More

    ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಜರ್ಮನ್ ತಂತ್ರಜ್ಞಾನ ಬಳಕೆ

    ಡಿ.ಎಂ.ಮಹೇಶ್ ದಾವಣಗೆರೆ: ದಾವಣಗೆರೆಯಲ್ಲಿ 1956ರಲ್ಲಿ ಆರಂಭವಾಗಿದ್ದ ತರಕಾರಿ ಮಾರುಕಟ್ಟೆಗೆ ಮೈಸೂರು ಅರಸ ಕೃಷ್ಣರಾಜೇಂದ್ರ ಒಡೆಯರ ನಾಮಕರಣವಾಗಿತ್ತು. ಮೂರು ವರ್ಷದ ಹಿಂದೆ ತೆರವಾಗಿದ್ದ ಈ ಜಾಗದಲ್ಲಿ ಎರಡಂತಸ್ತಿನ ಸುಸಜ್ಜಿತ ಮಾರುಕಟ್ಟೆ ತಲೆ ಎತ್ತಿದೆ.

    ಎಸ್.ಎಸ್.ಮಲ್ಲಿಕಾರ್ಜುನ್ ಎಪಿಎಂಸಿ ಸಚಿವರಾಗಿದ್ದಾಗ ವೇರ್‌ಹೌಸ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ ನಿಧಿಯಡಿ ದಾವಣಗೆರೆ ಎಪಿಎಂಸಿಗೆ ಮಂಜೂರಾಗಿದ್ದ 25 ಕೋಟಿ ರೂ. ಅನುದಾನ ಬಳಸಲಾಗಿದೆ. ಜರ್ಮನ್ ತಂತ್ರಜ್ಞಾನದಡಿ ಪ್ರಿಕಾಸ್ಟ್ ಸ್ಲಾೃಬ್ ಮಾದರಿಯಲ್ಲಿ ಕಾಮಗಾರಿ ನಿರ್ವಹಣೆ ಆಗಿರುವುದು ರಾಜ್ಯದಲ್ಲೇ ಪ್ರಥಮ. ತಮಿಳುನಾಡಿನ ಟೀನೇಜ್ ಕನ್‌ಸ್ಟ್ರಕ್ಷನ್ಸ್‌ನವರು ಮೂಲ ಗುತ್ತಿಗೆ ವಹಿಸಿದ್ದರು. ಹರಿಹರದ ಹುಲ್ಮನಿ ಕನ್‌ಸ್ಟ್ರಕ್ಷನ್ಸ್ ಇತರೆ ಕಾಮಗಾರಿ ಹೊಣೆ ಹೊತ್ತಿತ್ತು.

    ನೆಲ ಮಹಡಿಯಲ್ಲಿ 138, ಮೊದಲ ಅಂತಸ್ತಿನಲ್ಲಿ 116 ಮಳಿಗೆ (ಒಟ್ಟು 254)ಗಳ ಸಮುಚ್ಛಯವಿದ್ದು, ಮೇಲ್ಭಾಗದಲ್ಲಿ ದಾಸ್ತಾನಿಗೆ ಜಾಲರಿ ವ್ಯವಸ್ಥೆಯಿದೆ. 4 ಬ್ಲಾಕ್‌ಗಳಲ್ಲಿ ಪುರುಷರು ಮಹಿಳೆಯರಿಗೆ ಪ್ರತ್ಯೇಕ ಮೂತ್ರಾಲಯ, ಶೌಚಗೃಹಗಳಿವೆ. ವಿದ್ಯುದ್ದೀಕರಣ, ಬಣ್ಣದ ಅಂತಿಮ ಸ್ಪರ್ಶ ನಡೆಯುತ್ತಿದೆ. ಮೆಟ್ಟಿಲುಗಳನ್ನು ನಿರ್ಮಿಸಿದ್ದರೂ ಎರಡು ಲಿಫ್ಟ್ ಕಾಮಗಾರಿ ಬಾಕಿ ಇದೆ.

    ವ್ಯಾಪಾರಿಗಳ ಸಂಕಟ: ಹಿಂದಿನ ಹಳೆ ಮಾರುಕಟ್ಟೆ ತೆರವುಗೊಳಿಸಿ ತರಕಾರಿ, ಕಿರಾಣಿ ಸೇರಿ ಬಹುತೇಕ ವರ್ತಕರಿಗೆ ಸಮೀಪದ ಹಳೆಯ ಸರ್ಕಾರಿ ಮಾಧ್ಯಮಿಕ ಶಾಲಾ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿತ್ತು. ದುರ್ನಾತ, ಮತ್ತೊಂದೆಡೆ ವಹಿವಾಟು ನಡೆಯದ ಕಾರಣಕ್ಕೆ ಅನೇಕರು ಮಾರುಕಟ್ಟೆ ರಸ್ತೆಗಳಲ್ಲೇ ವ್ಯಾಪಾರ ನಡೆಸಿದ್ದಾರೆ. ಗ್ರಾಹಕರು ಕೂಡ ರಸ್ತೆಗಳಲ್ಲೇ ಬೈಕ್ ನಿಲ್ಲಿಸುವ ಪರಿಪಾಠ ಬೆಳೆಸಿಕೊಂಡಿರುವ ಕಾರಣಕ್ಕೆ ಪೊಲೀಸರು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಹರಸಾಹಸ ಪಡುತ್ತಲೂ ಇದ್ದಾರೆ ! ಮೂರು ವರ್ಷದಿಂದ ಬಿಸಿಲು, ಧೂಳು, ದುರ್ನಾತದಲ್ಲೇ ವ್ಯಾಪಾರ ಮಾಡಿದ್ದೇವೆ. 9 ತಿಂಗಳಲ್ಲಿ ಆಗಬೇಕಿದ್ದ ಕಾಮಗಾರಿ ತಡವಾಗಿದೆ. ನೂತನ ಮಾರುಕಟ್ಟೆ ಉದ್ಘಾಟಿಸಿ ಬಿಟ್ಟು ಕೊಡಬೇಕೆಂಬುದು ವರ್ತಕರ ಒತ್ತಾಸೆ.

    ದಾರಿ ಯಾವುದಯ್ಯ ಪಾರ್ಕಿಂಗ್‌ಗೆ?: ಎರಡನೇ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ವಿಶಾಲ ವ್ಯವಸ್ಥೆಯೇನೋ ಮಾಡಲಾಗಿದೆ. ವಾಹನಗಳ ಓಡಾಟಕ್ಕೆ ಮೇಲ್ಭಾಗದಿಂದ ಒಂದನೇ ಅಂತಸ್ತಿನವರೆಗೆ ರ‌್ಯಾಂಪ್ ಸಿದ್ಧವಾಗಿದೆ. ಅಲ್ಲಿಂದ ನೆಲಮಟ್ಟಕ್ಕೆ ಸಂಪರ್ಕ ರಸ್ತೆ ಇಲ್ಲದೆ ದ್ವೀಪದಂತಿದೆ ! ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಾಗದ ಮೂಲಕವೇ ಸಂಪರ್ಕ ರಸ್ತೆ ಕಲ್ಪಿಸುವ ಅನಿವಾರ್ಯತೆ ಇದೆ. ಆದರೆ ಮಕ್ಕಳ ಹೊಸ ಎನ್‌ಐಸಿಯು ವಿಭಾಗಕ್ಕೆ ಸನಿಹವೇ ಈ ಮಾರ್ಗ ಬರುವುದರಿಂದ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಆಸ್ಪತ್ರೆ ಅಧೀಕ್ಷಕರು ಅನುಮತಿಸಿಲ್ಲ. ಪಾರ್ಕಿಂಗ್ ಇಲ್ಲದೆ ಉದ್ಘಾಟನೆಯಾದರೂ ವಾಹನ ನಿಲುಗಡೆ ತಲೆನೋವಾಗಲಿದೆ. ಸಮಸ್ಯೆ ಮುಖ್ಯಮಂತ್ರಿ ಅಂಗಳದಲ್ಲಿದೆ.

    ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಸಕ್ತಿಯಿಂದಾಗಿ ಪ್ರಿಕಾಸ್ಟ್ ಸ್ಲಾೃಬ್ನಡಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಕಾಮಗಾರಿ ನಡೆದಿದೆ. ಪಾರ್ಕಿಂಗ್ ದಾರಿಗಾಗಿ ರ‌್ಯಾಂಪ್ ಕಲ್ಪಿಸಲು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಸಿಎಂ ಭೇಟಿ ಮಾಡಿದ್ದೇವೆ. ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಂದ ಪತ್ರ ನಿರೀಕ್ಷಿಸಲಾಗಿದೆ. ಇದು ಸಾಧ್ಯವಾದಲ್ಲಿ ಒಂದೆರಡು ತಿಂಗಳಲ್ಲಿ ಮಾರುಕಟ್ಟೆ ಉದ್ಘಾಟನೆಯಾಗಲಿದೆ.
    ಮುದೇಗೌಡ್ರ ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ.

    ನೂತನ ತರಕಾರಿ ಮಾರುಕಟ್ಟೆ ಎಪಿಎಂಸಿಯಿಂದ ಪಾಲಿಕೆಗೆ ಹಸ್ತಾಂತರವಾಗಬೇಕಿದೆ. ನಂತರದಲ್ಲಿ ಇದುವರೆಗೆ ನಿಗದಿತ ವರ್ಷಗಳ ಭೋಗ್ಯ ಆಧಾರದಡಿ ಹರಾಜಿನಲ್ಲಿ ಮಳಿಗೆ ಪಡೆದವರ ಅವಧಿ ಇದ್ದಲ್ಲಿ ಅವರಿಗೆ ಮಳಿಗೆ ನೀಡಲಾಗುವುದು. ಹೊಸಬರಿದ್ದಲ್ಲಿ ಹರಾಜು ಪ್ರಕ್ರಿಯೆ ಆಧರಿಸಿ ಮಳಿಗೆಗಳನ್ನು ಸೂಕ್ತ ದರದಡಿ ನೀಡುವ ಉದ್ದೇಶವಿದೆ.
    ವಿಶ್ವನಾಥ ಮುದಜ್ಜಿ, ಪಾಲಿಕೆ ಆಯುಕ್ತ.

    ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದಾರೆ. ಹೊಸ ವ್ಯವಸ್ಥೆಯಲ್ಲಿ ಎಷ್ಟು ಜನರಿಗೆ ಅವಕಾಶವಾಗುತ್ತದೆ ಎಂಬುದನ್ನು ನೋಡಬೇಕಿದೆ. ವರ್ತಕರ ಅನುಕೂಲವಾಗುವ ದೃಷ್ಟಿಯಿಂದ ಕೂಡಲೇ ಉದ್ಘಾಟನೆಗೆ ಸಂಬಂಧಪಟ್ಟವರು ಗಮನ ಹರಿಸಬೇಕು.
    ಬಕ್ಕೇಶ್ ಐರಣಿ, ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts