More

    ಕುಂಟುತ್ತ ಸಾಗಿದ ರೇಬಿಸ್ ಲಸಿಕೆ ಕಾರ್ಯಕ್ರಮ; ದಾವಣಗೆರೆ ಜಿಲ್ಲೆಯಲ್ಲಿವೆ 12,091 ನಾಯಿಗಳು 2 ತಿಂಗಳಲ್ಲಿ ಬರೀ 640 ನಾಯಿ-ಬೆಕ್ಕುಗಳಿಗೆ ಮದ್ದು

    ದಾವಣಗೆರೆ: ರೇಬಿಸ್ ಮುಕ್ತ ಭಾರತದ ಕನಸಿನೊಂದಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಮ್ಮಿಕೊಂಡಿರುವ ರೇಬಿಸ್ ಲಸಿಕೆ ಕಾರ್ಯಕ್ರಮ ಕುಂಟುತ್ತ ಸಾಗಿದೆ.

     

    ಕುಂಟುತ್ತ ಸಾಗಿದ ರೇಬಿಸ್ ಲಸಿಕೆ ಕಾರ್ಯಕ್ರಮ; ದಾವಣಗೆರೆ ಜಿಲ್ಲೆಯಲ್ಲಿವೆ 12,091 ನಾಯಿಗಳು 2 ತಿಂಗಳಲ್ಲಿ ಬರೀ 640 ನಾಯಿ-ಬೆಕ್ಕುಗಳಿಗೆ ಮದ್ದುಕೇಂದ್ರ ಸರ್ಕಾರದ ಆಸ್‌ಕ್ಯಾಡ್ ಯೋಜನೆಯಡಿ ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕುವ ಗುರಿಯನ್ನು ಇಲಾಖೆಗೆ ನೀಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ಕೇವಲ 640 ನಾಯಿ ಮತ್ತು ಬೆಕ್ಕುಗಳಿಗೆ ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನೂ 340 ಡೋಸ್‌ಗಳಷ್ಟು ಲಸಿಕೆ ಬಳಕೆ ಆಗಬೇಕಿದೆ.

    ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ 12,091 ನಾಯಿಗಳಿವೆ. ಸಾಕು ನಾಯಿಗಳನ್ನು ಅವುಗಳ ಮಾಲೀಕರು ಕರೆದುಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ದಾವಣಗೆರೆ ಪಿಬಿ ರಸ್ತೆಯ ಅರುಣ ಚಿತ್ರಮಂದಿರದ ಎದುರಿನ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ.

    ಪ್ರತಿ ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ, 2 ರಿಂದ 4 ಗಂಟೆವರೆಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಮುಂದೆ ಬರುತ್ತಿಲ್ಲ. ಇದರಿಂದ ಈ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.

    ತಿಂಗಳಿಡೀ ಉಚಿತವಾಗಿ ಲಸಿಕೆ ಹಾಕುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದರೂ ಬೆರಳೆಣಿಕೆಯಷ್ಟು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಉಳಿದಿರುವ ಲಸಿಕೆಯನ್ನು ಖಾಲಿ ಮಾಡಿದರೆ ಸಾಕು ಎನ್ನುವ ಸ್ಥಿತಿಗೆ ತಲುಪಿದ್ದಾರೆ.

    ಜಿಲ್ಲೆಯಲ್ಲಿ 150 ಪಶು ವೈದ್ಯಕೀಯ ಸಂಸ್ಥೆಗಳಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಆ ಸಂಸ್ಥೆಗಳಿಗೆ ಲಸಿಕೆ ಪೂರೈಸುವ ಮೂಲಕ ಹೆಚ್ಚು ಸಂಖ್ಯೆಯ ಜಾನುವಾರುಗಳಿಗೆ ತಲುಪುವ ಉದ್ದೇಶವಿದೆ ಎಂದು ಇಲಾಖೆ ಉಪ ನಿರ್ದೇಶಕ ಡಾ.ಚಂದ್ರಶೇಖರ ಸುಂಕದ್ ತಿಳಿಸಿದರು.

    ಮನೆಗಳಲ್ಲಿ ನಾಯಿ, ಬೆಕ್ಕುಗಳನ್ನು ಸಾಕಿದವರು ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕಾಗುತ್ತದೆ. ಆದರೆ ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ. ಕೆಲವರು ಖಾಸಗಿಯಾಗಿ ಲಸಿಕೆ ಹಾಕಿಸುತ್ತಾರೆ. ಹೀಗಾಗಿ ಇಲಾಖೆಗೆ ಬರುವವರ ಸಂಖ್ಯೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

    ಇನ್ನು ಬೀದಿ ನಾಯಿಗಳಿಗೆ ಲಸಿಕೆ ಹಾಕಿಸುವುದು ಸುಲಭದ ಕೆಲಸವಲ್ಲ. ಅವುಗಳ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ರೇಬಿಸ್ ಸಂಪೂರ್ಣ ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ ಎನ್ನುತ್ತವೆ ಮೂಲಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts