More

    ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯಲು ದುಪ್ಪಟ್ಟು ಹಣ ಪಡೆಯುತ್ತಿರುವ ಆರೋಪ: ಬೆಲೆ ನಿಗದಿ ಮಾಡಿ ಆದೇಶಿಸಿದ ಜಿಲ್ಲಾಡಳಿತ…!!!

    ಮಂಡ್ಯ: ಜಿಲ್ಲೆಯಲ್ಲಿ ನೋಂದಣಿಯಾಗಿರುವ 13 ರಿಗ್ ಮಾಲೀಕರು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೋರ್‌ವೆಲ್ ಕೊರೆಯಲು ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಿಗ್ ಮಾಲೀಕರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 7 ತಾಲೂಕುಗಳು ಬರ ಪೀಡಿತವಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೋರ್‌ವೆಲ್ ರಿಫ್ಲಶಿಂಗ್ ಮತ್ತು ರಿಡ್ರಿಲಿಂಗ್‌ಗಳ ಕೆಲಸಗಳನ್ನು ಮೊದಲು ಮಾಡಬೇಕು. ನೋಂದಾಯಿತ ರಿಗ್ ಮಾಲೀಕರು ಮಾತ್ರ ಬೋರ್‌ವೆಲ್ ಕೊರೆಯುವ ಕೆಲಸ ಮಾಡಬೇಕು. ಅದನ್ನು ಹೊರತುಪಡಿಸಿ ಬೇರೆಯವರು, ಹೊರ ಜಿಲ್ಲೆ ಹಾಗೂ ರಾಜ್ಯದವರು ಬೋರ್‌ವೆಲ್ ಕೊರೆಯಲು ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ದೂರು ಕೇಳಿಬರುತ್ತಿದೆ. ನೋಂದಾಯಿತ ರಿಗ್ ಮಾಲೀಕರು ಹೊರತುಪಡಿಸಿ ಬೇರೆಯವರು ಅನಧಿಕೃತವಾಗಿ ಬೋರ್‌ವೆಲ್ ಕೊರೆಯುವುದು ಕಂಡುಬAದಲ್ಲಿ ಅಥವಾ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ದೂರು ಸಲ್ಲಿಸಲು ಕಂಟ್ರೋಲ್ ರೂಂ ಸ್ಥಾಪಿತವಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 08232-220704 ಹಾಗೂ 08232-200704 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದರು.
    ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವರಾಜು ಮಾತನಾಡಿ, ರಿಗ್ ಮಾಲೀಕರು ಅವರು ಬೋರ್‌ವೆಲ್ ಕೊರೆಯುವ ಮೊದಲು ಸ್ಥಳೀಯ ಸಂಸ್ಥೆಗಳಿAದ ಎನ್‌ಒಸಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ವಿಫಲವಾದ ಬೋರ್‌ವೆಲ್‌ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೊಳವೆಬಾವಿ ಕೊರೆಯಲು ದರ ನಿಗದಿಪಡಿಸಲಾಗಿದೆ. 165 ಮಿ.ಮೀ ವ್ಯಾಸದ ಬೋರ್ ವೆಲ್ ಕೊರೆಯಲು 0 ಯಿಂದ 300 ಅಡಿ ಪ್ರತಿ ಅಡಿಗೆ 126 ರೂ, 300 ರಿಂದ 400 ಅಡಿಗೆ 148 ರೂ, 400 ರಿಂದ 500 ಅಡಿಗೆ 153 ರೂ, 500 ರಿಂದ 600 ಅಡಿಗೆ 175 ರೂ, 600 ರಿಂದ 700 ಅಡಿಗೆ 188 ರೂ ಹಾಗೂ 700 ರಿಂದ 800 ಅಡಿಗೆ 205 ರೂ ನಿಗದಿಯಾಗಿರುತ್ತದೆ. ಎಂ.ಎಸ್ ಕೇಸಿಂಗ್ ಪೈಪ್‌ಗೆ 1.60 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ 420 ರೂ, 1.80 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ 450 ರೂ ಹಾಗೂ 2.00 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ 480 ರೂ, ಎಂ.ಎಸ್ ಕೇಸಿಂಗ್ ಕ್ಯಾಪ್ ಒಂದಕ್ಕೆ 164 ರೂ ನಿಗದಿಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
    ಸಭೆಯಲ್ಲಿ ಹಿರಿಯ ಭೂ ವಿಜ್ಞಾನಿ ಎಸ್.ಆರ್.ರಾಜಶ್ರೀ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts