More

    ಶಾಸಕರಿಂದ ಕಾಮಗಾರಿ ಬದಲಾವಣೆ ಆರೋಪ

    ದಾವಣಗೆರೆ: ಅನುಮೋದಿತ ಕಾಮಗಾರಿ ಮಾರ್ಪಡಿಸಿದ ಹೊನ್ನಾಳಿ ಶಾಸಕರ ಜತೆಯಲ್ಲೇ ಬಿಜೆಪಿಯ ಜಿಪಂ ಸದಸ್ಯರು ಹಾಗೂ ಸಿಇಒ ಖಾಸಗಿಯಾಗಿ ಸಮಸ್ಯೆ ಪರಿಹರಿಸುವಂತೆ ಜಿಪಂ ಸದಸ್ಯ ತೇಜಸ್ವಿ ಪಟೇಲ್ ಸಲಹೆ ನೀಡಿದರು.
    ಜಿಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಡಿ.ಜಿ.ವಿಶ್ವನಾಥ್, ಆರ್‌ಡಿಪಿಆರ್ ಇಲಾಖೆ ಸಚಿವರಿಂದ ಅನುಮೋದಿತ ಕಾಮಗಾರಿಯನ್ನು ಹೊನ್ನಾಳಿ ಶಾಸಕರು ಮಾರ್ಪಡಿಸಿ ಹಸ್ತಕ್ಷೇಪ ಮಾಡಿದ್ದಾರೆಂದು ಆಕ್ಷೇಪಿಸಿದರು.
    ಒಳಾಂಗಣ ಕ್ರೀಡಾಂಗಣ ಸೇರಿ 4 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಿಸಿ ತಂದಿದ್ದರೂ ಶಾಸಕರು ತಡೆದಿದ್ದಾರೆ. ಚೀಲೂರಿನಿಂದ ಕುಂಕುವ ಗ್ರಾಮದವರೆಗೆ 6 ಕೆರೆಗಳ ಏತ ನೀರಾವರಿ ಯೋಜನೆಗೂ ಅಡ್ಡಿಪಡಿಸಿದ್ದಾರೆ. ಸಾಮಾಜಿಕ ನ್ಯಾಯ ಮರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರು ಮಾತುಗಳಿಗೆ ವಾಗೀಶಸ್ವಾಮಿ, ಎಂ.ಆರ್.ಮಹೇಶ್, ಮಂಜುಳಾ ಟಿ.ವಿ.ರಾಜು ಆಕ್ಷೇಪಿಸಿದರು. ಕೆಲವು ಕಾಮಗಾರಿಗಳು ರಾಜ್ಯ ಮಟ್ಟದಲ್ಲೇ ಬದಲಾವಣೆ ಆಗಿದ್ದಾಗಿ ಜಿಪಂ ಸಿಇಒ ಪದ್ಮಾ ಬಸವಂತಪ್ಪ ಸಭೆಗೆ ತಿಳಿಸಿದರು. ‘ಹಾಗಾದರೆ ಸಚಿವರ ಆದೇಶ ಹಾಗೂ ಜಿಪಂ ಸದಸ್ಯರಿಗೆ ಕಿಮ್ಮತ್ತಿಲ್ಲವೇ?’ ಸದಸ್ಯ ಜಿ.ಸಿ.ನಿಂಗಪ್ಪ, ಕೆ.ಎಚ್.ಓಬಳಪ್ಪ ಪ್ರಶ್ನಿಸಿದರು. ಶಾಸಕರು, ಜಿಪಂ ಸದಸ್ಯರು ಜನರಿಂದಲೇ ಆಯ್ಕೆಯಾದವರು. ಅಭಿವೃದ್ಧಿ ವಿಚಾರದಲ್ಲಿ ಯಾರೂ ಪೇಟೆಂಟ್ ಪಡೆದಿಲ್ಲ ಎಂದು ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.
    ಜಿಲ್ಲೆಯಲ್ಲಿ 40 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಪೈಕಿ 35,500 ಕ್ವಿಂ. ದಾಸ್ತಾನಿದೆ. 39 ಸಾವಿರ ಟನ್ ರಸಗೊಬ್ಬರ ನಿರೀಕ್ಷೆ ಪೈಕಿ 33,780 ಟನ್ ಲಭ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳಿದರು.
    15ನೇ ಹಣಕಾಸು ಆಯೋಗದ ಅನುದಾನದಲ್ಲಿ ಸರ್ಕಾರ, ಜಲಜೀವನ್ ಮಿಷನ್ ಯೋಜನೆ ತಂದಿದ್ದು, ಗ್ರಾಮಗಳ ಪ್ರತಿ ಮನೆಗೂ ನಳಗಳಿಗೆ ಮೀಟರ್ ಅಳವಡಿಸುವ ಉದ್ದೇಶವಿದೆ ಎಂದು ಸಿಇಒ ತಿಳಿಸಿದರು.
    ಜಗಳೂರು ತಾಲೂಕಿನ ಅಂಗನವಾಡಿಗಳಲ್ಲಿ ಆಹಾರಧಾನ್ಯ ವಿತರಣೆಯಾಗಿಲ್ಲ. ಕೆಲವೆಡೆ ಐದು ತಿಂಗಳವರೆಗೆ ಆಹಾರಧಾನ್ಯ ಉಳಿಕೆಯಾಗಿದೆ ಎಂದು ಸದಸ್ಯರಾದ ಜೆ.ಸವಿತಾ, ಲೋಕೇಶ್ವರ ಹೇಳಿದರು.
    ತಿಂಗಳ ಬೇಡಿಕೆ ಅನುಸಾರ ಆಹಾರಧಾನ್ಯ ಬಿಡುಗಡೆಯಾಗಲಿದೆ. ಸಹಾಯಕಿಯರು ವಿತರಿಸದಿದ್ದರೆ ಲೋಪವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ಕೆ.ಎಚ್.ವಿಜಯಕುಮಾರ್ ಹೇಳಿದರು. ಜಿಲ್ಲೆಯಲ್ಲಿನ ಅಲೆಮಾರಿಗಳ ಬಗ್ಗೆ ಅವಲೋಕಿಸಿ ಆಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದೂ ಉತ್ತರಿಸಿದರು. ಸದಸ್ಯೆ ಶೈಲಜಾ ಬಸವರಾಜ್‌ರ ಹೇಳಿಕೆಗೆ ಉತ್ತರಿಸಿ, ಭಾಗ್ಯಲಕ್ಷ್ಮಿ ಬಾಂಡ್‌ನಲ್ಲಿ ಹೆಸರು ವ್ಯತ್ಯಾಸವಾಗಿದ್ದಲ್ಲಿ ತಿದ್ದುಪಡಿಯಾದ ಹೊಸ ಬಾಂಡ್ ಬರಲಿದೆ ಎಂದು ತಿಳಿಸಿದರು. ಶಾಸಕರಾದ ಎಸ್.ರಾಮಪ್ಪ, ಎಸ್.ಎ.ರವೀಂದ್ರನಾಥ್ ಸಭೆಯಲ್ಲಿದ್ದರು.

    ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ರೈತರ ಉತ್ಪನ್ನ ಖರೀದಿಸಲು ಸರ್ಕಾರದ ಮಾನದಂಡಗಳ ನಿರ್ವಹಣೆ ಕಷ್ಟವಾಗಿದ್ದು ಅವನ್ನು ಬದಲಾಯಿಸಲು ಸರ್ಕಾರಕ್ಕೆ ಜಿಪಂನಿಂದ ಪ್ರಸ್ತಾವನೆ ಸಲ್ಲಿಸಬೇಕೆಂದು ತೇಜಸ್ವಿ ಪಟೇಲ್, ಓಬಳಪ್ಪ, ನಿಂಗಪ್ಪ, ಸಿ.ಸುರೇಂದ್ರನಾಯ್ಕ, ವಾಗೀಶಸ್ವಾಮಿ ಆಗ್ರಹಿಸಿದರು.

    ಗ್ರಾಪಂ ಸದಸ್ಯರ ಅವಧಿ ವಿಸ್ತರಿಸಿ: ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದ್ದು ಇದೀಗ ಚುನಾವಣೆ ನಡೆಸಲು ಕ್ಲಿಷ್ಠ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಪಂ ಹಾಲಿ ಸದಸ್ಯರನ್ನು 6 ತಿಂಗಳವರೆಗೆ ಮುಂದುವರಿಸಬೇಕು. ಇಲ್ಲವೇ ಆಡಳಿತಾಧಿಕಾರಿಯನ್ನಾದರೂ ನೇಮಿಸಬೇಕೆಂದು ಸದಸ್ಯರಾದ ಓಬಳಪ್ಪ, ಡಿ.ಜಿ.ವಿಶ್ವನಾಥ, ಬಸವಂತಪ್ಪ ಆಗ್ರಹಿಸಿದರು.

    ಸೋಂಕು ನಿಯಂತ್ರಣದಲ್ಲಿದೆ: ಜಿಲ್ಲೆಯಲ್ಲಿ 142 ಕರೊನಾ ಪ್ರಕರಣ ವರದಿಯಾಗಿದು,್ದ 66 ಜನ ಬಿಡುಗಡೆಯಾಗಿದ್ದಾರೆ. ಜಾಲಿನಗರ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಸೋಂಕು ನಿಯಂತ್ರಣವಾಗುತ್ತಿದೆ. ತೀವ್ರ ಉಸಿರಾಟದ ತೊಂದರೆಯುಳ್ಳ ಪ್ರಕರಣಗಳಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಇಂಥ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಬೇಕಿದೆ ಎಂದರು.

    ಜಿಲ್ಲಾ ಚಿಗಟೇರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ನಾಗರಾಜ್ ಮಾತನಾಡಿ, ನಿಗದಿತ ಕೋವಿಡ್ ಆಸ್ಪತ್ರೆಯಾದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಬೇರೆ ವಿಭಾಗಗಳಿಗೆ ಸಂಪರ್ಕ ಬಾರದಂತೆ ಬ್ಯಾರಿಕೇಡ್ ಅಳವಡಿಸಿ ಹೆರಿಗೆ ವಿಭಾಗ, ಎಸ್‌ಎನ್‌ಸಿಯು, ಒಪಿಡಿ ವಿಭಾಗವನ್ನು ಮರು ಆರಂಭ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts