More

    ಚಿಕಿತ್ಸೆ ಫಲಿಸದೆ ಗ್ರಾಪಂ ಮಾಜಿ ಅಧ್ಯಕ್ಷೆ ಸಾವು

    ಗದಗ: ಸಾಲಗಾರರ ಕಾಟ ತಾಳದೆ ಬೆಂಕಿ ಹಚ್ಚಿಕೊಂಡಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಅಡವಿಸೋಮಾಪೂರ ಗ್ರಾಪಂ ಮಾಜಿ ಅಧ್ಯಕ್ಷೆ ಸಂಗವ್ವ ಈರಪ್ಪ ಮೆಣಸಿನಕಾಯಿ (45) ಮೃತ ಮಹಿಳೆ. ಈ ಕುರಿತು ಅಡವಿಸೋಮಾಪೂರದ ಶ್ರೀಶೈಲಪ್ಪ ಚಕ್ರಣ್ಣವರ, ಯಶೋದಾ ಚಕ್ರಣ್ಣವರ, ಮಂಜುನಾಥ ಹಿರೇಮಠ ಎಂಬುವರು ವಿರುದ್ಧ (ನ. 17ರಂದು) ಪ್ರಕರಣ ದಾಖಲಾಗಿದೆ. ನ.13ರಂದು ಸಾಲಗಾರರು ಈರಪ್ಪ ಮೆಣಸಿನಕಾಯಿ ಅವರ ಮನೆಗೆ ಬಂದು ಸಾಲ ವಾಪಸ್ ಕೊಡು ಎಂದು ಪೀಡಿಸಿದ್ದಾರೆ. ನ.14ರಂದು ಸಂಗವ್ವ ಅವರು ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಆರೋಪಿಗಳು ಪರಾರಿಯಾಗಿದ್ದು, ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ವಿವರ: 2015ರಲ್ಲಿ ಸಂಗವ್ವ ಅವರ ಪತಿ ಈರಪ್ಪ ಅವರು ಅದೇ ಗ್ರಾಮದ ಶ್ರೀಶೈಲಪ್ಪ ಚಕ್ರಣ್ಣವರ ಎಂಬುವರಿಂದ 5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ಈರಪ್ಪ ಅವರು ತಮ್ಮ ಮೂರು ಎಕರೆ ಜಮೀನನ್ನು ಅಡ ಇಟ್ಟಿದ್ದರು. ಸಾಲಗಾರರು ಹೊಲವನ್ನು ಕಬ್ಜಾ ಪಡೆಯುವ ಸಂದರ್ಭದಲ್ಲಿ ಈರಪ್ಪ ಅವರಿಂದ ಪತ್ರಕ್ಕೆ ಸಹಿ (ಅರ್ಧ ನೋಂದಣಿ) ಮಾಡಿಸಿಕೊಂಡಿದ್ದರು. ನಂತರ ಸಾಲಗಾರರು ಈರಪ್ಪ ಅವರ ಹೊಲವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅಲ್ಲದೆ, ನಿತ್ಯ ಈರಪ್ಪ ಅವರ ಮನೆಗೆ ಬಂದು ಹಣ ನೀಡು ಎಂದು ಸಾಲಗಾರರು ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಸಂಗವ್ವ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅದೇ ದಿನ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್​ಗೆ ಕಳಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಗದಗ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಅಡವಿಸೋಮಾಪೂರ ಗ್ರಾಮದಲ್ಲಿ ಸಾಲಗಾರರ ಕಾಟದಿಂದ ಬೇಸತ್ತು ಸಂಗವ್ವ ಮೆಣಸಿನಕಾಯಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.

    | ಯತೀಶ. ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts