More

    ಅಪೂರ್ಣ ಯೋಜನೆ ಚುರುಕುಗೊಳಿಸಲು ಕ್ರಮ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾಹಿತಿ ; ಪತ್ರಕರ್ತರ ಜತೆ ಸೌಹಾರ್ದ ಮಾತುಕತೆ

    ತುಮಕೂರು : ಜಿಲ್ಲಾದ್ಯಂತ ಪೌತಿ ಖಾತೆಯನ್ನು ಸರಿಪಡಿಸಲು ಆಂದೋಲನ ರೂಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತರ ಸೌಹಾರ್ದ ಭೇಟಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.20ರಂದು ಮಧುಗಿರಿ ತಾಲೂಕು ಲಕ್ಷ್ಮೀಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅಹವಾಲುಗಳಲ್ಲಿ ಬಹುತೇಕ ಅರ್ಜಿಗಳು ಪೌತಿಖಾತೆ, ಪಹಣಿ ಸಮಸ್ಯೆಗೆ ಸಂಬಂಧಿಸಿದ್ದಾಗಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಡಿ ಬರುವ ಪೌತಿಖಾತೆ, ಪಹಣಿ ಸಮಸ್ಯೆ ಸೇರಿ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

    ರೈತರು ಜಮೀನಿನ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಸರ್ಕಾರದ ಸೌಲಭ್ಯಗಳು ಅವರಿಗೆ ದೊರೆಯುತ್ತಿಲ್ಲ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷಗಳ ಹಿಂದೆ ತಿಪಟೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದರಿಂದ ಜಿಲ್ಲೆಯ ಬಗ್ಗೆ ಸ್ವಲ್ಪಮಟ್ಟಿಗೆ ಮಾಹಿತಿ ಹೊಂದಿದ್ದೇನೆ. ಜಿಲ್ಲೆಯ ಜನರ ಚಿಂತನೆ, ಪ್ರಾಧಾನ್ಯತೆ, ಅವಕಾಶಗಳು ಹಿಂದಿಗಿಂತ ಈಗ ಬದಲಾಗಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಕೈಗಾರಿಕೆ, ಎಚ್‌ಎಎಲ್, ಸೋಲಾರ್ ಪಾರ್ಕ್, ನೀರಾವರಿ ಮತ್ತಿತರ ಯೋಜನೆಗಳಿಂದ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ. ಪೂರ್ಣಗೊಳ್ಳದ ಯೋಜನೆಗಳನ್ನು ಚುರುಕುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಕಳೆದ 6 ದಿನಗಳಿಂದ ಜಿಲ್ಲೆಯಲ್ಲಿ ಸುಮಾರು 1500 ಕಿ.ಮೀ., ಗಳಷ್ಟು ಪ್ರವಾಸ ಕೈಗೊಂಡಿದ್ದೇನೆ. ಜನರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ. ಜಿಲ್ಲೆಯ ಇತರ ತಾಲೂಕುಗಳಿಗಿಂತ ಪಾವಗಡ ತಾಲೂಕು ಬಹಳ ಹಿಂದುಳಿದಿರುವುದು ಗಮನಕ್ಕೆ ಬಂದಿದೆ. ತಳಮಟ್ಟದಲ್ಲಿ ಕೆಲಸಗಳು ಸಮರ್ಪಕವಾಗಿ ನಡೆದರೆ ಅಭಿವೃದ್ಧಿ ಸಾಧ್ಯವೆಂದು ಮನಗಂಡು ಗ್ರಾಪಂ ಸದಸ್ಯರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಶೇ.50 ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಬಗ್ಗೆ ಪ್ರೇರೇಪಿಸಲಾಗುವುದು ಎಂದು ಜಿಪಂ ಸಿಇಒ ಗಂಗಾಧರಸ್ವಾಮಿ ಹೇಳಿದರು.

    ಅಕ್ರಮ ಗಣಿಗಾರಿಕೆ ಮೇಲೆ ನಿಗಾ: ಜಿಲ್ಲೆ ಎಲ್ಲ ಉಪ ವಿಭಾಗಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿಯಿದ್ದು, ಈ ಸಮಿತಿಯು ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ನಿಗಾ ಇಟ್ಟಿರುತ್ತದೆ. ಗಣಿಗಾರಿಕೆಯಲ್ಲಿ ಅಕ್ರಮವಾಗಿ ಜಿಲೆಟಿನ್‌ನಂತಹ ಸ್ಫೋಟಕ ವಸ್ತುಗಳನ್ನು ಬಳಸುವ ಬಗ್ಗೆ ದೂರುಗಳು ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ವೈ.ಎಸ್.ಪಾಟೀಲ ತಿಳಿಸಿದರು. ಎತ್ತಿನಹೊಳೆ, ಹೇಮಾವತಿ ನಾಲೆ, ಭದ್ರಾ, ಎಚ್‌ಎಎಲ್ ಯೋಜನೆಗಳ ಪ್ರಗತಿಯತ್ತ ಹೆಚ್ಚು ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಯಾವುದೇ
    ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ದೂರುಗಳು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಅಸಮರ್ಥರಲ್ಲವೆಂದು ಭಾವಿಸಲಾಗುವುದು ಎಂದು ಎಚ್ಚರಿಸಿದರು.

    ಉಳ್ಳವರಿಗೆ ಸರ್ಕಾರಿ ಯೋಜನೆಗಳಿವೆ ಎಂಬ ಮಾತನ್ನು ಹುಸಿಗೊಳಿಸಬೇಕು. ಗಡಿ ಭಾಗದಲ್ಲಿರುವ ಅನೇಕ ಫಲಾನುಭವಿಗಳಿಗೆ ಈವರೆಗೂ ಯೋಜನೆಗಳ ಲಾಭ ದೊರೆತಿಲ್ಲ. ಇಂತಹವರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಡಳಿತದ ಮೇಲೆ ಜನರ ವಿಶ್ವಾಸ ಹೆಚ್ಚಾಗುವಂತೆ ಸೇವೆ ಸಲ್ಲಿಸುತ್ತೇನೆ.
    ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts