More

  ಸಾವಿತ್ರಿಬಾಯಿ ಫುಲೆ ಅಕ್ಷರಕ್ರಾಂತಿ ಅನನ್ಯ

  ದಾವಣಗೆರೆ: ಮೌಢ್ಯಭರಿತವಾದ, ವೈಜ್ಞಾನಿಕ ಚಿಂತನೆಗೆ ಅವಕಾಶವೇ ಇಲ್ಲದ ಕಾಲದಲ್ಲಿ, ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಎಂಬ ತತ್ವದಡಿ ಸಾವಿತ್ರಿಬಾಯಿ ಫುಲೆ ಮಾಡಿದ ಅಕ್ಷರ ಕ್ರಾಂತಿ ಅನನ್ಯ ಮತ್ತು ವಿಶೇಷವಾದುದು ಎಂದು ಮೇಲ್ಮನೆ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.

  ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಜಿಲ್ಲಾ ಸಂಘದಿಂದ ಗೀತಾಂಜಲಿ ಚಿತ್ರಮಂದಿರದಲ್ಲಿ ಭಾನುವಾರ, ಶಿಕ್ಷಕರು- ಶಾಲಾ ಮಕ್ಕಳಿಗೆ ಆಯೋಜಿಸಿದ್ದ, ಡಾ.ಸರಜೂ ಕಾಟ್ಕರ್ ಕಾದಂಬರಿ ಆಧಾರಿತ ಸಾವಿತ್ರಿಬಾಯಿ ಫುಲೆ ಚಿತ್ರದ ವಿಶೇಷ ಪ್ರದರ್ಶನ ಬಿಡುಗಡೆಗೊಳಿಸಿ ಮಾತನಾಡಿದರು.

  ಭಾರತ ದೇಶದ ಮೊಟ್ಟ ಮೊದಲ ಶಿಕ್ಷಕಿ ಫುಲೆ, ಸಮಾಜ ಬದಲಾವಣೆಗಾಗಿ ಅಕ್ಷರಾಭ್ಯಾಸದ ಮೂಲಮಂತ್ರದ ಯೋಚನೆಯೊಂದಿಗೆ ಮೊದಲ ಬಾರಿಗೆ ಅಕ್ಷರ ಪರಂಪರೆಯನ್ನು ನೀಡಿದ್ದಾರೆ. ಅವರ ಜೀವನಾಧರಿತ ಚಿತ್ರವನ್ನು ಯುವ ಪೀಳಿಗೆ ವೀಕ್ಷಿಸುವ ಜತೆಗೆ ಸಂದೇಶ ನೀಡಬೇಕಿದೆ ಎಂದು ಆಶಿಸಿದರು.

  ಇಡೀ ವಿಶ್ವಕ್ಕೆ ಗುರು ಪರಂಪರೆ, ಗುರುಕುಲ ಪದ್ಧತಿ ಪ್ರದರ್ಶಿಸಿದ್ದೇ ಭಾರತ. ಅಂದಿನಿಂದ ಇಂದಿನವರೆಗೆ ನಾವು ವಿದ್ಯಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದೇವೆ. ತಾಂತ್ರಿಕ ಆಧಾರಿತ ಶಿಕ್ಷಣದಲ್ಲಿ ಇತರೆ ದೇಶಗಳು ನಮಗಿಂತಲೂ ಮುಂದಿದ್ದರೂ ಮಾನವೀಯ ಮೌಲ್ಯ ಮತ್ತು ಗುಣಮಟ್ಟದ ಶಿಕ್ಷಣವನ್ನು ನಮ್ಮ ಹಿರಿಯರು ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.

  ಇಂದಿನ ರಂಜನೀಯ ವ್ಯವಸ್ಥೆಯ ಕಾಲದಲ್ಲಿ ಸಮಾಜಕ್ಕೆ ಫುಲೆ ಮಾಡಿದ ಉಪಕಾರ ಸ್ಮರಿಸಲು ಶಿಕ್ಷಕಿಯರ ಸಂಘ ಉತ್ತಮ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ಚಿತ್ರ ಭವಿಷ್ಯದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯುವ ಲಕ್ಷಣಗಳಿವೆ ಎಂದು ಹೇಳಿದರು.

  ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ, ಬಿಇಒಗಳಾದ ನಿರಂಜನಮೂರ್ತಿ, ಟಿ.ಅಂಬಣ್ಣ, ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್, ಕಾರ್ಯದರ್ಶಿ ದಾರುಕೇಶಯ್ಯ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಹಾಲೇಶ್, ಕಾರ್ಯದರ್ಶಿ ರೇವಣಸಿದ್ದಯ್ಯ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ರವೀಂದ್ರನಾಥ್, ಗೌರವಾಧ್ಯಕ್ಷೆ ಕೆ.ಜಿ. ಸೌಭಾಗ್ಯಾ, ಪಿ. ಪದ್ಮಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts