More

    ಡಿಸಿ ಕಚೇರಿ ಕಾಮಗಾರಿ ನಾಲ್ಕನೇ ವರ್ಷಕ್ಕೆ, 50 ಕೋಟಿ ರೂ. ದಾಟಿದ ಯೋಜನಾ ವೆಚ್ಚ

    ಮಂಗಳೂರು: ನಗರದ ಪಡೀಲ್‌ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದ.ಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ. ಆರಂಭಿಕ 41 ಕೋಟಿ ರೂ. ವೆಚ್ಚದ ಕಾಮಗಾರಿ ಮೊತ್ತ ಪ್ರಸ್ತುತ 50 ಕೋಟಿ ರೂ. ದಾಟಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕುಂಟುತ್ತ ಸಾಗಿದೆ.

    2018ರ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದೆ. ಗುತ್ತಿಗೆ ನಿಯಮಾವಳಿ ಪ್ರಕಾರ ಮೊದಲ ಹಂತದ ಕಾಮಗಾರಿ 2019ರ ಸೆ.16ಕ್ಕೆ ಪೂರ್ಣಗೊಳ್ಳಬೇಕಿತ್ತು. ಮೂರು ವರ್ಷದಲ್ಲಿ ಪ್ರಸ್ತುತ ಶೇ.80-90 ಕೆಲಸ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಸಿವಿಲ್ ವರ್ಕ್ ಇನ್ನೆರಡು ತಿಂಗಳಲ್ಲಿ ಮುಗಿಯುವ ಸಾಧ್ಯತೆಯಿದೆ. ವಿದ್ಯುದೀಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಕೆಲಸಗಳಿಗೆ ಇನ್ನೂ ಆರು ತಿಂಗಳು ಬೇಕಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

    30 ಕೋಟಿ ರೂ ಬಿಡುಗಡೆ: ಆರಂಭಿಕ ಪ್ರಸ್ತಾವನೆಯಂತೆ ಸರ್ಕಾರದಿಂದ ನೇರವಾಗಿ ಸಿಗಬೇಕಾಗಿದ್ದ 30 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಬಾಕಿ 11 ಕೋಟಿ ರೂ. ವಿವಿಧ ಇಲಾಖೆಗಳಿಂದ ಬಿಡುಗಡೆಯಾಗಬೇಕಿದೆ. ಸಂಕೀರ್ಣದಲ್ಲಿ ಕಚೇರಿ ಪಡೆಯುವ ಹಿನ್ನೆಲೆಯಲ್ಲಿ 7 ಕೋಟಿ ರೂ. ಆರೋಗ್ಯ ಇಲಾಖೆ, 3 ಕೋಟಿ ರೂ. ಕಾರ್ಮಿಕ ಇಲಾಖೆ, 1 ಕೋಟಿ ರೂ. ಸಣ್ಣ ನೀರಾವರಿ ಇಲಾಖೆಯಿಂದ ಬಾಕಿ ಇದೆ. ಇಲಾಖೆಗಳು ವಿವಿಧ ಕಾರಣ ನೀಡಿ ಅನುದಾನ ವಿಳಂಬ ಮಾಡುತ್ತಿವೆ. ಅಂದಾಜು ವೆಚ್ಚ 50 ಕೋಟಿ ರೂ. ದಾಟಿರುವುದರಿಂದ ಉಳಿದ ಮೊತ್ತ ಸರ್ಕಾರವೇ ಪಾವತಿಸಬೇಕಾಗಿದ್ದು, ಹೆಚ್ಚುವರಿ ಮೊತ್ತಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮೊತ್ತ ಬಿಡುಗಡೆಯಾದರೆ ಕಾಮಗಾರಿಗೆ ವೇಗ ಸಿಗಬಹುದು. ಕೆಲವೊಂದು ಸ್ಟ್ರಕ್ಚರಲ್ ಡಿಸೈನ್ ಬದಲಾಗಿರುವುದರಿಂದ ಸರ್ಕಾರದಿಂದ ಅನುಮತಿ ಬಾಕಿ ಇದೆ.

    2ನೇ ಹಂತಕ್ಕೆ ಅಂದಾಜುಪಟ್ಟಿ: ಎರಡನೇ ಹಂತದಲ್ಲಿ ಆವರಣ ಗೋಡೆ, ಡ್ರೈನೇಜ್, ವಿದ್ಯುತ್ ಸಂಪರ್ಕ, ಸೇಫ್ಟಿ, ಇಂಟೀರಿಯರ್ ವರ್ಕ್ ನಡೆಯಲಿದ್ದು, ಅದಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಪ್ರಸ್ತುತ ವಯರಿಂಗ್, ವೈಟ್‌ವಾಶ್, ಟೈಲ್ಸ್ ಮತ್ತು ಗ್ರಾನೈಟ್ ಅಳವಡಿಸುವ ಕೆಲಸಗಳು ನಡೆಯುತ್ತಿವೆ. 70ರಷ್ಟು ಕಾರ್ಮಿಕರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ.

    38 ಇಲಾಖೆಗಳು ಒಂದೇ ಕಟ್ಟಡದಲ್ಲಿ: ಒಟ್ಟು 5.8 ಎಕರೆ ಪ್ರದೇಶದಲ್ಲಿ 2.26 ಲಕ್ಷ ಚ.ಅಡಿ ವಿಸ್ತೀರ್ಣದ ಡಿಸಿ ಕಚೇರಿ ನಿರ್ಮಾಣವಾಗಲಿದೆ. 38 ವಿವಿಧ ಇಲಾಖೆಗಳು, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರ ಕಚೇರಿಯೂ ಇಲ್ಲಿಗೆ ಸ್ಥಳಾಂತರವಾಗಲಿದೆ. ನೆಲ ಅಂತಸ್ತಿನಲ್ಲಿ 400 ಮಂದಿ ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣ, 2ನೇ ಮಹಡಿಯಲ್ಲಿ 2 ಮೀಟಿಂಗ್ ಹಾಲ್, ತಳ ಅಂತಸ್ತು ಕಾರು ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಮೀಸಲು. 50ರಷ್ಟು ಕಾರು ಮತ್ತು 100ಕ್ಕೂ ಅಧಿಕ ದ್ವಿಚಕ್ರ ವಾಹನ ನಿಲ್ಲಿಸಲು ಅವಕಾಶವಿದೆ. ಕಟ್ಟಡದ ಸುತ್ತ ಸುಮಾರು 70 ಕಾರು ನಿಲ್ಲಿಸಬಹುದು. ಕಟ್ಟಡದ ಒಳಭಾಗದಲ್ಲಿ ಎರಡು ತೆರೆದ ಪ್ರದೇಶವಿದ್ದು, ಇದು ಕಟ್ಟಡಕ್ಕೆ ಹೆಚ್ಚು ಬೆಳಕು ನೀಡುತ್ತದೆ. ಸಂಕೀರ್ಣದಲ್ಲಿ ಬ್ಯಾಂಕ್, ಎಟಿಎಂ, ಕ್ಯಾಂಟೀನ್, ಅಂಚೆ ಕಚೇರಿ, ಪೊಲೀಸ್ ಹೊರಠಾಣೆ ಇರಲಿದೆ.

    ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಬಾಕಿ ಇರುವ ಮೊತ್ತ ಬಿಡುಗಡೆ ಮಾಡುವಂತೆ ಈಗಾಗಲೇ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಬಿಡುಗಡೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ತಡವಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು.

    ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts