More

    ಜನರ ಬ್ಯಾಂಕ್ ಆಗಲು ನಂಬಿಕೆ ಮುಖ್ಯ

    ಶ್ರೀನಿವಾಸಪುರ: ಆಗಿನ ಪ್ರಧಾನಿ ದಿ.ಇಂದಿರಾಗಾಂಧಿ ಬ್ಯಾಂಕ್ ಹಾಗೂ ಹಲವಾರು ಸಂಘ-ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಿದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಖಾಸಗೀಕರಣ ಮಾಡಲು ಹೊರಟಿರುವುದನ್ನು ನೋಡಿದರೆ ಭಾರತ ಮಾತೆಯನ್ನು ಉದ್ದಾರ ಮಾಡಿದಂತೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ವ್ಯಂಗ್ಯವಾಡಿದರು.

    ಸೋಮಯಾಜಲಪಲ್ಲಿ ಗ್ರಾಮದಲ್ಲಿ ಮಂಗಳವಾರ ಸೋಮಯಾಜಲಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ 92 ರೈತರಿಗೆ ಶೂನ್ಯಬಡ್ಡಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ 1 ಕೋಟಿ ರೂ. ಸಾಲ ವಿತರಣೆ ಹಾಗೂ ಮೊಬೈಲ್ ಬ್ಯಾಂಕ್ ಸೇವೆಯನ್ನು ರೈತರಿಗೆ ಒದಗಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾಸಗೀಕರಣಗೊಂಡರೆ ರೈತರಿಗೆ ಪ್ರಯೋಜನವಾಗುವುದಿಲ್ಲ. ಸಹಕಾರ ಬ್ಯಾಂಕುಗಳೇ ರೈತರ ಬ್ಯಾಂಕ್‌ಗಳಾಗಲಿವೆ ಎಂದರು.

    ಬ್ಯಾಂಕ್ ಎಂದರೆ ಜನ ನಂಬಬೇಕು. ಆಗ ಮಾತ್ರ ಜನರ ಬ್ಯಾಂಕಾಗಲು ಸಾಧ್ಯ. ಶಿಫಾರಸುಗಳಿಗೆ ಹಾಗೂ ಶ್ರೀಮಂತರಿಗೆ ಸಾಲ ನೀಡಿದರೆ ಅವರು ಸಾಲ ಮರುಪಾವತಿ ಮಾಡುವುದಿಲ್ಲ. ಬಡವರಿಗೆ ಮತ್ತು ಅವಶ್ಯಕತೆ ಇರುವವರಿಗೆ ಸಾಲ ನೀಡಿದರೆ ಅದು ಸಕಾಲಕ್ಕೆ ಮರುಪಾವತಿಯಾಗುತ್ತದೆ. ಇದರೊಂದಿಗೆ ಸಣ್ಣ ವ್ಯಪಾರಸ್ಥರು ಹಾಗೂ ಬೀದಿ-ಬದಿ ವ್ಯಾಪಾರಸ್ಥರಿಗೆ ಸಾಲ ನೀಡಿದರೆ ಅದು ಆರ್ಥಿಕವಾಗಿ ಬಲ ನೀಡುತ್ತದೆ. ಆಗ ಜನಸಾಮಾನ್ಯರು ನಿಮ್ಮನ್ನು ನಂಬುತ್ತಾರೆ ಎಂದರು.

    ತಾಲೂಕಿನಲ್ಲಿ ಮನೆ ನೀಡಿದಾಗ, ಮಹಿಳೆಯರಿಗೆ ಸಾಲ ನೀಡಿದಾಗ, ಕೆ.ಸಿ.ವ್ಯಾಲಿ ನೀರು ತರಲು ಪ್ರಯತ್ನಿಸಿದಾಗ ಹಲವರು ಟೀಕೆ ಮಾಡಿದರು. ಆದರೆ ನಾನು ಮೌನವಾಗಿ ನನ್ನ ಕೆಲಸ ಮಾಡಿದೆ. ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯ ನೋಡಿ ಹೊಟ್ಟೆ ಹಿಂಡಿದಂತೆ ಆಗುತ್ತಿದೆ. ಅವರ ಟೀಕೆ ಟಿಪ್ಪಣಿಗಳೇ ನನ್ನ ಅಭಿವೃದ್ಧಿಗೆ ಶ್ರೀರಕ್ಷೆ. ಇನ್ನು 10 ತಿಂಗಳೊಳಗೆ ತಾಲೂಕಿನ ಕೆಲ ಭಾಗಗಳಿಗೆ ಕೆ.ಸಿ.ವ್ಯಾಲಿ ನೀರು ಬರಲಿದೆ ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ಸೋಮಯಾಜಲಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 59 ಹಳ್ಳಿಗಳು ಬರಲಿವೆ. ಈ ಸೊಸೈಟಿ ವ್ಯಾಪ್ತಿಗೆ ಬರುವ ಕಟ್ಟಕಡೆಯ ರೈತನಿಗೂ ಪಕ್ಷಾತೀತವಾಗಿ ಸಾಲ ದೊರೆಯುವ ಯೋಜನೆಯನ್ನು ಅಧ್ಯಕ್ಷರು ರೂಪಿಸಬೇಕು. ಕನಿಷ್ಠ 59 ಕೋಟಿ ರೂ.ಗಳನ್ನು ಸಂಘದಿಂದ ರೈತರಿಗೆ ನೀಡಬೇಕು ಎಂದರು.

    ಸೊಸೈಟಿ ಅಧ್ಯಕ್ಷೆ ಎ.ಸಿ.ನಾಗರತ್ನಮ್ಮ ಮಂಜುನಾಥರೆಡ್ಡಿ, ನಿವೃತ್ತ ಶಿಕ್ಷಕ ಎಸ್.ಆರ್. ವೆಂಕಟೇಶರಾವ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೆಂಕಟರೆಡ್ಡಿ, ಎಸ್.ವಿ.ಸುಧಾಕರ್, ಮುಖಂಡರಾದ ಸಿ.ಎಸ್.ಪ್ರಸಾದ್, ಮಂಜುನಾಥರೆಡ್ಡಿ, ಗ್ರಾಪಂ ಅಧ್ಯಕ್ಷೆ ವಿನಿತಾ ವಿಜಯ್‌ಕುಮಾರ್, ಉಪಾಧ್ಯಕ್ಷ ವೆಂಕಟರಾಮಪ್ಪ ಹಾಗೂ ಸೊಸೈಟಿ ನಿರ್ದೇಶಕರು ಉಪಸ್ಥಿತರಿದ್ದರು.

    2000 ರೈತರಿಗೆ ಸಾಲದ ಗುರಿ: ಏ.10ರ ನಂತರ ಇದೇ ಸೊಸೈಟಿಗೆ ಭೇಟಿ ನೀಡುತ್ತೇನೆ. ಪ್ರತಿ ಗ್ರಾಮದ ಪ್ರತಿ ಮನೆಯ ಸದಸ್ಯರನ್ನು ಬ್ಯಾಂಕಿನ ಸದಸ್ಯರನ್ನಾಗಿ ಮಾಡಿಕೊಂಡು ಮುಂಗಾರು ಮಳೆ ವೇಳೆಗೆ ಪ್ರತಿ ಸದಸ್ಯನಿಗೂ ಸಾಲ ನೀಡುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಈ ಸೊಸೈಟಿಗೆ ಕನಿಷ್ಠ 2000 ರೈತರಿಗೆ ಸಾಲ ನೀಡುವ ಯೋಜನೆ ಗುರಿ ಸಾಧಿಸಬೇಕು ಎಂದು ರಮೇಶ್ ಕುಮಾರ್ ತಿಳಿಸಿದರು.

     

    ದೇಶದಲ್ಲಿ ಪ್ರಥಮ ಬಾರಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನಮ್ಮ ಬ್ಯಾಂಕಿನಲ್ಲಿ ಆರಂಭಿಸಿದೆ. ರೈತರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಾಲ ಮರುಪಾವತಿ ಮಾಡಲು ಹಾಗೂ ಹಣ ಪಡೆಯಲು ಬ್ಯಾಂಕಿಗೆ ಹೋಗಬೇಕಿಲ್ಲ. ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹಾರ ನಡೆಸಬಹುದು.
    ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts