More

    ಪಾಲನೆಯಾಗುತ್ತಿಲ್ಲ ಜಿಲ್ಲಾಧಿಕಾರಿ ಆದೇಶ, ಕಡಲ ತೀರದಲ್ಲಿ ಈಗಲೂ ಮೋಜು

    ಗಂಗೊಳ್ಳಿ: ಕರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೀಚ್/ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ತ್ರಾಸಿ-ಮರವಂತೆ ಕಡಲ ತೀರದಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ.

    ತ್ರಾಸಿ-ಮರವಂತೆ ಕಡಲ ತೀರದಲ್ಲಿ, ಉದ್ಯಾನವನ ಸ್ಥಳಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಕಂಡುಬಂದಿದೆ. ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೂ ಕಡಲ ತೀರ ವಿಹಾರಕ್ಕೆ ಪ್ರವಾಸಿಗರು ಬರುವುದನ್ನು ನಿಲ್ಲಿಸಿಲ್ಲ. ಪ್ರವಾಸಿ ತಾಣಗಳಿಗೆ ಜನರಿಗೆ ನಿರ್ಬಂಧ ವಿಧಿಸಿದ್ದರೂ ಆದೇಶ ಪಾಲಿಸಲು ಯಾವೊಬ್ಬ ಅಧಿಕಾರಿ ಅಥವಾ ಸಂಬಂಧಪಟ್ಟವರೂ ಸ್ಥಳದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಮತ್ತು ಪ್ರವಾಸಿಗರು ಕಡಲ ತೀರದಲ್ಲಿ ಮೋಜಿನಲ್ಲಿ ತೊಡಗಿದ್ದಾರೆ.

    ಕಡಲ ತೀರದಲ್ಲಿರುವ ಫಾಸ್ಟ್‌ಫುಡ್ ಅಂಗಡಿ ತೆರೆದಿದ್ದು, ಉದ್ಯಾನವನದ ಹೊರಗೆ ಮತ್ತು ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿ ತಲೆ ಎತ್ತಿರುವ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಶುಚಿತ್ವಕ್ಕೆ ಆದ್ಯತೆ ನೀಡಬೇಕೆನ್ನುವ ಸರ್ಕಾರದ ಸೂಚನೆ ತ್ರಾಸಿ-ಮರವಂತೆ ಕಡಲ ತೀರ ಹಾಗೂ ಉದ್ಯಾನವನ ಪರಿಸರದಲ್ಲಿ ಪಾಲನೆಯಾಗುತ್ತಿಲ್ಲ.

    ಸ್ಥಳೀಯಾಡಳಿತ, ತಾಲೂಕು ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗದಿದ್ದರೆ ಮುಂದಿನ ದಿನಗಳಲ್ಲಿ ಕರೊನಾ ವೈರಸ್ ಈ ಭಾಗಕ್ಕೂ ಹಬ್ಬುವ ಸಾಧ್ಯತೆ ಇದೆ. ಸುಮಾರು 2 ಕಿ.ಮೀ ಉದ್ದದ ತ್ರಾಸಿ-ಮರವಂತೆ ಕಡಲ ತೀರದಲ್ಲಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಲು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts