More

    ಬಡ್ಡಿ ದಂಧೆ ವಿರುದ್ಧ ಹೋರಾಟ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

    ಶಿಡ್ಲಘಟ್ಟ: ರೈತರು ಹಾಗೂ ಮಹಿಳೆಯರನ್ನು ಪೀಡಿಸುವ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ನಿರಂತರ ಹೋರಾಟ ಮಾಡುವುದೇ ನಮ್ಮ ಗುರಿ ಎಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅಮಾಯಕರು ದಂಧೆಕೋರರ ಗಾಳಕ್ಕೆ ಸಿಲುಕದಂತೆ ತಡೆಯಲು ಬ್ಯಾಂಕ್ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

    ತಾಲೂಕಿನ ವೈ.ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಭಾನುವಾರ 34 ಮಹಿಳಾ ಸ್ವಸಹಾಯ ಸಂಘಗಳಿಗೆ 1.54 ಕೋಟಿ ರೂ. ಹಾಗೂ 60 ರೈತರಿಗೆ 60 ಲಕ್ಷ ರೂ. ಕೆಸಿಸಿ ಸಾಲ ವಿತರಿಸಿ ಮಾತನಾಡಿದರು.

    ಈ ಹಿಂದೆ ತಾಲೂಕಿನ ಬಹಳಷ್ಟು ಸಹಕಾರಿ ಸಂಘಗಳಿಗೆ ಸಾಲ ವಿತರಿಸುವ ಶಕ್ತಿಯಿರಲಿಲ್ಲ. ಆದರೆ ಇದೀಗ ಬಹುತೇಕ ಸಂಘಗಳು ಆರ್ಥಿಕವಾಗಿ ಸಬಲವಾಗಿದ್ದು, ಬಡ್ಡಿರಹಿತ ಸಾಲ ನೀಡುವ ಹಂತಕ್ಕೆ ಅಭಿವೃದ್ಧಿ ಹೊಂದಿವೆ, ಇದಕ್ಕೆಲ್ಲ ಮಹಿಳಾ ಸ್ವಸಹಾಯ ಸಂಘಗಳೇ ಮುಖ್ಯ ಕಾರಣ ಎಂದರು.

    ಮುಂಬರುವ ದಿನಗಳಲ್ಲಿ ತಾಲೂಕಿನ ಮಹಿಳೆಯರಿಗೆ ತಲಾ 1 ಲಕ್ಷ ರೂ. ಸಾಲ ನೀಡುವುದಾಗಿ ಗೋವಿಂದಗೌಡ ಭರವಸೆ ನೀಡಿದರು.
    ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಿಸುತ್ತಿದೆ, ಇದನ್ನು ಸದಸ್ಯರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಬೆಳೆಯುವ ತೆಗೆ ಸಕಾಲದಲ್ಲಿ ಮರುಪಾವತಿ ಮಾಡಬೇಕು, ಇದರಿಂದ ಮತ್ತೊಬ್ಬರಿಗೆ ಅನುಕೂಲವಾಗಲಿದೆ ಎಂದು ಶಾಸಕ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.

    ಆಡಳಿತ ಮಂಡಳಿ ಸಹಕಾರದಿಂದ ಈವರೆಗೂ ಮಹಿಳಾ ಸ್ವಸಹಾಯ ಸಂಘಗಳೂ ಸೇರಿದಂತೆ ರೈತರ ಕೆಸಿಸಿ ಸಾಲವಾಗಿ 10 ಕೋಟಿ ರೂ. ಹೆಚ್ಚು ಸಾಲ ವಿತರಿಸಲಾಗಿದೆ. ಸಾಲ ಪಡೆದ ಸಂಘಗಳ ಪ್ರತಿಯೊಬ್ಬರು ಸಹಕಾರ ಸಂಘದಲ್ಲಿ ಖಾತೆ ತೆರೆದು ಇಲ್ಲಿಯೇ ವ್ಯವಹಾರ ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಸವಲತ್ತು ದೊರೆಯಲಿದೆ ಎಂದು ವೈ.ಹುಣಸೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಬಸವರಾಜ್ ಹೇಳಿದರು.

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ನೇತ್ರಾವತಿ ದೇವರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಆನಂದ್, ಮೇಲ್ವಿಚಾರಕ ಕೆ.ವಿ.ಶ್ರೀನಾಥ್, ವೈ.ಹುಣಸೇನಹಳ್ಳಿ ಎಸ್‌ಎಫ್‌ಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅಕ್ಕಲಪ್ಪ, ಮುಖಂಡರಾದ ಎನ್.ಆರ್.ನಿರಂಜನ್, ಎಚ್.ಎಂ.ಕ್ಯಾತಪ್ಪ, ಸಂಘದ ನಿರ್ದೇಶಕರಿದ್ದರು.

    ಮಂತ್ರಿ ಮಾಡ್ತೇನೆ ಎಂದಿದ್ದರು…: ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರಕ್ಕೆ ಕೆಲವು ಅನ್ನವಂಟಗಾರರು (ಸಮಾಜಸೇವಕ) ಬಂದಿದ್ದಾರೆ ಎಂದು ವ್ಯಂಗ್ಯವಾಡಿದ ಶಾಸಕ ವಿ.ಮುನಿಯಪ್ಪ, ಕಳೆದ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ತನಗೂ ಕಾಂಗ್ರೆಸ್ ತ್ಯಜಿಸಲು ಆಮಿಷ ಒಡ್ಡಲಾಗಿತ್ತು ಎಂದು ಹೇಳಿದರು. ನಾನೊಬ್ಬ ಕಾಂಗ್ರೆಸಿಗ ಎಂದರೂ ಕೇಳದೆ ಬಲವಂತವಾಗಿ ಮುಖಂಡರೊಬ್ಬರ ಮನೆಗೆ ರಾತ್ರಿ ಹೊತ್ತಿನಲ್ಲಿ ಕರೆದುಕೊಂಡು ಹೋಗಿದ್ದರು. 30 ಕೋಟಿ ರೂ. 20 ಮೂಟೆಯಲ್ಲಿ ಇಟ್ಟಿದ್ದೇವೆ. ನಿನಗೊಂದು ಮೂಟೆ ಕೊಡುತ್ತೇವೆ, ಮಂತ್ರಿ ಮಾಡುತ್ತೇವೆ ಎಂದು ಬೆಂಬಲ ನೀಡುವಂತೆ ಒತ್ತಡ ಹೇರಿದ್ದರು. ನಾನು ಅದನ್ನು ತಿರಸ್ಕರಿಸಿ ಬಂದುಬಿಟ್ಟೆ ಎಂದರು.

    ಹಣ ಚೆಲ್ಲಿ ಗೆದ್ದವ ಜನಸೇವೆ ಮಾಡ್ತಾನಾ?: ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಮಹಿಳೆಯರು ಮಾತನಾಡುವಂತಾಗಬೇಕು. ಮತಗಳನ್ನು ಹಣಕ್ಕೆ ಮಾರಿಕೊಳ್ಳದಂತೆ ಎಚ್ಚರಿಸಿದ ಬ್ಯಾಲಹಳ್ಳಿ ಗೋವಿಂದಗೌಡ, ಚುನಾವಣೆ ವೇಳೆ 1000 ರೂ. ನೀಡಿ ಮತ ಪಡೆದು ಗೆದ್ದ ವ್ಯಕ್ತಿ ಮುಂದೆ ನಿಮ್ಮ ಸೇವೆ ಮಾಡುತ್ತಾನೆಯೇ? ಎಂದು ಪ್ರಶ್ನಿಸಿದರು. ಹಣ ಚೆಲ್ಲಿ ಗೆದ್ದವನ್ನು ಹಣ ಮಾಡಲು ಭ್ರಷ್ಟಾಚಾರ ಮಾಡುತ್ತಾನೆ ಹೊರತು ಜನಸೇವೆ ಮಾಡುವುದಿಲ್ಲ. ಹಾಗಾಗಿ ಚುನಾವಣೆ ವೇಳೆ ಹಣ ಹಂಚುವವರನ್ನು ತಿರಸ್ಕರಿಸಿ ಜನಸೇವೆ ಮಾಡುವವರನ್ನು ಆಯ್ಕೆ ಮಾಡಲು ಮಹಿಳೆಯರು ಮುಂದಾಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts