More

    ಹಾನಗಲ್ಲ ಬರಪೀಡಿತ ತಾಲೂಕೆಂದು ಘೋಷಿಸಿ

    ಹಾನಗಲ್ಲ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿರುವ ನ್ಯೂನತೆ ಸರಿಪಡಿಸಲು ಹಾಗೂ ಹಾನಗಲ್ಲ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ತಾಲೂಕು ಆಡಳಿತದ ಮೂಲಕ ರೈತ ಸಂಘದ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.

    ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಆರಂಭಗೊಳ್ಳಬೇಕಿದ್ದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಕಂಪನಿ ಇನ್ನೂ ನಿಗದಿಯಾಗದಿರುವುದರಿಂದ ಪ್ರಕ್ರಿಯೆಗಳು ವಿಳಂಬಗೊಂಡಿದೆ. ಆದರೆ, ಸಂರಕ್ಷಣಾ ತಂತ್ರಾಂಶದಲ್ಲಿ ಅಡಕೆ, ಶುಂಠಿ, ಹಸಿ ಮೆಣಸು ಬೆಳೆಗಳಿಗೆ ಮೇ 1ರಿಂದ ಜೂ. 30ರವರೆಗೆ ಬೆಳೆ ವಿಮೆ ಕಂತು ತುಂಬಲು ಕಾಲಾವಕಾಶ ನೀಡಲಾಗಿದೆ. ವಿಮೆ ಕಂತು ತುಂಬಲು ಕೇವಲ 6 ದಿನಗಳ ಅವಕಾಶವಿದ್ದು, ಈವರೆಗೂ ಯಾವುದೇ ವಿಮಾ ಕಂಪನಿಗಳೂ ಇದರಲ್ಲಿ ಪಾಲ್ಗೊಂಡಿಲ್ಲ. ಇದನ್ನೆಲ್ಲ ಗಮನಿಸಿದರೆ ಸರ್ಕಾರ ತೋಟಗಾರಿಕೆ ಬೆಳೆಗಳ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕೈಬಿಡುವ ಲಕ್ಷಣಗಳು ಕಂಡುಬರುತ್ತಿವೆ. ಇಂಥ ಆಲೋಚನೆಗಳು ಅವೈಜ್ಞಾನಿಕವಾಗಿದ್ದು, ರೈತ ಸಮುದಾಯದ ವಿರುದ್ಧವಾಗಲಿವೆ. ರೈತಪರ ಯೋಜನೆಗಳು ಹಾಗೂ ಅನುದಾನ, ಸಹಾಯಧನ ಕಡಿತಗೊಳಿಸುವ ಚಿಂತನೆಗಳನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ ಕಂತು ತುಂಬುವ ಅವಧಿ ವಿಸ್ತರಿಸಬೇಕು ಹಾಗೂ ವಿಮಾ ಅವಧಿ ಮರುಪರಿಶೀಲಿಸಿ, ತೋಟಗಾರಿಕೆ ಬೆಳೆಗಳಿಗೆ ಜೂನ್ ತಿಂಗಳಿಂದ ಒಳಗೊಳ್ಳುವಂತೆ ವಿಮಾ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ರೈತರು ಆಗ್ರಹಿಸಿದ್ದಾರೆ.

    ಪ್ರಸಕ್ತ ಮುಂಗಾರು ತೀವ್ರ ದುರ್ಬಲಗೊಂಡಿದ್ದರಿಂದ ತಾಲೂಕಿನಾದ್ಯಂತ ಯಾವುದೇ ಬೆಳೆಗಳನ್ನು ಬಿತ್ತನೆ ಮಾಡಲು ಸಾಧ್ಯಯವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಬಿಸಿಲಿನ ಪ್ರಖರತೆಗೆ ಹಾಗೂ ಮಳೆಯಾಗದಿರುವುದರಿಂದ ಸಂಪೂರ್ಣವಾಗಿ ಒಣಗಿ ಹೋಗಿವೆ. ಈ ಹಿನ್ನೆಲೆಯಲ್ಲಿ ಹಾನಗಲ್ಲ ತಾಲೂಕನ್ನು ಸರ್ಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

    ಕಂದಾಯ ನಿರೀಕ್ಷಕ ರಾಘವೇಂದ್ರ ಮಲ್ಲಾಡದ ಮನವಿ ಸ್ವೀಕರಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ಕಾರ್ಯದರ್ಶಿಗಳಾದ ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಪದಾಧಿಕಾರಿಗಳಾದ ಶ್ರೀಕಾಂತ ದುಂಡಣ್ಣನವರ, ಸೋಮಣ್ಣ ಜಡೆಗೊಂಡರ, ಎಂ.ಎಂ. ಬಡಗಿ, ಉಮೇಶ ಮೂಡಿ, ನಿಂಗನಗೌಡ ಪಾಟೀಲ, ಸಿ.ಕೆ. ಪಾಟೀಲ, ಮುತ್ತಪ್ಪ ಹಾವನೂರ, ಶಾಂತಯ್ಯ ಹಿರೇಮಠ, ಲೋಕೇಶ ಹುಲಿ, ಸುರೇಶ ಕೋಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts