More

    ಪಾರದರ್ಶಕ ಚುನಾವಣೆಗೆ ಸಿದ್ಧತೆ: ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

    ಮಂಡ್ಯ: ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಏಪ್ರಿಲ್ ಮೊದಲ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಾರ್ವಜನಿಕರು, ಮತದಾರರು, ರಾಜಕೀಯ ಪಕ್ಷಗಳು, ಮುಖಂಡರು, ಕಾರ್ಯಕರ್ತರು ಸಹಕರಿಸಬೇಕು. ಒಂದು ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಕ್ಷೇತ್ರವಾರು ಏಳು ಜನ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ಒಟ್ಟು 14 ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾದ್ಯಂತ 1798 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನು ಸಖಿ ಮತಗಟ್ಟೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ರಂತೆ, 5 ಎಥ್ನಿಕ್ ಮತಗಟ್ಟೆ ಹಾಗೂ ಹೆಚ್ಚು ಯುವ ಮತದಾರರಿರುವ 2 ಯುವ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮಳವಳ್ಳಿ ತಾಲೂಕಿನ ಬಸವನಹಳ್ಳಿ ಹಾಗೂ ಮುತ್ತತ್ತಿ ಎರಡು ಶ್ಯಾಡೋ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಎರಡು ಮತಗಟ್ಟೆಗಳಿಗೆ ನಿರಂತರ ಸಂಪರ್ಕ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
    ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲ ಮತಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಈಗಾಗಲೇ ನಡೆದಿದೆ. ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ. 151 ಮತಯಂತ್ರಗಳನ್ನು ಪ್ರತಿ ಕ್ಷೇತ್ರದ ಮತದಾರರಿಗೆ ಜಾಗೃತಿ ಮತ್ತು ಅರಿವು ಮೂಡಿಸಲು ಬಳಸಲಾಗುತ್ತಿದೆ. ಅಲ್ಲದೆ, ಈ ಬಾರಿ ಅತ್ಯಾಧುನಿಕ ಎಂ3 ಇವಿಎಂ ಬಳಕೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
    ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿಪಂ ಸಿಇಒ ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದು, ಇವರೊಂದಿಗೆ ಏಳು ಕ್ಷೇತ್ರಗಳ ತಾಪಂ ಇಒಗಳನ್ನು ನೇಮಕ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲಿದ್ದಾರೆ. ಅಲ್ಲದೆ, ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಲು ಜಿಪಂ ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಇದರೊಟ್ಟಿಗೆ 127 ಸೆಕ್ಟರ್ ಅಧಿಕಾರಿಗಳು, 34 ಚೆಕ್ ಪೋಸ್ಟ್, 35 ಫ್ಲೈಯಿಂಗ್ ಸ್ಕ್ವಾಡ್, 21 ವಿಡಿಯೋ ಸರ್ವೆಲೆನ್ಸ್‌ಗಳು, 14 ತೆರಿಗೆ, 21 ಸ್ಥಿರ ಜಾಗೃತಿ ದಳ ಹಾಗೂ 70 ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ. ಎಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ಅಲ್ಲದೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮಾಲೀಕರ ಸಭೆ ನಡೆಸಿ ಮಾದರಿ ನೀತಿ ಸಂಹಿತಿ ಬಗ್ಗೆ ತಿಳಿವಳಿಕೆ ನೀಡಲಾಗಿದೆ ಎಂದರು.
    ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವು:
    ನಗರ, ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಟಿಂಗ್ಸ್, ಫ್ಲೆಕ್ಸ್, ಪೋಸ್ಟರ್ ಮತ್ತು ಕಟೌಟ್ಸ್‌ಗಳನ್ನು ಮಾ.19ಕ್ಕೆ ತೆರವುಗೊಳಿಸಲಾಗಿದೆ. 120 ಗೋಡೆ ಬರಹಗಳು, 491 ಪೋಸ್ಟರ್ಸ್‌, 834 ಬ್ಯಾನರ್ಸ್‌ ಹಾಗೂ ಇತರೆ 228 ಒಟ್ಟು 1673 ಫ್ಲೆಕ್ಸ್, ಬ್ಯಾನರ್‌ಗಳ ಪೈಕಿ 1200 ತೆರವುಗೊಳಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳನ್ನು ನೀಡಲು 1950ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಮಾಸ್ಟರ್ ಟ್ರೈನರ್ ಶ್ರೀನಿವಾಸ್, ಚುನಾವಣಾ ಶಿರಸ್ತೇದಾರ್ ದೀಪಕ್ ಇತರರಿದ್ದರು. ಇದೇ ವೇಳೆ ಮತಯಂತ್ರಗಳ ಪ್ರಾತ್ಯಕಿಕೆ ನೀಡಲಾಯಿತು. ಮತದಾರರು ಯಾವೆಲ್ಲ ಕ್ರಮ ಅನುಸರಿಸಬೇಕು. ಯಂತ್ರಗಳ ಕಾರ್ಯಚಟುವಟಿಕೆ ಯಾವ ರೀತಿ ಎನ್ನುವುದನ್ನು ಮಾಸ್ಟರ್ ಟ್ರೈನರ್ ಶ್ರೀನಿವಾಸ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts