More

    ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸುಗಮ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆಗಳನ್ನು ಜರುಗಿಸಲು ಸೂಚನೆ

    ಗದಗ: ಕರ್ನಾಟಕ ಲೋಕಸೇವಾ ಆಯೋಗವು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಜ.20 ಹಾಗೂ 21 ರಂದು ಜರುಗಲಿವೆ. ಜಿಲ್ಲಾ ಕೇಂದ್ರದಲ್ಲಿ ಜರುಗಲಿರುವ ಪರೀಕ್ಷೆಗಳನ್ನು ಯಾವುದೇ ದೊಷಾರೋಪಣೆಗಳಿಗೆ ಆಸ್ಪದ ನೀಡದೆ ಸುಗಮವಾಗಿ ಜರುಗಿಸುವಂತೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಜ. 20 ಹಾಗೂ 21 ರಂದು ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಕಡ್ಡಾಯ ಕನ್ನಡ ಭಾಷಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಅವಳಿ ನಗರದ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ. ಅವಳಿ ನಗರದಲ್ಲಿ ಜರುಗಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಸುಗಮ ಹಾಗೂ ವ್ಯವಸ್ಥಿತವಾಗಿ ಜರುಗಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

    ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮಾರ್ಗಸೂಚಿಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗಮ ಪರೀಕ್ಷೆಗಾಗಿ ಮಾರ್ಗಾಧಿಕಾರಿ, ಸ್ಥಳೀಯ ನಿರೀಕ್ಷಣಾಧಿಕಾರಿ, ಮೇಲ್ವಿಚಾರಕರನ್ನು ನಿಯಮಿಸಲಾಗಿದೆ. ನಿಯೋಜಿತ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.

    ಕರ್ನಾಟಕ ಲೋಕಸೇವಾ ಆಯೋಗದ ನಿರ್ದೇಶನದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಸಿ.ಸಿ.ಟಿ.ವಿ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಆಯೋಗ ನಿಗದಿಪಡಿಸಿದ ಗುರುತಿನ ಚೀಟಿ ಹಾಗೂ ಪ್ರವೇಶ ಪತ್ರವನ್ನು ಕೂಲಂಕೂಷವಾಗಿ ಪರಿಶೀಲಿಸುವುದರ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯನ್ನು ಆಯೋಗದ ನಿರ್ದೇಶನದಂತೆ ತಪಾಸಣೆ ಜರುಗಿಸಿದ ನಂತರವೇ ಪರೀಕ್ಷಾ ಕೊಠಡಿಗಳಿಗೆ ಪ್ರವೇಶ ನೀಡುವಂತೆ ನಿಗಾವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೊಠಡಿಗಳಿಗೆ ತೆರಳಲು ಗೊಂದಲಗಳಾಗದಂತೆ ಅಗತ್ಯದ ಸೂಚನಾ ಫಲಕಗಳನ್ನು ಅಳವಡಿಸಬೇಕು. ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯದ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

    ಪರೀಕ್ಷಾ ದಿನಗಳಂದು ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯದೊಳಗಾಗಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ನಿಗದಿತ ಸಮಯದೊಳಗಾಗಿಯೇ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಜರುಗಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೊಷಾರೋಪಣೆಗಳಿಗೆ ಆಸ್ಪದ ನೀಡದಂತೆ ಸುಗಮವಾಗಿ ಜರುಗಿಸುವಂತೆ ನಿರ್ದೇಶನ ನೀಡಿದರು.

    ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ.ರಡ್ಡೇರ, ಶಿಕ್ಷಣ ಇಲಾಖೆಯ ಜಿ.ಎಲ್.ಬಾರಾಟಕ್ಕೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಜನಗಿ, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts