More

    ನೋಟು ಬದಲಾವಣೆ ಪ್ರಕ್ರಿಯೆ ಆರಂಭ: ಮೊದಲ ದಿನವೇ ಹಲವೆಡೆ ಗೊಂದಲ, ಬ್ಯಾಂಕುಗಳು ಹೇಳಿದ್ದೇನು?

    ನವದೆಹಲಿ: ಇಂದಿನಿಂದ 2,000 ರೂಪಾಯಿ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಮೊದಲ ದಿನವೇ ದೇಶದ ಹಲವೆಡೆ ನೋಟು ವಿನಿಮಯ ವಿಚಾರದಲ್ಲಿ ಗುರುತಿನ ಚೀಟಿ ಮತ್ತು ಅರ್ಜಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದೆ.

    ಸಾಕ್ಷಿಯನ್ನಾಗಿ ಗುರುತಿನ ಚೀಟಿ ನೀಡುವಂತೆ ಕೆಲವು ಬ್ಯಾಂಕ್​ಗಳು ಒತ್ತಾಯ ಮಾಡುತ್ತಿವೆ ಎಂದು ಗ್ರಾಹಕರು ಆರೋಪ ಮಾಡಿದ್ದು, ಇದು ಬ್ಯಾಂಕುಗಳಲ್ಲಿನ ಸ್ಥಿರವಾದ ನೀತಿಯ ಕೊರತೆಯನ್ನು ಸೂಚಿಸುತ್ತದೆ. ಇನ್ನು ಕೆಲವರು ನಮ್ಮ ಬಳಿ ಯಾವುದೇ ಗುರುತಿನ ಚೀಟಿ ಕೇಳಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲವೆಡೆ ನೋಟು ವಿನಿಮಯ ಮಾಡಿಕೊಳ್ಳಲು ನಿರಾಕರಿಸುತ್ತಿರುವ ಬ್ಯಾಂಕ್​ಗಳು, ವಿನಿಮಯ ಬದಲಾಗಿ ಹಣವನ್ನು ಡೆಪಾಸಿಟ್​ ಮಾಡುವಂತೆ ಹೇಳುತ್ತಿವೆ.

    ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷವೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದ ಎಂಬಿ ಪಾಟೀಲ್; ಸ್ಪಷ್ಟನೆ ನೀಡಿ ಯು ಟರ್ನ್!

    ಪ್ರತ್ಯೇಕ ಮಾರ್ಗಸೂಚಿ

    ಭಾರತದ ಬಹುದೊಡ್ಡ ಸಾರ್ವಜನಿಕ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ತನ್ನ ಯಾವುದೇ ಶಾಖೆಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅರ್ಜಿಯಾಗಲಿ ಅಥವಾ ಯಾವುದೇ ಚೀಟಿಯಾಗಲಿ ಅವಶ್ಯಕತೆ ಇಲ್ಲ ಎಂದಿದೆ. ಆದರೆ, ಕೆಲವು ಪ್ರಮುಖ ಬ್ಯಾಂಕ್​ಗಳಲ್ಲಿ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದ್ದು, ಗುರುತಿನ ಚೀಟಿ ಮತ್ತು ಅರ್ಜಿಗಳನ್ನು ಕೇಳುತ್ತಿವೆ.

    ಖಾತೆದಾರರಲ್ಲದವರ ಬಳಿ ಗುರುತಿನ ಚೀಟಿ

    ಖಾತೆದಾರರಲ್ಲದವರನ್ನು ಗುರುತಿನ ಚೀಟಿ ಮತ್ತು ಐಡಿಗಳನ್ನು ಕೇಳುತ್ತಿದ್ದೇವೆ ಎಂದು ಕೋಟಕ್​ ಬ್ಯಾಂಕ್​ ತಿಳಿಸಿದೆ. ಆ್ಯಕ್ಸಿಸ್​ ಬ್ಯಾಂಕ್​, ಸ್ಟ್ಯಾಂಡರ್ಡ್​ ಚಾಟರ್ಡ್​, ಯೆಸ್​ ಬ್ಯಾಂಕ್​ ಮತ್ತು ಬ್ಯಾಂಕ್​ ಆಫ್​ ಇಂಡಿಯಾ ಯಾವುದೇ ಅರ್ಜಿ ಅಥವಾ ಚೀಟಿಯನ್ನು ಕಡ್ಡಾಯ ಮಾಡಿಲ್ಲ. ಎಚ್​ಎಸ್​ಬಿಸಿ ಮತ್ತು ಫೆಡರಲ್​ ಬ್ಯಾಂಕ್​ಗಳು ಖಾತೆದಾರರಲ್ಲದವರ ಬಳಿ ಗುರುತಿನ ಚೀಟಿಯನ್ನು ಕೇಳುತ್ತಿವೆ. ಆದರೆ, ಅರ್ಜಿ ಬೇಕಾಗಿಲ್ಲ ಎಂದು ತಿಳಿಸಿವೆ. ಬ್ಯಾಂಕ್​ ಆಫ್​ ಬರೋಡಾ ಕೂಡ ಇದೇ ನಿಯಮ ಅನುಸರಿಸಿದೆ. ಐಸಿಐಸಿಐ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ಗಳು ಎಲ್ಲ ಖಾತೆದಾರರು ಅರ್ಜಿ ಭರ್ತಿ ಮಾಡುವಂತೆ ಹೇಳಿದೆ. ಆದರೆ, ಖಾತೆದಾರರಲ್ಲದವರಿಗೆ ಐಡಿಯನ್ನು ನೀಡುವಂತೆ ಕೇಳಿದೆ.

    ಡೆಪಾಸಿಟ್​ ಮಾಡಲು ಸೂಚನೆ

    ಪಂಜಾಬ್ ನ್ಯಾಷನಲ್ ಬ್ಯಾಂಕ್​, ಯಾವುದೇ ಅರ್ಜಿ ಅಥವಾ ಐಡಿ ಅಗತ್ಯವಿಲ್ಲ ಎಂದು ಹೇಳಿದರೆ, ದೆಹಲಿಯ ಕರೋಲ್ ಬಾಗ್ ಶಾಖೆಯು ಪ್ರವೇಶದ್ವಾರದಲ್ಲಿ ಪೋಸ್ಟರ್ ಅಂಟಿಸಿದ್ದು, ನೋಟುಗಳನ್ನು ಬದಲಾಯಿಸಲು ಅಧಿಕೃತವಾಗಿ ಮಾನ್ಯವಾದ ದಾಖಲೆಯ ಅಗತ್ಯವಿದೆ ಎಂದು ಹೇಳಿದೆ. ದೆಹಲಿಯ ಗ್ರಾಹಕರೊಬ್ಬರು ಮಾತನಾಡಿ, ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಹೋಗಿದ್ದೆ. ಆದರೆ, ಅವರು ನೋಟುಗಳನ್ನು ಡೇಪಾಸಿಟ್​ ಮಾಡಲು ಹೇಳಿ, ನೋಟುಗಳನ್ನು ಬದಲಾಯಿಸಲು ನಿರಾಕರಿಸಿದರು ಎಂದಿದ್ದಾರೆ.

    ಇದನ್ನೂ ಓದಿ: ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಶಿವಣ್ಣ ಬೇಸರ: ಸಮಾಧಾನ ಮಾಡಲು ಭೇಟಿ ನೀಡಿದರೇ ಸುರ್ಜೆವಾಲಾ?

    ಯಾವುದೇ ಕಾರ್ಯವಿಧಾನ ನಿರ್ದೇಶಿಸಿಲ್ಲ

    ನಿನ್ನೆ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​, ಬ್ಯಾಂಕ್‌ಗಳು ತಮ್ಮದೇ ಆದ ನಿಯಮಗಳನ್ನು ಅನುಸರಿಸಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಯಾವುದೇ ಕಾರ್ಯವಿಧಾನವನ್ನು ಆರ್​ಬಿಐ ನಿರ್ದೇಶಿಸಿಲ್ಲ ಎಂದಿದ್ದಾರೆ.ಬ್ಯಾಂಕ್​ಗಳು ದಾಖಲೆಗಳು ಅಥವಾ ರಿಕ್ವಿಸಿಷನ್ ಸ್ಲಿಪ್‌ಗಳನ್ನು ಕೇಳುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡದ ಶಕ್ತಿಕಾಂತ್​ ದಾಸ್​, ನೋಟು ವಿನಿಮಯ ಮತ್ತು ಡೆಪಾಸಿಟ್​ ವಿಚಾರದಲ್ಲಿ ಬ್ಯಾಂಕುಗಳು ತಮ್ಮದೇ ಆದ ಅಸ್ತಿತ್ವದಲ್ಲಿರುವ ನಿಯಮಗಳನ್ನು ಹೊಂದಿವೆ ಎಂದು ಹೇಳಿದರು.

    2,000 ನೋಟುಗಳನ್ನು ಬದಲಾಯಿಸಲು ಅಥವಾ ಹಿಂದಿರುಗಿಸಲು ಯಾವುದೇ ಗುರುತಿನ ಚೀಟಿಗಳು ಅಗತ್ಯವಿಲ್ಲದಿದ್ದರೆ ಸರ್ಕಾರವು ಕಪ್ಪು ಹಣವನ್ನು ಹೇಗೆ ಮೇಲ್ವಿಚಾರಣೆ ಮಾಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಕ್ತಿಕಾಂತ್ ದಾಸ್, ನಾವು ಬ್ಯಾಂಕ್‌ಗಳಿಗೆ ಅಸ್ತಿತ್ವದಲ್ಲಿರುವ ಅವರ ಕಾರ್ಯವಿಧಾನವನ್ನು ಅನುಸರಿಸಲು ಕೇಳಿದ್ದೇವೆ. ನಾವು ಬೇರೆ ಏನನ್ನೂ ಮಾಡಲು ಕೇಳಿಲ್ಲ ಎಂದರು.

    ದೊಡ್ಡ ಮೊತ್ತದ ಡೆಪಾಸಿಟ್​ಗಳನ್ನು ಪರಿಶೀಲಿಸುತ್ತೀರಾ ಎಂಬ ಪ್ರಶ್ನೆಗೆ, ಆರ್‌ಬಿಐ ಎಂದಿಗೂ ಬ್ಯಾಂಕ್‌ಗಳಲ್ಲಿನ ಡೆಪಾಸಿಟ್​ಗಳನ್ನು ಪರಿಶೀಲಿಸುವುದಿಲ್ಲ. ಆದಾಯ ತೆರಿಗೆ ಇಲಾಖೆಗಳು ಅದನ್ನು ಮಾಡುತ್ತವೆ. ವರದಿ ಮಾಡುವ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಹೊಂದಿವೆ ಮತ್ತು ಅವರು ಇದನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು ಹಿಂಪಡೆದಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿ ಅವಧಿಯನ್ನೂ ನಿಗದಿ ಪಡಿಸಿದೆ. ಇದೇ ವರ್ಷದ ಸೆ. 30ರ ವರೆಗೂ ಕಾಲಾವಕಾಶ ಇರಲಿದೆ.(ಏಜೆನ್ಸೀಸ್​)

    2000 ರೂ. ನೋಟು ಬದಲಾವಣೆ: ಬದಲಿಸಿಕೊಳ್ಳಲು ಐಡಿ ಬೇಕಾ, ಖಾತೆ ಇರಲೇಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts