More

    ಮುದ್ದುಂಗೆರೆ ಗ್ರಾಮದ ಸಮಸ್ಯೆ ಪರಿಹರಿಸಲು ಪ್ರಯತ್ನ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಭರವಸೆ

    ಮಂಡ್ಯ: ಚುನಾವಣೆ ನಡುವೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ತಾಲೂಕಿನ ಅಲಕರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದುಂಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ಎರಡು ತಿಂಗಳು ಜಿಲ್ಲಾಡಳಿತಕ್ಕೆ ಚುನಾವಣೆ ಕೆಲಸವಿರುತ್ತದೆ. ಇದರ ಜತೆಗೆ ಸಾರ್ವಜನಿಕರ ಸಮಸ್ಯೆಯನ್ನು ಕಂದಾಯ ಇಲಾಖೆಯು ಪರಿಹರಿಸಲಾಗುವುದು ಎಂದರು.
    ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ನೀಡಬೇಕು. ಪಿಕಪ್ ನಾಲೆಯ ರಸ್ತೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಯೊಂದಿಗೆ ಸಂಪರ್ಕ ಸಾಧಿಸಿ ಬಗೆಹರಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಕುಟುಂಬಕ್ಕೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಕೊಡಲಾಗುವುದು. ಇದು ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿದ ಅವರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾರರ ಪಟ್ಟಿಗೆ ಹೆಸರು ಸೇಪರ್ಡೆ ಹಾಗೂ ಬದಲಾವಣೆಗೆ ತಿಂಗಳ ಅಂತ್ಯದವರೆಗೂ ಕಾಲಾವಕಾಶವಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ವಿಶೇಷವಾಗಿ ಕಂದಾಯ ಇಲಾಖೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಲು ನಡೆಸಲಾಗುತ್ತಿದೆ. ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಪಿಂಚಣಿ ವಿತರಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗಭೀರ್ಣಿಯರಿಗೆ ಸೀಮಂತ ಕಾರ್ಯಕ್ರಮ, ತಾಯಿ ಕಾರ್ಡ್, ಸುಕನ್ಯ ಸಮೃದ್ಧಿ ಯೋಜನೆ ಆಯ್ಕೆ ಪತ್ರ, ವಿಶೇಷ ಚೇತನರಿಗೆ ಗುರುತಿನ ಚೀಟಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಟ್ರೈ ವಿತರಣೆ, ಕೃಷಿ ಇಲಾಖೆಯಿಂದ ಮಣ್ಣಿನ ಆರೋಗ್ಯ ಕಾರ್ಡ್, ಕೀಟನಾಶಕ ಬ್ಯಾಟರಿ ಸ್ಪ್ರೇ ವಿತರಣೆ ಮಾಡಲಾಯಿತು.
    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ತಹಸೀಲ್ದಾರ್ ವಿಜಯ್ಕುಮಾರ್, ಅಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಮ್ಮ, ತಾಲೂಕು ಪಂಚಾಯಿತಿ ಇಒ ಎಂ.ಬಿ.ವೇಣು, ಜಂಟಿ ಕೃಷಿ ನಿರ್ದೇಶಕ ಆರ್.ಆಶೋಕ್, ಕೌಶಾಲಾಭಿವೃದ್ಧಿ ಇಲಾಖೆಯ ಎನ್.ಆರ್.ವೇಣುಗೋಪಾಲ ಇತರರಿದ್ದರು.
    ಪಿಕಪ್ ನಾಲೆ ಮಳೆ ಹಾನಿಗೊಳಗಾಗಿ ರಸ್ತೆ ದುರಸ್ತಿ, ಊರಿನ ಹೊರಭಾಗದ ಜಮೀನಿಗೆ ಚರಂಡಿ ನೀರು ಹೋಗುವುದನ್ನ ತಡೆಗಟ್ಟುವುದು, ಸರ್ಕಾರಿ ಖರಾಬು ಜಮೀನನ್ನು ಗ್ರಾಮಕ್ಕೆ ನೀಡಬೇಕು. ಗದ್ದೆ ಬೈಲುಗಳ ರಸ್ತೆ ದುರಸ್ತಿ ನಿರ್ಮಾಣ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts