More

    ಮೈ ಚಳಿ ಬಿಟ್ಟು ಕೆಲಸ ಮಾಡಿ : ಅಧಿಕಾರಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸೂಚನೆ

    ಶ್ರೀನಿವಾಸಪುರ : ನಿಜವಾದ ರೈತರನ್ನು ಗುರುತಿಸಿ ಅವರಿಗೆ ಸಾಲ ನೀಡಬೇಕು. ಕಾರ್ಯದರ್ಶಿಗಳು ಕಚೇರಿಯಲ್ಲಿ ಕುಳಿತು ರಾಜಕಾರಣಿಗಳ ಶಿಪಾರಸಿನ ಮೇರೆಗೆ ನೀಲಗಿರಿ, ಗಿಡಗಂಟಿ ಬೆಳೆದಿರುವ ಜಮೀನಿಗೆ ಸಾಲ ನೀಡಿದರೆ ಮನೆಗೆ ಕಳುಹಿಸುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಗುಡುಗಿದರು.

    ಶ್ರೀನಿವಾಸಪುರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಯಲ್ದೂರು ವ್ಯವಸಾಯ ಸೇವಾ ಸಹಕಾರ ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ 179 ರೈತರಿಗೆ 1.78 ಕೋಟಿ ರೂ. ಸಾಲವನ್ನು ಮಂಗಳವಾರ ವಿತರಿಸಿ ಮಾತನಾಡಿ, ಪ್ರತಿ ಗ್ರಾಮದ ಪ್ರತಿ ರೈತರನ್ನು ಬ್ಯಾಂಕ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರ್ಹ ರೈತರಿಗೆ ಸಾಲ ನೀಡಬೇಕು. ಕಾರ್ಯದರ್ಶಿಗಳು ಮೈ ಚಳಿ ಬಿಟ್ಟು ಗ್ರಾಮಗಳಿಗೆ ಭೇಟಿ ನೀಡಿ ಸಾಲಕ್ಕೆ ಅರ್ಜಿ ಕೊಟ್ಟಿರುವವರ ಜಮೀನು ವೀಕ್ಷಣೆ ಮಾಡಿ ಸಾಲಕ್ಕೆ ಆರ್ಹರಾಗಿದ್ದರೆ ಅಂತಹವರ ಕಡತ ಶಿಪಾರಸು ಮಾಡಬೇಕು ಎಂದರು.
    ಶ್ರೀನಿವಾಸಪುರ ತಾಲೂಕಿನಲ್ಲಿ ರೈತರಿಗೆ ಸಾಲ ನೀಡಿರುವುದು ಕಡಿಮೆಯಾಗಿದೆ. ರಾಯಲ್ಪಾಡು, ಗೌನಿಪಲ್ಲಿ ಪ್ಯಾಕ್ಸ್ ಸೊಸೈಟಿ ಮೂಲಕ ರೈತರಿಗೆ ಸಾಲ ನೀಡಬೇಕು. ಹೆಣ್ಣು ಮಕ್ಕಳಿಗೆ ಸಾಲ ನೀಡಿದಷ್ಟು ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ನೀಡಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

    ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, 7 ವರ್ಷಗಳ ಹಿಂದೆ ಎರಡು ಜಿಲ್ಲೆಯ ಪ್ಯಾಕ್ಸ್ ಸೊಸೈಟಿಗಳು ದಿವಾಳಿ ಹಂತಕ್ಕೆ ತಲುಪಿದ್ದವು. ಗೋವಿಂದಗೌಡ ಅಧ್ಯಕ್ಷರಾದ ನಂತರ ಪುನರಾರಂಭಿಸಲಾಗಿದೆ. ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ಕೃಪಾ ಕಟಾಕ್ಷದಿಂದ ಎಲ್ಲ ಪ್ಯಾಕ್ಸ್ ಸೊಸೈಟಿಗಳ ಮೂಲಕ ರೈತರಿಗೆ 2-3 ಕೋಟಿವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ ಎಂದರು.

    ಬ್ಯಾಂಕ್ ನಿರ್ದೇಶಕ ಶ್ಯಾಗತ್ತೂರು ಎಸ್.ವಿ.ಸುಧಾಕರ್ ಮಾತನಾಡಿ, ಯಲ್ದೂರು ಸೊಸೈಟಿಗೆ ಇತಿಹಾಸವಿದೆ. 7 ವರ್ಷಗಳಿಂದ ಈಚೆಗೆ ರೈತರಿಗೆ ಸೊಸೈಟಿ ಮೂಲಕ ಕೋಟ್ಯಂತರ ರೂ. ಸಾಲ ನೀಡಲಾಗುತ್ತಿದೆ ಎಂದರು.

    ಬ್ಯಾಂಕ್ ನಿರ್ದೇಶಕರಾದ ಅನಿಲ್ ಕುಮಾರ್, ಬೈರಪಲ್ಲಿ ವೆಂಕಟರೆಡ್ಡಿ, ಯಲ್ದೂರು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕ ಚೆನ್ನಪಲ್ಲಿ ಶ್ರೀನಿವಾಸಗೌಡ, ಲಕ್ಷ್ಮೀಸಾಗರ ನಾಗರಾಜ್, ಯಲ್ದೂರು ಸೊಸೈಟಿ ಸಿಇಒ ಪ್ರಭಾಕರ ರೆಡ್ಡಿ, ಕಸಬಾ ಸೊಸೈಟಿ ಸಿಇಒ ಶಿವಾರೆಡ್ಡಿ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts