More

    ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

    ದಾವಣಗೆರೆ : ವೈಕುಂಠ ಏಕಾದಶಿ ಅಂಗವಾಗಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
    ಭಕ್ತರು ಬೆಳಗಿನ ಜಾವ 6 ಗಂಟೆಯಿಂದಲೇ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವುದು ಕಂಡುಬಂದಿತು. ರಾತ್ರಿ 9.30ರ ವರೆಗೂ ಅಖಂಡ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ತೀರ್ಥ, ಪ್ರಸಾದ ವಿತರಿಸಲಾಯಿತು.
    ನಗರದ ಎಂಸಿಸಿ ‘ಎ’ ಬ್ಲಾಕ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನ ವಿಶೇಷ ಅಲಂಕಾರದಿಂದ ಕಳೆಗಟ್ಟಿತ್ತು. ಬೆಳಗಿನ ಜಾವ 3.30 ಕ್ಕೆ ಸುಪ್ರಭಾತ ಸೇವೆಯೊಂದಿಗೆ ದಿನದ ಕಾರ್ಯಕ್ರಮಗಳು ಆರಂಭವಾದವು. ಶ್ರೀನಿವಾಸನಿಗೆ ವಿಶೇಷ ಪೂಜೆ, ಅಭಿಷೇಕ, ವೈಕುಂಠ ದ್ವಾರ ಪೂಜೆ, ಮಂತ್ರಪುಷ್ಪ, ಅಷ್ಟೋತ್ತರ, ಧೂಪ, ದೀಪ, ನೈವೇದ್ಯ, ಮಂಗಳಾರತಿ, ಮಂಗಳಾ ಶಾಸನ ಹೀಗೆ ಭಗವಂತನ ಆರಾಧನೆ ನಿರಂತರವಾಗಿ ನಡೆಯಿತು.
    ‘ಗೋವಿಂದಾ.. ಗೋವಿಂದ…’ ಎಂಬ ನಾಮಸ್ಮರಣೆ ದೇಗುಲದ ಆವರಣವನ್ನು ತುಂಬಿಕೊಂಡಿತ್ತು. ಶ್ರೀನಿವಾಸ, ಪದ್ಮಾವತಿ ದೇವಿಯ ವಿಗ್ರಹಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ತಿರುಪತಿಯ ದೇವಸ್ಥಾನದಲ್ಲಿ ಮಾಡುವ ಅಲಂಕಾರವನ್ನು ಅದು ಹೋಲುವಂತಿತ್ತು. ವೈಕುಂಠ ದ್ವಾರವಂತೂ ಆಕರ್ಷಣೆಯ ಕೇಂದ್ರವಾಗಿತ್ತು. ಶ್ರೀದೇವಿ, ಭೂದೇವಿ ಸಹಿತ ಸ್ವಾಮಿಯ ಮೂರ್ತಿಯನ್ನು ಇಡಲಾಗಿತ್ತು. ಅದರ ಕೆಳಗಿನಿಂದ ಹೋಗುವ ಮೂಲಕ ಭಕ್ತರು ಪುನೀತ ಭಾವವನ್ನು ಹೊಂದಿದರು.
    ಭಕ್ತರು ಭಗವಂತನಿಗೆ ತುಳಸಿ ಮತ್ತು ಪುಷ್ಪಗಳನ್ನು ಸಮರ್ಪಣೆ ಮಾಡಿದರು. ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಭಕ್ತರಿಗೆ ತೀರ್ಥ-ಪ್ರಸಾದಗಳನ್ನು ವಿತರಿಸಲಾಯಿತು. ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಭಕ್ತರು ದೂರ ದೂರದ ವರೆಗೆ ಸಾಲುಗಟ್ಟಿ ನಿಂತಿದ್ದರು. ಪೊಲೀಸರು ಹಾಗೂ ಸ್ವಯಂ ಸೇವಕರು ಸ್ಥಳದಲ್ಲಿದ್ದು ಅಗತ್ಯ ವ್ಯವಸ್ಥೆ ಮಾಡಿದರು.
    ದೇವಸ್ಥಾನದ ಧರ್ಮದರ್ಶಿ ರಾಮಮೋಹನ್, ಆಗಮಿಕರಾದ ಶೇಷಾದ್ರಿ, ಭಕ್ತರಾದ ಕೆ.ಟಿ. ಗೋಪಾಲಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts