More

    ಗೌರವ ಧನವಿಲ್ಲದೆ ಎಸ್‌ಡಿಎಂಸಿ ವಿಸರ್ಜಿಸುವ ನಿರ್ಧಾರ: ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಬೈಂದೂರು ತಾಲೂಕು ಉಪ್ಪುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಆದರೆ ಸಾಕಷ್ಟು ಶಿಕ್ಷಕರಿಲ್ಲ. ಅತಿಥಿ ಶಿಕ್ಷರಿಗೆ ಕಳೆದೆರಡು ತಿಂಗಳಿಂದ ಗೌರವ ಧನ ಬಿಡುಗಡೆಯಾಗದಿರುವುದರಿಂದ ಅವರು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಶಾಲೆಯ ಖರ್ಚುವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೆ ಶಾಲಾಭಿವೃದ್ಧಿ ಸಮಿತಿಯನ್ನೇ ವಿಸರ್ಜಿಸುವ ನಿರ್ಧಾರಕ್ಕೆ ಸಮಿತಿಯ ಸದಸ್ಯರು ಬಂದಿದ್ದಾರೆ.

    ಇಲ್ಲಿ 5 ಜನ ಗೌರವ ಶಿಕ್ಷಕರಿದ್ದು, ಎಸ್‌ಡಿಎಂಸಿ ಮತ್ತೆ 4 ಶಿಕ್ಷಕರನ್ನು ನೇಮಕ ಮಾಡಿ ಸಂಬಳ ನೀಡುತ್ತಿದೆ. ಶಿಕ್ಷಕರು ಬಿಸಿಯೂಟ, ಇಲಾಖೆ ಮಾಹಿತಿ ಇನ್ನಿತರ ಕೆಲಸ ಮಾಡಬೇಕಾಗುವುದರಿಂದ ಬೋಧನೆಗೆ ಶಿಕ್ಷಕರ ಕೊರತೆಯಾಗುತ್ತಿದೆ. ಶಾಲಾ ಅಭಿವೃದ್ಧಿ ಸಮಿತಿ ನೇಮಕ ಮಾಡಿಕೊಂಡ ಶಿಕ್ಷಕರಿಗೆ ಸಂಬಳ ನೀಡಲು ಪೋಷಕರಿಂದ ಹಣ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಸಮಿತಿ ಶಿಕ್ಷಕರಿಗೆ ಸಂಬಳ ಹಾಗೂ 2 ಬಸ್ ಮೈಂಟೇನ್ ಮಾಡುವುದರಲ್ಲೇ ಸುಸ್ತಾಗಿ ಕೈಚೆಲ್ಲಿ ಶಾಲೆಯಿಂದ ಹೊರಹೋಗುವ ನಿರ್ಧಾರಕ್ಕೆ ಬಂದಿದೆ. ದಾನಿಗಳು, ಹಳೇ ವಿದ್ಯಾರ್ಥಿಗಳು 26 ಲಕ್ಷ ಖರ್ಚುಮಾಡಿ ಕೊಠಡಿ ಇನ್ನಿತರ ಮೂಲಸೌಲಭ್ಯ ನೀಡಿದ್ದರೂ ಇವೆಲ್ಲ ಶಿಕ್ಷಕರಿಲ್ಲದೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.

    ಉಪ್ಪುಂದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 411 ವಿದ್ಯಾರ್ಥಿಗಳಿದ್ದು, ಸರ್ಕಾರವೇ ರೂಪಿಸಿದ ನಿಯಮದಂತೆ 14 ಶಿಕ್ಷಕರಿರಬೇಕಿತ್ತು. ಈಗ ಇರುವುದು 8 ಮಂದಿ. ಈ ಪೈಕಿ ಒಬ್ಬರು ಮುಖ್ಯಶಿಕ್ಷಕ , ಮತ್ತೊಬ್ಬರು ದೈಹಿಕ ಶಿಕ್ಷಕರು. ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆ ಹಾಗೂ ಭವಿಷ್ಯದ ಮೇಲೆ ಪರಿಣಾಮವಾಗುತ್ತಿದೆ. ಈ ಸಮಸ್ಯೆ ಉಪ್ಪುಂದ ಸರ್ಕಾರಿ ಶಾಲೆಗೆ ಸೀಮಿತವಲ್ಲ.ರಾಜ್ಯದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಇದೇ ರಾಗ ಇದೇ ಹಾಡು.

    ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 388, ಹಿರಿಯ ಪ್ರಾಥಮಿಕ ಪ್ರಾಥಮಿ ಶಾಲೆಗಳಲ್ಲಿ 2200, ಪ್ರೌಢ ಶಾಲೆಗಳಲ್ಲಿ 5078 ಗೌರವ ಶಿಕ್ಷಕರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 388 ಅತಿಥಿ ಶಿಕ್ಷಕರಿದ್ದಾರೆ. ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10500 ರೂ., ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ಸಾವಿರ ರೂ.ಗೌರವ ಧನವಿದೆ.

    ಎಲ್‌ಕೆಜಿ, ಯುಕೆಜಿ, ಅಂಗ್ಲ ಮಾಧ್ಯಮ ಸಂಚಾರಕ್ಕೆ ಎರಡು ಬಸ್, ಹೆಚ್ಚುವರಿ 4 ಜನ ಶಿಕ್ಷಕರನ್ನು ನೇಮಿಸಿಕೊಂಡು ಎಸ್‌ಡಿಎಂಸಿ ಸಕ್ರಿಯವಾಗಿದ್ದರೂ ಸರ್ಕಾರ ಅತಿಥಿ ಶಿಕ್ಷಕರಿಗೆ ಗೌರವ ಧನ ನೀಡದಿರುವುದರಿಂದ ಸಮಸ್ಯೆಯಾಗುತ್ತಿದೆ. ಶಾಲಾ ಅಭಿವೃದಿಗೆ ಎಸ್‌ಡಿಎಂಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸರಿಯಾದ ಸ್ಪಂದನ ಸರ್ಕಾರದಿಂದ ಸಿಗದಿರುವುದು ಬೇಸರದ ಸಂಗತಿ. ಅತಿಥಿ ಶಿಕ್ಷಕರಿಗೆ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಎಸ್‌ಡಿಎಂಸಿ ವಿಸರ್ಜಿಸುತ್ತೇವೆ. ಸರ್ಕಾರವೇ ಶಾಲಾ ಉಸ್ತುವಾರಿ ನೋಡಿಕೊಳ್ಳಲಿ.
    -ಉದಯ ಪಡಿಯಾರ್, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪುಂದ

    ಎಸ್‌ಡಿಎಂಸಿಗೆ ಅನುದಾನ ಕೊಡಿ ಎಂದು ಆಗ್ರಹಿಸುತ್ತಿದ್ದರೂ ಸರ್ಕಾರ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಅತಿಥಿ ಶಿಕ್ಷಕರು ಸಂಬಳ ಕೊಡದಿದ್ದರೆ ಬಿಟ್ಟುಹೋಗುತ್ತಿದ್ದಾರೆ.ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಆಗುತ್ತಿದೆ. ಎಲ್ಲೆಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಸ್‌ಡಿಎಂಸಿ ಮಾಡಿದೆ ಅಲ್ಲಿ ಮಾನ್ಯತೆ ನೀಡಿ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಎಸ್‌ಡಿಎಂಸಿ ಇಡೀ ಶಾಲಾ ಗುಣಮಟ್ಟವನ್ನೇ ಸುಧಾರಿಸಿದ್ದು, ಅದನ್ನೇ ಸರ್ಕಾರ ಮಾದರಿಯಾಗಿ ಪರಿಗಣಿಸಿ ವ್ಯವಸ್ಥೆ ಮಾಡಿಕೊಡಬೇಕು. ಎಸ್‌ಡಿಎಂಸಿ ಕ್ರಿಯಾಶೀಲತೆಗೆ ಪ್ರೋತ್ಸಾಹ ಸಿಗದಿದ್ದರೆ ಖಂಡಿತವಾಗಿ ಹಿನ್ನೆಡೆಯಾಗಲಿದೆ. ಸಮಿತಿ ವಿಸರ್ಜಿಸುವ ನಿರ್ಧಾರಕ್ಕೆ ಬಂದರೂ ಅಚ್ಚರಿಯಿಲ್ಲ.
    -ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ., ಮಹಾಪೋಷಕ, ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ

    ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಇನ್ನೂ ಎರಡು ತಿಂಗಳಾಗಿಲ್ಲ. ಗೌರವ ಧನ ಬರುವುದು ಸ್ವಲ್ಪ ವಿಳಂಬ ಆಗಿರಬಹುದು, ಬರುತ್ತದೆ. ಶಿಕ್ಷಕರ ನೇಮಕಕ್ಕೆ ಜಿಲ್ಲೆಯಲ್ಲಿ 256 ಜನರ ಪರೀಕ್ಷೆಯಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಇನ್ನೆರೆಡು ತಿಂಗಳಲ್ಲಿ ನೇಮಕವಾಗಲಿದ್ದು, ಮತ್ತೆ ಶಿಕ್ಷಕರು ಬೇಕಾದರೆ ನೇಮಕಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಉಪ್ಪುಂದ ಶಾಲೆ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡುತ್ತೇನೆ.
    -ಪ್ರಸನ್ನ ಎಚ್., ಸಿಇಒ, ಉಡುಪಿ ಜಿಲ್ಲಾ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts