More

    ಜಿಲ್ಲಾಸ್ಪತ್ರೆಗೆ ಅನಾರೋಗ್ಯ ಭೀತಿ !

    ದಾವಣಗೆರೆ: ಸೇವೆ ಕಾಯಂಗೆ ಒಂದೆಡೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಒಳಗುತ್ತಿಗೆ ಆಧಾರದಡಿ ನಿಯೋಜಿತ ಶುಶ್ರೂಷಕರು ಬೆಂಗಳೂರಲ್ಲಿ ಧರಣಿ ಕೂತಿದ್ದಾರೆ. ಇನ್ನೊಂದೆಡೆ ಹೊರಗುತ್ತಿಗೆ ನಾನ್‌ಕ್ಲಿನಿಕಲ್, ಡಿ ದರ್ಜೆ ನೌಕರರು ಧರಣಿ ಆರಂಭಿಸಿದ್ದು, ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಆರೋಗ್ಯ ಸೇವೆ ಜತೆಗೆ ಸ್ವಚ್ಛತೆಗೂ ದೊಡ್ಡ ಹೊಡೆತ ಬಿದ್ದಿದೆ.

    ಎನ್‌ಎಚ್‌ಎಂನಡಿ 71 ಶುಶ್ರೂಷಕರ ಪೈಕಿ ನಾಲ್ವರು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದವರು ಬೆಂಗಳೂರಿನ ಧರಣಿಯಲ್ಲಿ ಭಾಗವಹಿಸಿದ್ದಾರೆ. ಈ ಪ್ರತಿಭಟನೆ ಇಂದಿಗೆ (ಬುಧವಾರ) ಒಂದು ತಿಂಗಳು ಪೂರೈಸುತ್ತಿದೆ. ಇದರಿಂದಾಗಿ 930 ಹಾಸಿಗೆ ಸಾಮರ್ಥ್ಯದ ಈ ದೊಡ್ಡಾಸ್ಪತ್ರೆಯ ಆರೋಗ್ಯ ಸೇವೆಗೆ ಗರ ಬಡಿದಂತಾಗಿದೆ.

    ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶುಶ್ರೂಷಕರ ಕೊರತೆಯಾಗಿದೆ. 40-50 ನವಜಾತ ಶಿಶುಗಳನ್ನು ಇರಿಸುತ್ತಿದ್ದ ಜಾಗದಲ್ಲಿ ಈಗ ಕೆಲವೇ ಮಕ್ಕಳಿಗೆ ಅವಕಾಶ ನೀಡಲಾಗುತ್ತಿದೆ. ಕೆಲವು ಶಿಶುಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರೆಫೆರಲ್ ಬರೆದುಕೊಡಲಾಗುತ್ತಿದೆ. ಹಾಲಿ ಇರುವ ಶುಶ್ರೂಷಕರಿಗೆ ಹೆಚ್ಚುವರಿ ಕೆಲಸದ ಭಾರ ಮುಂದುವರಿದಿದೆ.

    ಹೆರಿಗೆ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗದಲ್ಲೂ ಇರುವ ಸಿಬ್ಬಂದಿಗೆ ಹೆಚ್ಚಿನ ಹೊರೆ ನೀಡಿದೆ. ಎನ್‌ಎಚ್‌ಎಂನಡಿ ಇಬ್ಬರು ಗರ್ಭಿಣಿ ಶುಶ್ರೂಷಕಿಯರಿಗೆ ರಕ್ತನಿಧಿ ಕೇಂದ್ರದಲ್ಲಿ ಸೇವೆಗೆ ಅವಕಾಶ ಕಲ್ಪಿಸಿದ್ದರಿಂದ ಸದ್ಯಕ್ಕೇನೂ ತೊಂದರೆಯಾಗಿಲ್ಲ. ಅಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ರಕ್ತದೊತ್ತಡ, ಮಧುಮೇಹ ರೋಗ ತಪಾಸಣೆಗೆ ನರ್ಸಿಂಗ್ ವಿದ್ಯಾರ್ಥಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ ರೋಗಿಗಳ ಸಂಬಂಧಿಕರು ಎಬಿಎಆರ್‌ಕೆ ಯೋಜನೆಯಡಿ ರೆಫೆರಲ್ ಪತ್ರಕ್ಕಾಗಿ ಓಡಾಡುವವರ ಸಂಖ್ಯೆ ಹೆಚ್ಚಿದೆ.

    12 ಹಾಸಿಗೆ ಸಾಮರ್ಥ್ಯವುಳ್ಳ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರದಲ್ಲಿಯೂ ಕಳೆದ 25 ದಿನದಿಂದ ಒಳರೋಗಿ(ಅಪೌಷ್ಟಿಕ ಮಗು)ಗಳನ್ನು ದಾಖಲು ಮಾಡಲಾಗುತ್ತಿಲ್ಲ. ಅಲ್ಲಿರುವ ನಾಲ್ವರು ಶುಶ್ರೂಷಕರೂ ಎನ್‌ಎಚ್‌ಎಂ ಧರಣಿಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಈ ಕೇಂದ್ರದಲ್ಲಿ ಬರುವ ಅಪೌಷ್ಟಿಕ ಮಕ್ಕಳ ವಿಳಾಸ, ಮೊಬೈಲ್ ನಂಬರ್ ಪಡೆದು ದಾಖಲಿಸುವ ಕೆಲಸವಷ್ಟೆ ನಡೆಯುತ್ತಿದೆ.

    400 ಹಾಸಿಗೆ ಸಾಮರ್ಥ್ಯವಿದ್ದ ಅವಧಿಯಲ್ಲಿ ಮಂಜೂರಾದ ಶಾಶ್ವತ ಸಿಬ್ಬಂದಿ ಪ್ಯಾಟರ್ನ್, 930 ಹಾಸಿಗೆ ಸಾಮರ್ಥ್ಯಕ್ಕೆ ತಕ್ಕಂತೆ ವಿಸ್ತರಣೆಯಾಗಿಲ್ಲ. ಅಲ್ಲಿಯೂ ಕೆಲವು ಹುದ್ದೆ ಖಾಲಿ ಇವೆ. ಒಟ್ಟು 105 ಮಂಜೂರಾದ ಶುಶ್ರೂಷಕರ ಹುದ್ದೆಗಳಲ್ಲಿ 7 ಖಾಲಿ ಉಳಿದಿವೆ. ರಜೆ, ವ್ಯಾಸಂಗ ಇತರೆ ಉದ್ದೇಶದಡಿ ಹೊರಗಿದ್ದಾರೆ. ಸದ್ಯಕ್ಕೆ 83 ಶುಶ್ರೂಷಕರಿಂದಲೇ ಹಗಲು-ರಾತ್ರಿ ಪಾಳಿಯ ಕೆಲಸ ಪಡೆಯಲಾಗುತ್ತಿದೆ.

    ನರ್ಸಿಂಗ್ ಎರಡನೇ ಗ್ರೇಡ್ ಹುದ್ದೆಗೆ ಮಂಜೂರಾದ 9 ಹುದ್ದೆಗಳ ಪೈಕಿ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜೂರಾದ ಹಿರಿಯ ಶುಶ್ರೂಷಕರ 30 ಹುದ್ದೆಗಳಲ್ಲಿ 18 ಮಂದಿ ಕಾರ್ಯ ನಿರ್ವಹಿಸುತ್ತಿದ್ದು 12 ಖಾಲಿ ಇವೆ.

    ನೈರ್ಮಲ್ಯತೆಗೆ ಸಾಲದ ಸಿಬ್ಬಂದಿ: ಹೊರಗುತ್ತಿಗೆಯಡಿ 195 ಡಿ ದರ್ಜೆ ನೌಕರರು ಹಾಗೂ 45 ಬದಲಿ ಕೆಲಸಗಾರರು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಅವರೂ ಮಂಗಳವಾರದಿಂದ ಕಾಯಮಾತಿ, ರಿಸ್ಕ್ ಅಲೋವೆನ್ಸ್‌ಗಾಗಿ ಧರಣಿ ನಡೆಸುತ್ತಿದ್ದಾರೆ. ಚಿಗಟೇರಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಇರುವ 28 ಮಂದಿ ಶಾಶ್ವತ ಸಿಬ್ಬಂದಿ ಕೆಲಸ ಮಾಡಬೇಕಿದೆ. ಆದರೆ, ಅದು ಅಷ್ಟು ಸುಲಭವೂ ಇಲ್ಲ. ಇಷ್ಟು ದೊಡ್ಡಾಸ್ಪತ್ರೆಯಲ್ಲಿ ಬುಧವಾರದಿಂದ ಸ್ವಚ್ಛತೆ ಸಮಸ್ಯೆ ಕಾಡಲಿದೆ. ಇದರಿಂದ ಕೆಲ ವಿಭಾಗಗಳೂ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ. ಆಪರೇಷನ್ ಥಿಯೇಟರ್‌ಗಳಲ್ಲಿ ಸದ್ಯಕ್ಕೆ ಶಸ್ತ್ರಚಿಕಿತ್ಸೆ ಮುಂದೂಡಲಾಗುತ್ತಿದೆ. ಸ್ವಚ್ಛತೆ ಸಮಸ್ಯೆ ಕಾಡಿದರೆ ಶಸ್ತ್ರಚಿಕಿತ್ಸಾ ವಿಭಾಗದ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಎನ್‌ಎಚ್‌ಎಂ ಸಿಬ್ಬಂದಿ ಮುಷ್ಕರ ಹಾಗೂ ಡಿ ದರ್ಜೆ ನೌಕರರ ಧರಣಿ ಎರಡರಿಂದಾಗಿ ಚಿಗಟೇರಿ ಆಸ್ಪತ್ರೆ ಸೇವೆ ಮೇಲೆ ಪರಿಣಾಮ ಬೀರಿದೆ. ಶುಶ್ರೂಷಕರ ಕೊರತೆಯಾಗಿದೆ. ಸ್ವಚ್ಛತೆ ಸಮಸ್ಯೆ ಕಾಡಬಹುದು.
    ಎಸ್. ಸುಭಾಶ್ಚಂದ್ರ, ಚಿಗಟೇರಿ ಆಸ್ಪತ್ರೆಯ ಪ್ರಭಾರ ಅಧೀಕ್ಷಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts