More

    ಮತದಾರರ ಪಟ್ಟಿಗೆ ಸೇರಿಸಲು ಕಡೇ ಅವಕಾಶ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

    ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿರುವುದರಿಂದ ಮಾ.29ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆಯೋಗದ ಸೂಚನೆಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಅಂತೆಯೇ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ಮಾ.29ಕ್ಕೆ ಜಿಲ್ಲೆಯಲ್ಲಿ 15,15,894 ಜನರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆ ಕಡೆಯ ದಿನಕ್ಕೆ ಇನ್ನೂ ಒಂದು ವಾರವಿದೆ ಎನ್ನುವವರೆವಿಗೂ ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದೆ. ಅದರಂತೆ 2023ರ ಏ.1ಕ್ಕೆ 18 ವರ್ಷ ಪೂರ್ಣಗೊಂಡಿರುವ ಯುವಜನರು ಏ.11ರೊಳಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಏ.11ರಿಂದ ಏಳು ದಿನ ಅರ್ಜಿ ಪರಿಶೀಲಿಸಿ, ಅರ್ಹರನ್ನು ಪರಿಗಣಿಸಲಾಗುವುದು. ಲೋಪದೋಷವಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಈವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 2303 ಅರ್ಜಿ ವಿಲೇವಾರಿಗಾಗಿ ಬಾಕಿ ಇವೆ. ಇನ್ನು ಚುನಾವಣಾ ಆಯೋಗದ ನಿರ್ದೇಶನದ ಬಳಿಕ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಿ 45,03,240 ರೂ ನಗದು, 3.85 ಲಕ್ಷ ರೂ ಮೌಲ್ಯದ 1009 ಲೀಟರ್ ಅಕ್ರಮ ಮದ್ಯ, 35,290 ರೂ ಮೌಲ್ಯದ ಗಾಂಜಾ ಹಾಗೂ ಕುಕ್ಕರ್ ಸೇರಿದಂತೆ ವಿವಿಧ ವಸ್ತುಗಳಿದ್ದ 1,05,75,200 ರೂ ಮೌಲ್ಯದ 4979 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗದು ಸೇರಿದಂತೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯವು 1.54 ಕೋಟಿ ರೂಗಳಾಗಿದೆ ಎಂದರು.
    ಜಿಲ್ಲೆಯಲ್ಲಿ 34 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಮತದಾರರನ್ನು ಸೆಳೆಯುವ ಸಲುವಾಗಿ ಅಕ್ರಮವಾಗಿ ಉಡುಗೊರೆ ವಸ್ತುಗಳು ಮತ್ತು ನಗದು ಸಾಗಾಣಿಕೆ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಚುನಾವಣೆ ಘೋಷಣೆಯಾದ 48 ತಾಸಿನೊಳಗೆ ಚುನಾವಣೆ ಸಂಬಂಧಿಸಿದ ಎಲ್ಲ ರೀತಿಯ ಪ್ರಚಾರ ಸಾಮಗ್ರಿಗಳನ್ನು ತೆರವಾಗಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ. ಅದರಂತೆ ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಎಲ್ಲ ಪಿಡಿಒಗಳು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಖಾಸಗಿ ಕಟ್ಟಡಗಳ ಮೇಲೆ ಅಳವಡಿಸಿರುವ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗುವುದು. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ನಿಗಮ ಮಂಡಳಿ ಅಧ್ಯಕ್ಷರು, ಮನ್‌ಮುಲ್ ಅಧ್ಯಕ್ಷರಿಗೆ ಸರ್ಕಾರದಿಂದ ನೀಡಲಾಗಿದ್ದ ವಾಹನಗಳನ್ನು ಬುಧವಾರವೇ ವಾಪಸ್ ಪಡೆಯಲಾಗಿದೆ. ಅಂತೆಯೇ ಪ್ರವಾಸಿ ಮಂದಿರ , ಸರ್ಕ್ಯೂಟ್ ಹೌಸ್‌ಗಳಿಗೆ ರಾಜಕಾರಣಿಗಳು, ಜನಪ್ರತಿನಿಧಿಗಳ ಭೇಟಿ ಮತ್ತು ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts