More

    ಮತದಾನ ಬಹಿಷ್ಕಾರಕ್ಕೆ ತೀರ್ಮಾನ

    ಹಾನಗಲ್ಲ: ತಾಲೂಕಿನ ತಿಳವಳ್ಳಿ ಸಮೀಪದ ಕೊಪ್ಪಗೊಂಡನಕೊಪ್ಪ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯ ನಾಗರಿಕರು ತಮ್ಮ ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಘೊಷಿಸಿದ್ದಾರೆ.

    ಈ ಕುರಿತು ಸಭೆ ನಡೆಸಿರುವ ಬಡಾವಣೆಯ ನಿವಾಸಿಗಳು, ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಥವಾ ತಾಲೂಕು ಆಡಳಿತ ಈ ಸಮಸ್ಯೆಯನ್ನು ಚುನಾವಣೆ ಪೂರ್ವದಲ್ಲಿಯೇ ಬಗೆಹರಿಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದಾರೆ.

    ಸಭೆಯಲ್ಲಿ ಮಾತನಾಡಿದ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಅಪ್ಪುಶೆಟ್ಟಿ, ಗ್ರಾಮದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ವಿದ್ಯಾನಗರ ಬಡಾವಣೆಗೆ ತಿಳವಳ್ಳಿ ಹಂಸಭಾವಿ ಮುಖ್ಯರಸ್ತೆಯಿಂದ ಸಂಪರ್ಕ ರಸ್ತೆ ಕೈಗೊಳ್ಳಬೇಕಾಗಿದೆ. ಆದರೆ, ಈ ಮಧ್ಯದಲ್ಲಿ ಶಾಂತೇಶ್ವರ ಪದವಿ ಪೂರ್ವ ಕಾಲೇಜ್ ಆವರಣವಿರುವುದರಿಂದ ಅಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ಕಾಲೇಜ್​ನ ಆಡಳಿತ ಮಂಡಳಿ ಒಪ್ಪಿಕೊಳ್ಳುತ್ತಿಲ್ಲ. ತಾತ್ಕಾಲಿಕವಾಗಿ ಈಗ ಶಾಂತೇಶ್ವರ ಪಪೂ ಕಾಲೇಜ್​ನ ಆವರಣದಲ್ಲಿ ಹಾಯ್ದು ವಿದ್ಯಾನಗರ ಬಡಾವಣೆಯ ನಾಗರಿಕರು ಓಡಾಡುತ್ತಿದ್ದಾರೆ ಎಂದರು.

    ಕಳೆದ ಮೂರು ದಶಕದ ಹಿಂದೆ ರಚನೆಗೊಂಡ ವಿದ್ಯಾನಗರ ಬಡಾವಣೆಯಲ್ಲಿ 80ಕ್ಕೂ ಅಧಿಕ ಮನೆಗಳು ನಿರ್ವಣಗೊಂಡಿದ್ದು, ಸುಮಾರು 250ಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಆದರೆ, ಈ ಬಡಾವಣೆ ನಿರ್ವಿುಸುವಾಗ ಮುಖ್ಯ ರಸ್ತೆಯಿಂದ ಬಡಾವಣೆಗೆ ಸಂಪರ್ಕ ರಸ್ತೆ ನಿರ್ವಣಗೊಳ್ಳದಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಇಒ, ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ತಾಲೂಕು ಆಡಳಿತವು ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಾಂತೇಶ್ವರ ಕಾಲೇಜ್​ನ ಆಡಳಿತ ಮಂಡಳಿಯವರೊಂದಿಗೆ ರ್ಚಚಿಸಿದರೆ ರಸ್ತೆ ಸಮಸ್ಯೆ ಬಗೆಹರಿಯಲಿದೆ ಎಂದು ಅಪ್ಪುಶೆಟ್ಟಿ ಅಭಿಪ್ರಾಯಪಟ್ಟರು.

    ಸಭೆಯಲ್ಲಿ ಬಡಾವಣೆಯ ನಿವಾಸಿಗಳಾದ ಬಿ.ವಿ. ಬಿರಾದಾರ, ಟಿ.ಐ. ಬುಡ್ಡನವರ, ಸದಾನಂದ ತುಕ್ಕೋಜಿ, ಶಾಂತಪ್ಪ ಅಂಗರಗಟ್ಟಿ, ಗದಿಗೆಪ್ಪ ಕೋಡಿಹಳ್ಳಿ, ಎಸ್.ಬಿ. ಎಮ್ಮೇರ, ಗಣೇಶಪ್ಪ ನೆಲ್ಲಿಕೊಪ್ಪ, ಮಂಜಪ್ಪ ಕಾನಮನಿ, ಹನುಮಂತಪ್ಪ ಪೂಜಾರ, ಸುಧಾ ಮುಳಗುಂದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts