More

  ಅಭಿವೃದ್ಧಿಗೆ ಸ್ಪಂದಿಸದಿದ್ದರೆ ನಿರ್ಧಾಕ್ಷಿಣ್ಯ ಕ್ರಮ

  ಅರಕಲಗೂಡು: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸದ ಪಿಡಿಒಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಮಂಜು ಎಚ್ಚರಿಸಿದರು.

  ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಸದ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸುವಂತ್ತಿಲ್ಲ, ನರೇಗಾ ಯೋಜನೆಯ ಕಾಮಗಾರಿಗಳಿಂದ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಪಿಡಿಒಗಳು ಹೆಚ್ಚಿನ ನಿಗಾವಹಿಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
  ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಗ್ರಾಪಂಗಳಿಂದ ರಸ್ತೆ, ಚರಂಡಿ, ಕಾಲುವೆ ಮತ್ತಿತರ ಕಾಮಗಾರಿಗಳಿಗೆ ಅನುಮೋದನೆ ಕೋರಿ ಹೆಚ್ಚಿನ ಪ್ರಸ್ತಾವನೆಗಳು ಬರುತ್ತಿವೆ. ಜನರಿಗೆ ವೈಯಕ್ತಿಕವಾಗಿ ಅನುಕೂಲ ಆಗುವಂತಹ ಜಮೀನಗಳಲ್ಲಿ ಗಿಡ ನೆಡುವುದು, ಬದು ನಿರ್ಮಾಣ, ಶೌಚಾಲಯಗಳಿಗೆ ಪ್ರಸ್ತಾವನೆಗಳನ್ನು ಯಾರು ಕಳುಹಿಸುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ, ಗ್ರಂಥಾಲಯ ಇಲ್ಲ. ಅಂಗನವಾಡಿ ಕಟ್ಟಡಗಳು ನಿರ್ಮಾಣಗೊಂಡಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ತಪ್ಪಿತಸ್ಥರ ವಿರುದ್ಧ ಕ್ರಮ: ಕೊಣನೂರಿನಲ್ಲಿ ಪೊಲೀಸ್ ಠಾಣೆ ಮಾರ್ಗವಾಗಿ ಕೆರೆಕೋಡಿಯಮ್ಮ ದೇವಸ್ಥಾನದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸಿಮೆಂಟ್ ರಸ್ತೆ ನಿರ್ಮಿಸಿದ್ದೆ. ಈ ರಸ್ತೆಯನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಂಡಿರುವ ಕುರಿತು ಬಿಲ್ ಮಾಡಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ಸೂಚಿಸಿದರು.

  ಗ್ರಾಮೀಣ ಪ್ರದೇಶದ ರೈತರು ವಿದ್ಯುತ್ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಸೆಸ್ಕ್ ಮತ್ತು ಗ್ರಾಪಂ ಅಧಿಕಾರಿಗಳು ಸಹಾಯಧನದಡಿ ಸೋಲಾರ್ ಸೌಲಭ್ಯ ಪಡೆದುಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

  ತಾಲೂಕಿನಲ್ಲಿ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದೆ ತೀವ್ರ ಹಿನ್ನಡೆಯಾಗಿದ್ದು, 10 ಗ್ರಾಪಂ ವ್ಯಾಪ್ತಿಯಲ್ಲಿ ಶೇ. 70ಕ್ಕಿಂತ ಕಡಿಮೆ ಸಾಧನೆ ದಾಖಲಾಗಿದೆ. ಗ್ರಾಪಂನಲ್ಲಿ ಇ-ಸ್ವತ್ತುಗಳನ್ನು ಮಾಡಿಕೊಡದ ಕಾರಣ ಗ್ರಾಮೀಣ ಭಾಗದ ಜನರು ಜಿಪಂ ವರೆಗೆ ದೂರುಗಳನ್ನು ಹೊತ್ತು ತರುವಂತಾಗಿದೆ ಎಂದು ಜಿಪಂ ಸಿಇಒ ಪೂರ್ಣಿಮಾ ಸಭೆಗೆ ಮಾಹಿತಿ ನೀಡಿದರು. ಇದರಿಂದ ಕೆಂಡಮಂಡಲವಾದ ಶಾಸಕರು ಈ ಕುರಿತು ಪಿಡಿಒಗಳು ಗಮನ ಹರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಶೇ.50ರಷ್ಟು ಹಣವನ್ನು ಕುಡಿಯುವ ನೀರಿಗಾಗಿ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಬರದ ಕಾರಣ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ತಲೆದೋರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ತಿಳಿಸಿದರು.
  ಜಿಲ್ಲೆಯಲ್ಲಿ ಒಂದು ಸಾವಿರ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಅನುಮೋದನೆ ನೀಡಲಾಗಿದೆ. ಒಂದು ಗ್ರಾಪಂಗೆ 5 ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲು 81 ಸಾವಿರ ರೂ. ನೀಡಲಾಗುವುದು. ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.

  ಕಂದಾಯ ಇಲಾಖೆ ವತಿಯಿಂದ ಎಲ್ಲ ಹಳ್ಳಿಗಳಿಗೆ ಸ್ಮಶಾನ ಜಾಗ ಗುರುತಿಸಿ ಗ್ರಾಪಂಗೆ ಹಸ್ತಾಂತರಿಸಲಾಗಿದೆ. ಆದರೆ ರುದ್ರಭೂಮಿಗಳ ಅಭಿವೃದ್ಧಿಯನ್ನು ಸ್ಥಳೀಯ ಪಂಚಾಯಿತಿಗಳು ನಿರ್ಲಕ್ಷೃ ಮಾಡಿವೆ. ದೇವಸ್ಥಾನಕ್ಕಿಂತ ರುದ್ರಭೂಮಿಗಳು ಮುಖ್ಯವಾಗಿದ್ದ ಗ್ರಾಪಂ ಅಧಿಕಾರಿಗಳು ಇವುಗಳ ಅಭಿವೃದ್ಧಿ ಮಾಡಬೇಕು ಎಂದು ಶಾಸಕರು ತಾಕೀತು ಮಾಡಿದರು.

  ಎಲ್ಲರಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ಕಡ್ಡಾಯವಾಗಿ ಮಾಡಿಸಬೇಕು. ಪ್ರತಿ ರೈತರು ಬೆಳೆವಿಮೆ ಮಾಡಿಸಲು ಕೃಷಿ ಇಲಾಖೆ ತುರ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಅವರಿಗೆ ಸೂಚಿಸಿದರು. ತಾಪಂ ಪ್ರಭಾರಿ ಇಒ ಅಶೋಕ್, ತಾಪಂ ಆಡಳಿತಾಧಿಕಾರಿ ಚಂದ್ರಶೇಖರ್ ಮತ್ತಿತರರು ಸಭೆಯಲ್ಲಿದ್ದರು.

  ಬರ ಪರಿಸ್ಥಿತಿಯಿಂದ ಬಸವಳಿದಿರುವ ರೈತರಿಗೆ ಆರ್ಥಿಕವಾಗಿ ಅನುಕೂಲ ಆಗುವಂತಹ ಕಾಮಗಾರಿಗಳನ್ನು ಕೈಗೊಳ್ಳಲು ಪಿಡಿಒಗಳು ಗಮನ ಹರಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸದ ಕಾರಣ ರೈತರ ಮಕ್ಕಳಿಗೆ ಹೆಣ್ಣು ಕೊಡದ ಸ್ಥಿತಿ ಬಂದೊದಗಿದೆ ಎಂದು ಶಾಸಕ ಮಂಜು ಕಿಡಿಕಾರಿದರು.

  ಸಿಇಒ ಬೇಸರ

  ಗ್ರಾಪಂ ಚುನಾಯಿತ ಮಹಿಳೆಯರಿಗೆ ಕಾರ್ಯಾಗಾರ ಏರ್ಪಡಿಸಿದರೆ ಶೇ.30ರಷ್ಟು ಮಹಿಳೆಯರು ಮಾತ್ರ ಹಾಜರಾಗುತ್ತಿದ್ದಾರೆ. ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಮಹಿಳಾ ಸದಸ್ಯರು ತಿಳಿವಳಿಕೆ ಪಡೆದರೂ ನಮ್ಮನ್ನೇ ಪ್ರಶ್ನಿಸಲು ಮುಂದಾಗುತ್ತಾರೆ. ಕೆಲವೆಡೆ ಪಿಡಿಒಗಳು ಸಭೆಯ ಮಾಹಿತಿಯನ್ನೇ ನೀಡುತ್ತಿಲ್ಲ ಎಂದು ಜಿಪಂ ಸಿಇಒ ಬೇಸರ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts