More

    ದಾವಣಗೆರೆ ಕ್ಷೇತ್ರದಲ್ಲಿ ಶೇ.81.58 ಠೇವಣಿ ನಷ್ಟ  ಡಜನ್ ಚುನಾವಣೇಲಿ 124 ಮಂದಿಯ ಡಿಪಾಸಿಟ್ ಮಾಯ

    ಡಿ.ಎಂ.ಮಹೇಶ್, ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ 12 ಚುನಾವಣೆ ನಡೆದಿವೆ. ಪ್ರಮುಖ ಪಕ್ಷಗಳ ಬಲಾಬಲದ ನಡುವೆ ಸಣ್ಣ ಪಕ್ಷಗಳ  ಅಭ್ಯರ್ಥಿಗಳು, ಪಕ್ಷೇತರರು ಸೆಡ್ಡು ಹೊಡೆದದ್ದು ಗಮನಾರ್ಹ.
    2009ರ ಚುನಾವಣೆಯಲ್ಲಿ 28, 2019ರಲ್ಲಿ 25, 1996ರಲ್ಲಿ 24 ಹುರಿಯಾಳುಗಳು ಸ್ಪರ್ಧೆ ನಡೆಸಿದ್ದರೆ ಇದರಲ್ಲಿ ಪಕ್ಷೇತರರ ಸಂಖ್ಯೆಯೇ ಅಧಿಕ. ಪೀಕಿಬಾಯಿ ಎಂಬುವರು ಸ್ವತಂತ್ರವಾಗಿ ಎರಡು ಬಾರಿ ಕಣಕ್ಕಿಳಿದಿದ್ದು ಮಹಿಳೆಯರು ಅಖಾಡಕ್ಕಿಳಿದಿರಲಿಲ್ಲ.
    ಇದುವರೆಗೆ 152 ಅಭ್ಯರ್ಥಿ (ಕೆಲವರು ಗರಿಷ್ಠ ನಾಲ್ಕರಿಂದ ಐದನೇ ಬಾರಿಗೂ ಸ್ಪರ್ಧಿಸಿದ್ದಾರೆ) ಕಣದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇದರಲ್ಲಿ 124 ಹುರಿಯಾಳು ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿಶತ 81.58 ಮಂದಿ ಠೇವಣಿ ನಷ್ಟಕ್ಕೆ ಒಳಗಾದವರು.
    ಮಾಜಿ ಶಾಸಕರಾದ ಮಹಿಮ ಪಟೇಲ್, ಕೆ.ಮಲ್ಲಪ್ಪ, ಪಂಪಾಪತಿ, ಹಿರಿಯ ವಾಗ್ಮಿ ಪ್ರೊ.ಎಸ್.ಎಚ್.ಪಟೇಲ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಮೊದಲಾದ ಪ್ರಮುಖರು ಪಕ್ಷಗಳಡಿ ನಿಂತರೂ ಠೇವಣಿ ವಂಚಿತರಾಗಿದ್ದ ಇತಿಹಾಸವಿದೆ. ಉಳಿದಂತೆ  ಡಿಪಾಸಿಟ್ ಕಳೆದುಕೊಂಡವರಲ್ಲಿ ಪಕ್ಷೇತರರ ಸಂಖ್ಯೆಯೇ ಅಧಿಕ.
    ಚುನಾವಣೆವಾರು ವಿವರ:
    1977ರಲ್ಲಿ ಒಟ್ಟು 613519 ಮತದಾರರಿದ್ದು, 412243 ಮತ ಸಿಂಧುವಾಗಿದ್ದವು. ಕಾಂಗ್ರೆಸ್‌ನ ಕೊಂಡಜ್ಜಿ ಬಸಪ್ಪ (244200) ಆಯ್ಕೆಯಾಗಿದ್ದರೆ ಭಾರತೀಯ ಲೋಕದಳದ  ಕೆ.ಜಿ.ಮಹೇಶ್ವರಪ್ಪ 152078 ಮತ ಗಳಿಸಿದರು. ಸ್ಪರ್ಧಿಸಿದ್ದ ಮೂವರಲ್ಲಿ ಸಿಪಿಐನ ಘನಿಸಾಬ್ (15965) ಠೇವಣಿ ಕಳೆದುಕೊಂಡರು.  
    1980ರಲ್ಲಿ 737332 ಮತದಾರರ ಪೈಕಿ 429145 ಮತಗಳು ಅರ್ಹವಾದವು. ಆರು ಅಭ್ಯರ್ಥಿಗಳಿದ್ದರು. ಕಾಂಗ್ರೆಸ್‌ನ  ಟಿ.ವಿ.ಚಂದ್ರಶೇಖರಪ್ಪ (238506) ಜಯಶೀಲರಾಗಿದ್ದರು. ಜನತಾಪಕ್ಷದ ಕೊಂಡಜ್ಜಿ ಬಸಪ್ಪ (97510), ಅರಸು ಕಾಂಗ್ರೆಸ್‌ನ  ಡಾ.ಶಾಮನೂರು ಶಿವಶಂಕರಪ್ಪ (86167) ಮತ ಪಡೆದರು. ಸ್ವತಂತ್ರ ಅಭ್ಯರ್ಥಿಗಳಾದ ಕೆ.ಬೀರಯ್ಯ ನಾಯ್ಕ,  ಅಮೀರ್, ವೈ.ಎಂ. ಪರಮೇಶ್ವರಯ್ಯಗೆ ಠೇವಣಿ ನಷ್ಟ ತಟ್ಟಿತು.
    1984ರಲ್ಲಿ 790941 ಮತದಾರರ ಪೈಕಿ 536196 ಸಿಂಧು ಮತ ಚಲಾವಣೆಯಾಗಿದ್ದವು. 11 ಸ್ಫರ್ಧಿಗಳಿದ್ದರು. ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ (290003) ವಿಜಯಿಯಾದರೆ  ಜನತಾಪಕ್ಷದ ಕೆ.ಜಿ.ಮಹೇಶ್ವರಪ್ಪ 41.82ರಷ್ಟು ಮತ ಗಳಿಸಿದರು. ಆಗಷ್ಟೇ ಶಾಸಕರಾಗಿದ್ದ ಎಂ. ಪಂಪಾಪತಿ (7406) ಹಾಗೂ ಎನ್.ಎಚ್. ಮಲ್ಲಪ್ಪ, ಕೆಂಚವೀರಪ್ಪ, ಜಯಪ್ಪ ಅಳ್ಳೇರ, ಟಿ. ಬಸಪ್ಪ ಸೇರಿ 8ಮಂದಿ ಪಕ್ಷೇತರರ ಡಿಪಾಜಿಟ್ ಮರಳಲಿಲ್ಲ.
    1989ರಲ್ಲಿ 10,79,519 ಮತದಾರರ ಪೈಕಿ 707290 ಮತ ಸಿಂಧುವಾಗಿದ್ದವು. ಐವರು ಸ್ಫರ್ಧಿಸಿದ್ದರು. ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಗೆದ್ದರು. ಜನತಾದಳದ ಕೆ.ಜಿ.ಮಹೇಶ್ವರಪ್ಪ ಸೋತರು. ಜನತಾಪಕ್ಷದ ಎನ್. ಗಂಗಾಧರಯ್ಯ ಅವರಲ್ಲದೆ ಪಕ್ಷೇತರ ಸ್ಪರ್ಧಿಸಿದ್ದ ಎನ್.ಎಂ.ಚಂದ್ರಶೇಖರಸ್ವಾಮಿ, ಟಿ. ಷಣ್ಮುಖಪ್ಪ ಠೇವಣಿ ನಷ್ಟಕ್ಕೆ ಒಳಗಾದರು.  
    1991ರಲ್ಲಿ 10,92,655 ಮತದಾರರಿದ್ದರು. 596039 ಅಧಿಕೃತ ಮತ ಚಲಾವಣೆಯಾದವು. 14 ಮಂದಿ ಸ್ಫರ್ಧಿಸಿದ್ದರು. ಚನ್ನಯ್ಯ ಒಡೆಯರ್ ಶೇ.39.85 ಮತದಿಂದ ಚುನಾಯಿತರಾದರು. ಎಸ್.ಎ.ರವೀಂದ್ರನಾಥ್ ಶೇ.39.78 ಮತದೊಂದಿಗೆ ಪರಾಭವಗೊಂಡರು. ಡಿ.ಜಿ.ಬಸವನಗೌಡ 105260 ಮತ ಪಡೆದರು. ಪಕ್ಷೇತರರಾದ ಉಮ್ಮರ್‌ಖಾನ್ ಸಾಬ್, ಕರಿಬಸಪ್ಪ, ವಜೀರ್‌ಸಾಬ್, ಬಿ.ಜಿ.ಸುರೇಶ್, ಪೀಕಿಬಾಯಿ, ಕೆ. ದಾಸಪ್ಪ ಸೇರಿ 11 ಮಂದಿ ಠೇವಣಿಗೆ ಕತ್ತರಿಬಿತ್ತು.
    1996ರಲ್ಲಿ 1143500 ಮತದಾರರಿದ್ದರು. 730659 ಮತ ಸಿಂಧುವಾಗಿದ್ದವು. ಆಗ 24 ಮಂದಿ ಕಣದಲ್ಲಿದ್ದರು. ಜಿ.ಮಲ್ಲಿಕಾರ್ಜುನಪ್ಪ ಶೇ.36.81 ಮತ ಗಳಿಸಿ ಆಯ್ಕೆಯಾದರು. ಜನತಾದಳದ ಪ್ರೊ.ಎಸ್.ಎಚ್.ಪಟೇಲ್, ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಠೇವಣಿ ಉಳಿಸಿಕೊಂಡರು. ಎಂ. ಬಸಪ್ಪ (ಕರ್ನಾಟಕ ಕಾಂಗ್ರೆಸ್ ಪಕ್ಷ),  ಸ್ವತಂತ್ರ ಅಭ್ಯರ್ಥಿಗಳಾದ ಎಂ. ಚಂದ್ರಶೇಖರಪ್ಪ, ಬಿ. ಗುರುಲಿಂಗಪ್ಪ, ಎಂ.ಡಿ.ನೂರಲ್ಲಾ ಷರೀಫ್, ಎಸ್.ಕೆ. ಷರೀಫ್ ಬಾಗರ್, ಎಂ. ಮಹಾಂತೇಶ ರಾವ್, ಸುಭಾನ್‌ಖಾನ್, ನ್ಯಾಮತಿಯ ಎಚ್.ಎಸ್.ಪರಮೇಶ್ವರಪ್ಪ ಸೇರಿ 20 ಮಂದಿ ಠೇವಣಿ ಕಳೆದುಕೊಂಡರು.
    1998ರಲ್ಲಿ 1181787 ಮತದಾರರಿದ್ದು, 814241 ಮತ ಸಿಂಧುವಾದವು. 8 ಹುರಿಯಾಳಿದ್ದರು. ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಶೇ.42.21 ಮತದಿಂದ ಚುನಾಯಿತರಾದರು. ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಸೋತರು. ಜನತಾದಳದ ಪ್ರೊ.ಎಸ್.ಎಚ್.ಪಟೇಲ್ 99334, ಕರ್ನಾಟಕ ವಿಕಾಸ ಪಕ್ಷದ ಎಸ್. ನಿಂಗಪ್ಪ 32731, ಪಕ್ಷೇತರರಾದ ಯೋಗೀಶರಾವ್ ಶಿಂಧೆ, ಶ್ರೀನಿವಾಸ, ಬೋಪಾಲನಾಯ್ಕ, ಎಸ್. ಶೇಖರಪ್ಪ ಠೇವಣಿ ವಂಚಿತರಾದರು.
    1999ರಲ್ಲಿ 1217506 ಮತದಾರರಿದ್ದು, 850078 ಮತ ಸಿಂಧುವಾದವು. ಬಿಜೆಪಿಯ ಜಿಎಂಎಸ್ ಶೇ.46.93 ಮತ ಪಡೆದು ಆಯ್ಕೆಯಾದರು. ಶೇ.45.02 ಮತದೊಂದಿಗೆ ಕಾಂಗ್ರೆಸ್‌ನ ಎಸ್ಸೆಸ್ ಪರಾಭವಗೊಂಡರು. ಜೆಡಿಎಸ್‌ನ ಕೆ. ಮಲ್ಲಪ್ಪ (64705),  ಎಡಿಎಂಕೆಯ ಬಸವರಾಜ್ ಡಿಪಾಸಿಟ್ ಮರೆಯಬೇಕಾಯಿತು.
    2004ರಲ್ಲಿ 13,32608 ಮತದಾರರಿದ್ದು, 908840 ಮತ ಸಿಂಧುವಾಗಿದ್ದವು. ಆರು ಅಭ್ಯರ್ಥಿಗಳಿದ್ದರು. ಬಿಜೆಪಿ ಅಭ್ಯರ್ಥಿ (40.8ರಷ್ಟು ಮತ) ಆಯ್ಕೆಯಾದರು. ಕಾಂಗ್ರೆಸ್‌ನ ಎಸ್‌ಎಸ್ ಮಲ್ಲಿಕಾರ್ಜುನ ಶೇ.37.2ರಷ್ಟು ಮತದೊಂದಿಗೆ ಸೋತರು. ಚನ್ನಯ್ಯ ಒಡೆಯರ್ ಶೇ.17.4 ಮತ ಗಳಿಸಿದರು. ಪಕ್ಷೇತರರಾದ ಡಾ. ಶ್ರೀಧರ ಉಡುಪ, ಆರ್. ಮಾದಪ್ಪ, ಟಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಠೇವಣಿ ಕಳೆದುಕೊಂಡರು.
    2009ರಲ್ಲಿ 1344920 ಮತದಾರರಿದ್ದರು. 907277 ಮತ ಸಿಂಧುವಾಗಿದ್ದವು. 28 ಮಂದಿ ಕಣದಲ್ಲಿದ್ದುದು ಇತಿಹಾಸ ಸೃಷ್ಟಿಸಿತು. ಬಿಜೆಪಿ (ಶೇ.31.48) ಗೆಲುವಾಯಿತು. ಕಾಂಗ್ರೆಸ್‌ನ ಎಸ್‌ಎಸ್‌ಎಂ ಶೇ.31.3 ಮತ ಪಡೆದರು. ಜೆಡಿಎಸ್‌ನ ಕೆ.ಬಿ. ಕಲ್ಲೇರುದ್ರೇಶಪ್ಪ, ಪಕ್ಷೇತರರಾದ ಎಲ್.ಎಸ್.ಮಲ್ಲಿಕಾರ್ಜುನ, ಡಾ. ಹಿದಾಯುತ್ ಉಲ್ಲಾ ಖಾನ್, ಎಚ್. ಮಾರುತಿ, ಎಂ. ನಾಗರಾಜಪ್ಪ, ಯೋಗೇಶರಾವ್ ಶಿಂಧೆ, ಜಯಣ್ಣ ಇಟಗಿ, ಬಿ. ಜ್ಞಾನಪ್ರಕಾಶ್ ಸೇರಿ 26 ಮಂದಿ ಠೇವಣಿ ಮರೆತರು.
    2014ರಲ್ಲಿ 1522712 ಮತದಾರರಿದ್ದು, 1114868 ಸಿಂಧು ಮತ ಚಲಾವಣೆಯಾಗಿದ್ದವು. 18 ಸ್ಪರ್ಧಿಗಳಿದ್ದರು. ಇಲ್ಲಿ ಬಿಜೆಪಿ (ಶೇ.34.08)  ವಿಜಯಿಯಾಯಿತು. ಕಾಂಗ್ರೆಸ್‌ನ ಎಸ್ಸೆಸ್ಸೆಂ ಪರಾಭವಗೊಂಡರು. ಜೆಡಿಎಸ್‌ನ ಮಹಿಮ ಪಟೇಲ್ (46911), ಸಿಪಿಐನ ಎಚ್. ಕೆ. ರಾಮಚಂದ್ರಪ್ಪ (8064), ಬಿಎಸ್ಪಿಯ ಎ.ಕೆ.ಪರಶುರಾಂ, ಪಕ್ಷೇತರರಾದ ಬಿ. ಜ್ಞಾನಪ್ರಕಾಶ್, ಎಚ್.ಕೆ.ರೇವಣಸಿದ್ದಪ್ಪ ಸೇರಿ 16 ಮಂದಿ ಠೇವಣಿ ಕಳೆದುಕೊಂಡರು.
    2019ರಲ್ಲಿ 1633064 ಮತದಾರರರಿದ್ದು 1194586 ಮತ ಸಿಂಧುವಾಗಿದ್ದವು. 25 ಮಂದಿ ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಶೇ.54.63 ಮತಗಳಿಂದ ಪುನರಾಯ್ಕೆಯಾದರು. ಕಾಂಗ್ರೆಸ್‌ನ ಎಚ್.ಬಿ.ಮಂಜಪ್ಪ ಶೇ.40.44ರಷ್ಟು ಮತದೊಂದಿಗೆ ಸೋಲುಂಡರು. ಬಿಎಸ್ಪಿ ಪಕ್ಷದ ಸಿದ್ದಪ್ಪ, ಪ್ರಜಾಕೀಯದ ಎ.ಬಿ. ಗಣೇಶ್, ಎಚ್. ಈಶ್ವರಪ್ಪ ಸೇರಿ 23 ಮಂದಿ ಠೇವಣಿ ನಷ್ಟಕ್ಕೀಡಾದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts