More

    ವಿಶೇಷ ಮತದಾನಕ್ಕೆ 688 ಜನ ನೋಂದಣಿ  ಜಿಲ್ಲಾಧಿಕಾರಿ ವೆಂಕಟೇಶ್ ಮಾಹಿತಿ

    ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮನೆಯಿಂದ ಹಾಗೂ ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡಲು 688 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಗತ್ಯ ಸೇವಾ ಇಲಾಖೆ ಮತದಾರರ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಂಗಡ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. 85 ವರ್ಷ ಮೇಲ್ಪಟ್ಟವರು ಹಾಗೂ ವಿಕಲಾಂಗರು ತಮ್ಮ ಮನೆಯಲ್ಲೇ ಮತದಾನ ಮಾಡುವರು ಎಂದು ಹೇಳಿದರು. ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ-ಸಿಬ್ಬಂದಿ ಸೌಲಭ್ಯ ಕೇಂದ್ರದಲ್ಲಿ ಮತದಾನಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿ ಕಚೇರಿಯಿಂದ ಸ್ಥಾಪಿಸಲಾಗುವ ಮತದಾನ ಸೌಲಭ್ಯ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಮಾಡಲಿದ್ದಾರೆ ಎಂದರು.
    ಮನೆಯಲ್ಲೇ ಮತದಾನಕ್ಕೆ ಮತ್ತು ಅಗತ್ಯ ಸೇವಾ ಇಲಾಖೆ ಮತದಾರರಿಗೆ 12ಡಿ ನಮೂನೆ ವಿತರಣೆ ಮಾಡಿ ದೃಢೀಕರಣ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅಗತ್ಯ ಸೇವೆಯಲ್ಲಿ ತೊಡಗಿರುವ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ  ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರಸ್ಥಾನದಿಂದಲೇ ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರೂ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಈ ಬಾರಿಯ ಚುನಾವಣೆಯ ವಿಶೇಷ ಎಂದು ತಿಳಿಸಿದರು.
    ಸೇವಾ ಮತದಾರರ ನೋಂದಣಿ
    ದಾವಣಗೆರೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಲ್ಲಿಯ ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವವರು 295, ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 393 ಮತದಾರರು ದಾವಣಗೆರೆ ಕ್ಷೇತ್ರದಲ್ಲಿ ಮತದಾನ ಮಾಡಲು 12ಡಿ ನೀಡಿದ್ದಾರೆ. 444 ಮತದಾರರು ದಾವಣಗೆರೆ ಕ್ಷೇತ್ರದ ಸಿಬ್ಬಂದಿಯಾಗಿದ್ದು ಇತರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಲು 12ಡಿ ನೋಂದಣಿ ಮಾಡಿಸಿದ್ದಾರೆ, ಇವರೆಲ್ಲರೂ ದಾವಣಗೆರೆ ಕೇಂದ್ರಸ್ಥಾನದಲ್ಲಿಯೇ ಇತರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವರು.
    ಮನೆಯಲ್ಲೇ ಮತದಾನ :
    ಕ್ಷೇತ್ರದಲ್ಲಿ 85 ವರ್ಷಕ್ಕಿಂತಲೂ ಹೆಚ್ಚಿರುವ 12,837 ಮತದಾರರಿದ್ದಾರೆ. ಇದರಲ್ಲಿ 7665 ಮತದಾರರಿಗೆ 12ಡಿ ನಮೂನೆ ನೀಡಲಾಗಿದೆ. ಕ್ಷೇತ್ರದಲ್ಲಿ 22,831ವಿಕಲಾಂಗ ಮತದಾರರಿದ್ದು, ಇದರಲ್ಲಿ 16005 ಮಂದಿಗೆ 12ಡಿ ನಮೂನೆ ನೀಡಲಾಗಿದೆ. ಈಗಾಗಲೇ ಮನೆಯಲ್ಲೇ ಮತದಾನ ಮಾಡಲು ಒಪ್ಪಿ ಸಲ್ಲಿಸಿರುವ ಮತದಾರರನ್ನು ಆನ್‌ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಮೂದಿಸುವ ಕೆಲಸವನ್ನು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಮಾಡುತ್ತಿದ್ದಾರೆ ಎಂದರು..ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts