿನಗಳಲ್ಲಿ ಒಟ್ಟು 18 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಶ್ಯ ವಾಹನ ಬಿಟ್ಟು ಇನ್ನಾವುದೇ ವಾಹನ ರಸ್ತೆಗೆ ಇಳಿಯದಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರಣದಿಂದ ಶೇ.90ರಷ್ಟು ಮಂದಿ ಮನೆಯಿಂದ ವಾಹನ ರಸ್ತೆಗೆ ಇಳಿಸಿಲ್ಲ. ಅವಶ್ಯ ಸಾಮಗ್ರಿ ತರಲು ಹೆಚ್ಚು ದೂರ ಹೋಗದೆ ತಕ್ಷಣ ಮನೆಗೆ ಬರುತ್ತಿದ್ದಾರೆ. ಆದ್ದರಿಂದ ರಸ್ತೆಗಳೂ ಖಾಲಿ ಖಾಲಿಯಾಗಿವೆ. ಇದರಿಂದ ಅಪಘಾತ ಪ್ರಮಾಣವೂ ಇಳಿಮುಖವಾಗಿದೆ.

  ಮದ್ಯ ಮಾರಾಟ ಸ್ಥಗಿತವಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಅಕ್ರಮ ಕಳ್ಳಭಟ್ಟಿ ತಯಾರಿಸುವ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿವೆ. ಇದರ ಜತೆಗೆ ಮದ್ಯ ಸಂಗ್ರಹಿಸಿಟ್ಟು, ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಪ್ರಕರಣಗಳೂ ಹಲವು ಕಡೆ ವರದಿಯಾಗಿದೆ. ಅಬಕಾರಿ ಇಲಾಖೆ ತಾಲೂಕು ಮಟ್ಟದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  ಏನೆಲ್ಲ ಪ್ರಕರಣಗಳು?: ದೇರಳಕಟ್ಟೆಯಲ್ಲಿ ಮದ್ಯದಂಗಡಿಯ ಶಟರ್ ಮುರಿದು ಒಳ ನುಗ್ಗಿ ಕಳವು ಮಾಡಿರುವುದು, ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯರಿಗೆ ಜೀವ ಬೆದರಿಕೆ ಹಾಕಿರುವುದು, ಒಬ್ಬರು ಕರೊನಾ ಭೀತಿಯಿಂದ ಹಾಗೂ ಇಬ್ಬರು ಮದ್ಯ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದು, ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಎರಡು ಪ್ರಕರಣ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಎರಡು ಪ್ರಕರಣ, ಗಡಿಯಲ್ಲಿ ಕರ್ತವ್ಯ ನಿರತ ಸುಳ್ಯ ಪೊಲೀಸರ ಮೇಲೆ ಹಲ್ಲೆ, ಮೂರು ಕಡೆ ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಣ್ಣ ಪುಟ್ಟ ಅಪರಾಧ ಪ್ರಕರಣಗಳ ಬಗ್ಗೆ ವಿವಿಧ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಉಳಿದಂತೆ ಕೊಲೆ, ದರೋಡೆ, ಕೊಲೆ ಯತ್ನ ಮೊದಲಾದ ಗಂಭೀರ ಸ್ವರೂಪದ ಒಂದು ಪ್ರಕರಣವೂ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ಲಾಕ್‌ಡೌನ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಘಾತ ಹಾಗೂ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಅಪರಾಧ ಕೃತ್ಯಕ್ಕೆ ಪ್ರೇರಣೆ ನೀಡುವ ಅಮಲು ಪದಾರ್ಥ ಜನರ ಕೈಗೆ ಸಿಗುತ್ತಿಲ್ಲ. ಕರೊನಾ ನಿಯಂತ್ರಣಕ್ಕೆ ಸರ್ಕಾರದ ಆದೇಶ ಪಾಲಿಸುವ ಮೂಲಕ ಎಲ್ಲರೂ ಕೈ ಜೋಡಿಸಬೇಕು.

  ಲಕ್ಷ್ಮೀಪ್ರಸಾದ್
  ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ

  ಕ್ರೈಂ ರೇಟ್ ಗಣನೀಯ ಇಳಿಕೆ
  ಉಡುಪಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಹೇರಿದ ಬಳಿಕ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡು ಬಂದಿದೆ.

  ದರೋಡೆ, ಕಳ್ಳತನ, ವಂಚನೆ, ಅಪಘಾತ, ಜೀವ ಬೆದರಿಕೆ, ಕಿರುಕುಳ, ಗಾಂಜಾ, ಅಮಲು ಪದಾರ್ಥ ಸೇವನೆ, ಇಸ್ಪೀಟು, ಹೊಡೆದಾಟ ಮೊದಲಾದ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತಿನಿತ್ಯ 10 ರಿಂದ 15 ಪ್ರಕರಣಗಳು ದಾಖಲಾಗುತ್ತಿತ್ತು. ಮಾ.23 ರಿಂದ ಲಾಕ್‌ಡೌನ್ ಬಳಿಕ ಶೇ.95 ರಷ್ಟು ಅಪರಾಧ ಪ್ರಕರಣ ಸಂಖ್ಯೆ ಇಳಿಕೆಯಾಗಿದ್ದು, ಬೆರಳೆಣಿಕೆ ಕೇಸುಗಳಷ್ಟೆ ದಾಖಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ಲಾಕ್‌ಡೌನ್ ಬಳಿಕ ಎಷ್ಟು ಕೇಸುಗಳು: ಜಿಲ್ಲೆಯಲ್ಲಿ 24 ಪೊಲೀಸ್ ಠಾಣೆಗಳಿವೆ. ಉಡುಪಿ ಸಬ್ ಡಿವಿಜನ್‌ನಲ್ಲಿ 9, ಕಾರ್ಕಳ ಸಬ್ ಡಿವಿಜನ್‌ನಲ್ಲಿ 4, ಕುಂದಾಪುರ ಸಬ್ ಡಿವಿಜನ್‌ನಲ್ಲಿ 7 ಪೊಲೀಸ್ ಠಾಣೆಗಳಿವೆ. ಇದರಲ್ಲಿ ಉಡುಪಿ ಸಂಚಾರ, ಕುಂದಾಪುರ ಸಂಚಾರ, ಉಡುಪಿ ಮಹಿಳಾ ಪೊಲೀಸ್ ಠಾಣೆಯೂ ಸೇರಿದೆ. ಲಾಕ್‌ಡೌನ್‌ನಿಂದ ಇಲ್ಲಿವರೆಗೆ ವಿವಿಧ ರೀತಿಯ 35 ಪ್ರಕರಣಗಳಷ್ಟೇ ದಾಖಲಾಗಿದ್ದು, ಕೆಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣ ವರದಿಯಾಗಿಲ್ಲ, ಆಸ್ತಿ-ಕಲಹ ಮೊದಲಾದ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ಕಾರ್ಯ ಕಲಾಪಗಳು ನಡೆಯದ ಕಾರಣ ನ್ಯಾಯಾಲಯದ ಮೂಲಕ ದಾಖಲಾಗುವ ಪ್ರಕರಣಗಳು ದಾಖಲಾಗುತ್ತಿಲ್ಲ.

  ಉಡುಪಿ ಜಿಲ್ಲಾ ಪೊಲೀಸ್ ವೆಬ್‌ಸೈಟ್ ಕ್ರೈಂ ರಿಪೋರ್ಟ್ ಪ್ರಕಾರ ಮಾ.23 ರಂದು ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಅಪರಾಧ ಪ್ರಕರಣ ವರದಿಯಾಗಿಲ್ಲ. 24ಕ್ಕೆ 2 ಗಾಂಜಾ ಸೇವನೆ, 1 ಕಳ್ಳತನ, 1 ಇಸ್ಪೀಟು ಜುಗಾರಿ, 1 ಅಕ್ರಮ ಮದ್ಯ, 1 ವಂಚನೆ ನ್ಯಾಯಾಲಯ ಮುಖೇನ ಖಾಸಗಿ ದೂರು ಪ್ರಕರಣ, ಮಾ.25ರಂದು ರಾತ್ರಿ 7 ರಿಂದ ಮಾ.26 ರಾತ್ರಿ 8 ವರೆಗೆ ಅಪರಾಧ ಪ್ರಕರಣ ವರದಿಯಾಗಿಲ್ಲ. ಮಾ.27ರಂದು 8, ಮಾ.28 ರಂದು 8, ಮಾ.29 ರಂದು 4 ಪ್ರಕರಣ ವರದಿಯಾಗಿದೆ. ಮಾ.30 ರಂದು ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಕ್ರೈಂ ವರದಿಯಾಗಿಲ್ಲ. 7 ಗಂಟೆ ಬಳಿಕ 1 ಹಲ್ಲೆ ಪ್ರಕರಣ ವರದಿಯಾಗಿದೆ. ಮಾ.31ರಂದು ಎರಡು, ಏ.1ರಂದು 6, ಏ.2ರಂದು 4, ಏ.3 ರಂದು ರಾತ್ರಿ 7ರವರೆಗೆ 3 ಪ್ರಕರಣ ದಾಖಲಾಗಿದ್ದು, ಏ.3 ರಂದು ರಾತ್ರಿ 7ರಿಂದ ಏ.4ರ ಬೆಳಗ್ಗೆ 8ರವರೆಗೆ ಅಪರಾಧ ಪ್ರಕರಣ ವರದಿಯಾಗಿಲ್ಲ.

  ಯುಡಿಆರ್ ಕೇಸ್‌ಗಳು ಮಾತ್ರ: ಆತ್ಮಹತ್ಯೆಯಂತಹ ಯುಡಿಆರ್( ಅನ್ ನ್ಯಾಚುರಲ್ ಡೆತ್) ಕೇಸ್‌ಗಳು ಮಾತ್ರವಿದ್ದು, ಬೇರೆ ಬೇರೆ ರೀತಿಯ ಅಪರಾಧ ಪ್ರಕರಣಗಳು ಕಡಿಮೆ ಆಗಿದೆ ಎನ್ನುತ್ತಾರೆ ಪೊಲೀಸರು. ಇತ್ತೀಚೆಗೆ ಗಾಂಜಾ ಸೇವನೆ ಪ್ರಕರಣಗಳು ಜಿಲ್ಲೆಯಲ್ಲಿ ಅತಿಯಾಗಿದ್ದವು. ಸದ್ಯ ಎಲ್ಲಾ ಗಡಿ, ಸಾರಿಗೆ ಬಂದ್ ಆಗಿರುವ ಕಾರಣದಿಂದ ಗಾಂಜಾ ಸೇವನೆ ಶೇ.99 ರಷ್ಟು ಕಡಿಮೆಯಾಗಿದೆ. ಮದ್ಯದ ಅಂಗಡಿಗಳು ಬಂದ್ ಆಗಿರುವುದರಿಂದ ಗಲಾಟೆ, ಇನ್ನಿತರೆ ಅಪರಾಧ ಕಡಿಮೆಯಾಗಲು ಕಾರಣವಾಗಿದ್ದು, ಅಪಘಾತ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಪೊಲೀಸ್ ಅಧಿಕಾರಿಗಳು.

  ಎರಡೇ ದಿನದಲ್ಲಿ 67 ವಾಹನ ವಶಕ್ಕೆ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಉಲ್ಲಂಘನೆ ಮಾಡಿದವರು, ಪೊಲೀಸರೊಂದಿಗೆ ದುರ್ವರ್ತನೆ ತೋರಿದವರು, ಕ್ವಾರಂಟೈನ್ ಉಲ್ಲಂಘಿಸಿದವರು ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ದಿನಗಳಿಂದ ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿತಿದ್ದವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಏ.3 ರಂದು ಮೂರು ಆಟೋ ರಿಕ್ಷಾ, 50 ದ್ವಿಚಕ್ರ ವಾಹನ ಸೇರಿ ಒಟ್ಟು 53 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಏ.4ರಂದು 14 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಪಾಲು ಉಡುಪಿ ನಗರದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲೆ ಇರುವುದರಿಂದ ಜಿಲ್ಲೆಯಲ್ಲಿ ಶೇ.95 ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿದೆ. ಲಾಕ್‌ಡೌನ್ ನಿಯಮ ಪಾಲಿಸುವ ಮೂಲಕ ಆರೋಗ್ಯ ಸುರಕ್ಷತೆಗಾಗಿ ಎಲ್ಲರೂ ಮನೆಯಲ್ಲೇ ಇರಬೇಕು. ತೀರಾ ಅಗತ್ಯ ಹೊರತು ಅನಗತ್ಯ ತಿರುಗಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

  ಕುಮಾರಚಂದ್ರ

  ಎಎಸ್‌ಪಿ, ಉಡುಪಿ ಜಿಲ್ಲೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts