More

    ಡಿಸಿಸಿ ಬ್ಯಾಂಕ್, ಸಹಕಾರ ಸಂಸ್ಥೆಗಳ ವ್ಯವಹಾರ ಮಾಹಿತಿ ಕ್ರೋಡೀಕರಣಕ್ಕೆ ಒಂದೇ ಸಾಫ್ಟ್​ವೇರ್

    ಚಿಕ್ಕಮಗಳೂರು: ಜಿಲ್ಲಾ ಸಹಕಾರ ಬ್ಯಾಂಕ್​ಗಳು ಸೇರಿ ವಿವಿಧ ಸಹಕಾರ ಸಂಸ್ಥೆಗಳ ವ್ಯವಹಾರವನ್ನು ಒಂದೇ ಸಾಫ್ಟ್​ವೇರ್​ನಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಕರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತೆಯರಿಗೆ ಮಂಗಳವಾರ ಆಯೋಜಿಸಿದ್ದ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾಫ್ಟ್​ವೇರ್ ವ್ಯವಸ್ಥೆಯಿಂದ ಯಾರಿಗೆ ಎಷ್ಟು ಸಾಲ ನೀಡಲಾಗಿದೆ? ಯಾರು ಸರಿಯಾಗಿ ಸಾಲ ಮರುಪಾವತಿಸುತ್ತಿದ್ದಾರೆ ಎಂಬುದು ಗೊತ್ತಾಗಲಿದೆ. ಸಾಲ ಮನ್ನಾ ಯೋಜನೆ ದುರುಪಯೋಗವಾಗಬಾರದು. ಸಾಲ ರೈತರಿಗೆ ತಲುಪಬೇಕು ಎಂಬ ಹಿನ್ನೆಲೆಯಲ್ಲಿ ಸಾಫ್ಟ್​ವೇರ್ ರೂಪಿಸುವ ಚಿಂತನೆ ಮಾಡಲಾಗಿದೆ ಎಂದರು.

    ಮಂಡ್ಯದ ಸಹಕಾರ ಬ್ಯಾಂಕ್​ವೊಂದು 21 ಶಿಕ್ಷಕರಿಗೆ ಸಾಲ ನೀಡಿರುವುದಾಗಿ ತಿಳಿಸಿದೆ. ಆದರೆ ನೋಟಿಸ್ ಬಂದ ಬಳಿಕ ಆ ಶಿಕ್ಷಕರು ತಾವು ಸಾಲವನ್ನೇ ಪಡೆದಿಲ್ಲ. ಆದರೂ ನೋಟಿಸ್ ಬಂದಿದೆ ಎಂದು ಹೇಳಿದ್ದರಿಂದ ಸಹಕಾರ ಕಾಯ್ದೆ 64ರಡಿ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ಗಳಿದ್ದು, ಅವುಗಳಲ್ಲಿ 17-18 ಬ್ಯಾಂಕ್​ಗಳ ಪ್ರಗತಿ ಪರಿಶೀಲನೆ ನಡೆಸಿರುವೆ. ಡಿಸಿಸಿ ಬ್ಯಾಂಕ್​ಗಳು ಶೇ.80 ಸಾಲವನ್ನು ಕೃಷಿಗೆ ನೀಡಬೇಕು. ಇತರ ಸಾಲಗಳ ರೂಪದಲ್ಲಿ ಉಳಿದ ಶೇ.20 ರಷ್ಟನ್ನು ನೀಡಬಹುದು. ಆದರೆ ಕೆಲವು ಡಿಸಿಸಿ ಬ್ಯಾಂಕ್​ಗಳು ಶೇ.20 ಕೃಷಿಗೆ ನೀಡಿ ಉಳಿದ ಶೇ.80 ಸಕ್ಕರೆ ಕಾರ್ಖಾನೆಗೆ ನೀಡಿವೆ. ಈ ಸಾಲ ಈವರೆಗೂ ಮರುಪಾವತಿಯಾಗಿಲ್ಲ. ಅಂದಾಜು 100ರಿಂದ 150 ಕೋಟಿ ರೂಪಾಯಿ ಈ ರೀತಿ ನೀಡಿರುವ ಸಾಲವನ್ನೇ ಸಹಕಾರ ಕ್ಷೇತ್ರ ನೀಡಬೇಕಾದ ಬಡವರ ಬಂಧು, ಕಾಯಕ ಯೋಜನೆ ಹಾಗೂ ಸ್ವಸಹಾಯ ಸಂಘಗಳಿಗೆ ನೀಡಿದ್ದರೆ ಬ್ಯಾಂಕ್​ಗಳಿಗೆ ಲಾಭವೂ ಬರುತ್ತಿತ್ತು ಎಂದು ಅಭಿಪ್ರಾಯಪಟ್ಟರು.

    2019-20ರಲ್ಲಿ ಡಿಸಿಸಿ ಬ್ಯಾಂಕ್​ಗಳು 13 ಸಾವಿರ ಕೋಟಿ ರೂ. ಸಾಲ ನೀಡಿದ್ದು, ಈ ಸಾಲಿನಲ್ಲಿ ಅದು 16 ಸಾವಿರ ಕೋಟಿ ರೂ.ಗೆ ಏರಲಿದೆ. ನಬಾರ್ಡ್ ಕೂಡ 1,750 ಕೋಟಿ ರೂ. ಹೆಚ್ಚುವರಿ ಸಾಲ ನೀಡಲು ಮುಂದೆ ಬಂದಿದೆ. ಮುಂದಿನ ದಿನಗಳಲ್ಲಿ ಸಹಕಾರ ರಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮವಾದ ಸಹಕಾರ ಕಾನೂನು ಜಾರಿಗೆ ತರುವ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts