More

    ಅವೈಜ್ಞಾನಿಕ ರೈಲ್ವೆ ಕೆಳಸೇತುವೆ ಕಾಂಗ್ರೆಸ್ ಮಹಿಳಾ ಘಟಕದ ವಿನೂತನ ಪ್ರತಿಭಟನೆ

    ದಾವಣಗೆರೆ: ನಗರದ ಅಶೋಕ ಚಿತ್ರಮಂದಿರದ ಬಳಿ ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆ ನಿರ್ಮಾಣ  ವಿರೋಧಿಸಿಸ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಭಾನುವಾರ ವಿನೂತನ ಪ್ರತಿಭಟನೆ ನಡೆಸಲಾಯಿತು.
    ಅಶೋಕ ಟಾಕೀಸ್ ಎದುರು ಕ್ಷೇತ್ರದ ಸಂಸದರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತೆಯರು ಸ್ಟೌ ಮೇಲೆ ಜಿಲೇಬಿ ತಯಾರಿಸಿ ವಾಹನ ಸವಾರರಿಗೆ ವಿತರಿಸಿದರು.
    ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ರೈಲ್ವೆ ಕೆಳ ಸೇತುವೆ ಅತ್ಯಂತ ಅಪಾಯಕಾರಿಯಾಗಿದ್ದು, ವಾಹನ ಸವಾರರು ಸುತ್ತುಬಳಸಿ ವಾಹನ ಚಾಲನೆ ಮಾಡಬೇಕಾಗಿದೆ. ಇದರಿಂದ ಅನೇಕ ಅವಘಡ ಸಂಭವಿಸಿವೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಸಂಚಾರ ಕಷ್ಟ ಎಂದು ದೂರಿದರು.
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 20 ವರ್ಷ ಸಂಸದರಾಗಿದ್ದರೂ ಸಂಸತ್‌ನಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಅನುದಾನ ತಂದಿಲ್ಲ. ವಿಮಾನ ನಿಲ್ದಾಣವೂ ಇಲ್ಲ. ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಶೂನ್ಯ. ಸುಗಮ ವಾಹನ ಚಾಲನೆ ಮಾಡಿಕೊಂಡು ಬಂದವರಿಗೆ ಜಿಲೇಬಿ ನೀಡಲಾಗುತ್ತಿದೆ ಎಂದರು.
    ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ದಾವಣಗೆರೆ ಉತ್ತರ ಹಾಗೂ ದಕ್ಷಿಣ ಸಂಪರ್ಕಿಸುವ ಕೆಳಸೇತುವೆ ಮಾರ್ಗದಲ್ಲಿ ವಾಹನ ಸವಾರರು ಉಸಿರು ಬಿಗಿಹಿಡಿದುಕೊಂಡು ಸಂಚರಿಸುವಂತಾಗಿದೆ. ಹಳೇ ಬಸ್ ನಿಲ್ದಾಣವಂತೂ ಆಟೋ ಸ್ಟಾೃಂಡ್ ಎಂಬಂತಾಗಿದೆ. ಸಂಸದರು ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿರ್ಮಿಸಿರುವ ಗುಣಮಟ್ಟದ ರಸ್ತೆಗಳು ಮಾದರಿಯಾಗಿವೆ. ಕಾಂಗ್ರೆಸ್ ಅವಧಿಯಲ್ಲಿ ನಿರ್ಮಾಣಗೊಂಡ ಎರಡು ಕೆರೆಗಳಿಂದ ನಗರದ ಜನತೆಗೆ ಕುಡಿಯುವ ನೀರು ಲಭಿಸುತ್ತಿದೆ. ಎಸ್.ಎಸ್.ಕೇರ್ ಟ್ರಸ್ಟ್‌ನಿಂದಲೂ ಉಚಿತ ನೀರು ಪೂರೈಕೆ ಮಾಡಲಾಗುತ್ತಿದೆ. ಸಂಸದರು ಬರ ನಿಭಾಯಿಸಲು ಏನು ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದರು.
    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಸಂಸದರು ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಭ್ರಷ್ಟಾಚಾರ ನಡೆಸಿರುವುದನ್ನು ವಿರೋಧಿಸಿ ನಗರದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
    ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್‌ಸಾಬ್, ಮಹಿಳಾ ಕಾಂಗ್ರೆಸ್‌ನ ಕವಿತಾ ಚಂದ್ರಶೇಖರ್, ದಾಕ್ಷಾಯಣಮ್ಮ, ಶುಭಮಂಗಳಾ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts