More

    ಹೂತ ಸ್ಥಿತಿಯಲ್ಲಿ ಶಿಕ್ಷಕಿ ಮೃತದೇಹ ಪತ್ತೆ

    ಮೇಲುಕೋಟೆ: ಇಲ್ಲಿನ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ಸಿಡಿಲು ಕಲ್ಲುಮಂಟಿ ಬಳಿ ಮಣ್ಣಿನಲ್ಲಿ ಹೂತಿದ್ದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಸೋಮವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

    ಹೋಬಳಿಯ ಮಾಣಿಕ್ಯನಹಳ್ಳಿ ನಿವಾಸಿ, ಖಾಸಗಿ ಶಾಲೆಯ ಅತಿಥಿ ಶಿಕ್ಷಕಿ ದೀಪಿಕಾ(28) ಕೊಲೆಯಾದವರು. ಮಾಣಿಕ್ಯನಹಳ್ಳಿಯ ವೆಂಕಟೇಶ್ ಅವರ ಪುತ್ರಿಯಾದ ದೀಪಿಕಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದರು. ಇವರಿಗೆ 8 ವರ್ಷದ ಮಗು ಇದೆ. ಮೇಲುಕೋಟೆ ಎಸ್‌ಇಟಿ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿದಿನ ತಮ್ಮ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. ಶನಿವಾರ ಎಂದಿನಂತೆ ಕರ್ತವ್ಯ ಮುಗಿಸಿ ಮಧ್ಯಾಹ್ನ ಹೊರಟವರು ಮನೆಗೆ ಮರಳಿರಲಿಲ್ಲ. ಅಂದು ಮಧ್ಯಾಹ್ನ ಬಹಳ ಹೊತ್ತಿನಿಂದ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ದ್ವಿಚಕ್ರ ವಾಹನವೊಂದು ನಿಂತಿರುವ ಬಗ್ಗೆ ಮಾಹಿತಿ ಬಂದಾಗ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ತೆರಳಿ ವಾಹನವನ್ನು ವಶಕ್ಕೆ ಪಡೆದು ಸುತ್ತಮುತ್ತ ಹುಡುಕಿದ್ದರು. ಯಾರೂ ಪತ್ತೆಯಾಗದ ಕಾರಣ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಶಿಕ್ಷಕಿಯ ತಂದೆ ವೆಂಕಟೇಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
    ಸ್ಕೂಟರ್ ಮಗಳದ್ದೇ ಎಂದು ಖಚಿತಪಡಿಸಿದ ವೆಂಕಟೇಶ್ ಆಕೆ ಕಾಣೆಯಾಗಿರುವ ಬಗ್ಗೆ ಮೇಲುಕೋಟೆ ಠಾಣೆಯಲ್ಲಿ ಜ.20ರಂದೇ ದೂರು ನೀಡಿರುವ ಬಗ್ಗೆ ತಿಳಿಸಿದರು. ಮಣ್ಣಿನೊಳಗೆ ಮಹಿಳೆ ಶವ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಾರ್ವಜನಿಕರು ಸೋಮವಾರ ಮಧ್ಯಾಹ್ನ ಪೊಲೀಸರಿಗೆ ತಿಳಿಸಲಾಗಿ, ಗುಂಡಿ ಅಗೆದು ನೋಡಿದಾಗ ಶವ ದೀಪಿಕಾ ಅವರದ್ದೇ ಎಂದು ಖಚಿತವಾಗಿದೆ.

    ಮೃತದೇಹವನ್ನು ಮಣ್ಣಿನಿಂದ ತೆಗೆದ ಪೊಲೀಸರು ಪಂಚೆನಾಮೆಗಾಗಿ ಪಾಂಡವಪುರಕ್ಕೆ ಕಳುಹಿಸಿದ್ದಾರೆ. ದೀಪಿಕಾ ಕೊಲೆಯಾಗಿದ್ದಾರೋ ಇಲ್ಲ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೋ ಎಂಬುದು ಶವಪರೀಕ್ಷೆ ನಂತರ ತಿಳಿದುಬರಲಿದೆ ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
    ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಶ್ರೀರಂಗಪಟ್ಟಣ ಡಿವೈಎಸ್‌ಪಿ ಮುರುಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts