More

    ಹಂತಹಂತವಾಗಿ ಸಮಸ್ಯೆಗಳ ನಿವಾರಣೆಗೆ ಡಿಸಿ ಭರವಸೆ

    ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಮೂಲ ಸೌಲಭ್ಯಗಳ ನಿರ್ವಹಣೆಯಲ್ಲಿ ಆಗಿರುವ ಸಮಸ್ಯೆಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದೇ ದಿನದಲ್ಲಿ ಎಲ್ಲವೂ ಸರಿ ಆಗುವುದಿಲ್ಲ. ಆದರೆ, ಆದ್ಯತೆ ಮೇರೆಗೆ ಎಲ್ಲವನ್ನೂ ಹಂತ ಹಂತವಾಗಿ ಸರಿಪಡಿಸುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.

    ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಸ್ಥಾನಿಕ ಸಂಪಾದಕರು ಮತ್ತು ಮುಖ್ಯ ವರದಿಗಾರರೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಇರುವ ಮಾಗೋಪಾಯಗಳ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

    ಅವೈಜ್ಞಾನಿಕ ರಸ್ತೆ ಅಗೆತಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆರ್ಥಿಕವಾಗಿಯೂ ಇದು ಸರ್ಕಾರಕ್ಕೆ ನಷ್ಟ. ರಸ್ತೆ ಧೂಳು, ಸಂಚಾರ ದಟ್ಟಣೆ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯೂ ಇದಕ್ಕೆ ಕಾರಣ. ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

    ಕೆರೆಗಳನ್ನು ಸೌಂದಯೀಕರಣಗೊಳಿಸುವ ಮೊದಲು ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಮಳೆಗಾಲ ಪ್ರಾರಂಭಗೊಳ್ಳುವ ಮುಂಚೆ ಹೂಳೆತ್ತಲಾಗುವುದು. ಕೆರೆಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದರು. ಜಿಲ್ಲೆಯ ಇತರ ತಾಲೂಕು ಹಾಗೂ ಗ್ರಾಮೀಣ ಕೇಂದ್ರಗಳ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದ್ದು, ಜಿಲ್ಲಾಧಿಕಾರಿಯವರೂ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ, ಅವಳಿ ನಗರಕ್ಕೆ ಕಡಿಮೆ ಮಹತ್ವ ನೀಡುತ್ತಾರೆಂಬುದು ಸತ್ಯಕ್ಕೆ ದೂರವಾದದ್ದು. ಇಡೀ ಧಾರವಾಡ ಜಿಲ್ಲೆಯ ಗ್ರಾಮಗಳು, ತಾಲೂಕು ಕೇಂದ್ರಗಳು, ಮಹಾನಗರಕ್ಕೆ ಸಮಾನವಾದ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

    ಕೊಲ್ಲಾಪುರ ಮಾದರಿಯ ಕೆರೆಯನ್ನು ಹುಬ್ಬಳ್ಳಿಯಲ್ಲಿ ನಿರ್ವಿುಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು. ನೃಪತುಂಗ ಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಗೊಳಿಸುವುದು, ಶ್ರೀ ಸಿದ್ಧಾರೂಢ ಮಠವನ್ನು ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳೊಳ್ಳಿ, ವಾರ್ತಾ ಸಹಾಯಕ ಸುರೇಶ ಹಿರೇಮಠ ಹಾಗೂ ಇತರರು ಇದ್ದರು.

    ಬಾಕ್ಸ್

    * ಸ್ವಾವಲಂಬಿ ಮಹಿಳೆ

    ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸ್ವಾವಲಂಬಿ ನನ್ನ ಆಸಕ್ತಿದಾಯಕ ವಿಷಯಗಳು. ಮಹಿಳೆಯರಿಗೆ ಅಗತ್ಯ ಶಿಕ್ಷಣ ನೀಡುವ ಮೂಲಕ ಅವರಿಗೆ ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುವುದು. ಉತ್ತಮ ಶಿಕ್ಷಣದಿಂದ ಮಹಿಳೆಯರ ಜೀವನ ಬದಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಡಿಸಿ ದಿವ್ಯ ಪ್ರಭು.

    * ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಗೆ ಜಿಲ್ಲೆಯ 19 ಲಕ್ಷ ಜನ ಮಾತ್ರ ನೋಂದಣಿ ಮಾಡಿಸಿದ್ದು, ಇನ್ನುಳಿದವರೂ ನೋಂದಣಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು.

    * ಸ್ಮಾರ್ಟ್​ಸಿಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ. ಅನುಷ್ಠಾನದಲ್ಲಿ ನಿಷ್ಕಾಳಜಿ ಆಗಿದ್ದರೆ ಪರಿಶೀಲಿಸಲಾಗುವುದು.

    * ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ 24ನೇ ಸ್ಥಾನದಲ್ಲಿದ್ದು, ಫಲಿತಾಂಶ ಸುಧಾರಣೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಯತ್ನಿಸಲಾಗುವುದು. ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ವಿಶೇಷ ತರಗತಿ ನಡೆಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.

    * ಬರಗಾಲದಿಂದ ಜಿಲ್ಲೆಯಲ್ಲಿ 2.11 ಲಕ್ಷ ಹೆಕ್ಟರ್ ಬೆಳೆಹಾನಿಯಾಗಿದೆ. ಈಗಾಗಲೇ ಮಧ್ಯಂತರ ಪರಿಹಾರವಾಗಿ 2 ಸಾವಿರ ರೂ.ಗಳನ್ನು 1 ಲಕ್ಷ ರೈತರ ಖಾತೆಗೆ ಹಾಕಲಾಗಿದೆ. ಇನ್ನುಳಿದ ರೈತರಿಗೆ ಪರಿಹಾರ ನೀಡಬೇಕಾದರೆ 212 ಕೋಟಿ ರೂ.ಗಳ ಅಗತ್ಯವಿದೆ. ಕೇಂದ್ರ ಸರ್ಕಾರದಿಂದ ಹಣ ಬಂದ ನಂತರ ರೈತರ ಖಾತೆಗೆ ವರ್ಗಾಯಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts