More

    ಶಿಕ್ಷಣ ಮೊಟಕು ತಪ್ಪಿಸಲು ಸಮಾಜದ ಸಹಯೋಗ ಅಗತ್ಯ

    ದಾವಣಗೆರೆ : ಮಕ್ಕಳ ಶಿಕ್ಷಣ ಮೊಟಕುಗೊಳ್ಳುವುದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
     ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದರು.
     ಶಾಲಾ ಕಾಲೇಜುಗಳು ಹಳ್ಳಿಗಳಿಂದ ದೂರ ಇರುವುದು ಅಥವಾ ಸಾಮಾಜಿಕ, ಆರ್ಥಿಕ ಕಾರಣಕ್ಕೆ ಕೆಲವು ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಂತದಲ್ಲಿ ಶಾಲೆಯನ್ನು ಬಿಟ್ಟು, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
     ಸಿಎಸ್‌ಆರ್ ನಿಧಿಯ ಮೂಲಕ ಅಂಥ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಬಹುದಾಗಿದೆ. ಕೆಲವು ಆಸಕ್ತರು ಸೇರಿ ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳು ಶಿಕ್ಷಣ ಮುಂದುವರಿಸುವಂತೆ ಮಾಡಬಹುದು ಎಂದು ಸಲಹೆ ನೀಡಿದರು.
     ಒಬ್ಬ ವ್ಯಕ್ತಿ ನಾಲ್ಕೈದು ಮಕ್ಕಳನ್ನು ‘ಶೈಕ್ಷಣಿಕ ದತ್ತು’ ಪಡೆಯಬಹುದು. ಹೀಗೆ ಯಾವುದಾದರೂ ಮಾರ್ಗದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ದೇಶದ ಪ್ರತಿ ವ್ಯಕ್ತಿ ಅಕ್ಷರಸ್ಥನಾಗಬೇಕು ಎಂಬುದು ಕೇಂದ್ರ, ರಾಜ್ಯ ಸರ್ಕಾರಗಳ ಆಶಯವಾಗಿದೆ ಎಂದರು.
     ಕೌಶಲ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸುವ ಮೂಲಕ ನವ, ಶ್ರೇಷ್ಠ, ಆತ್ಮನಿರ್ಭರ ಭಾರತ ನಿರ್ಮಿಸಲು ಹೊಸ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದು, ಸಮಾಜ ಇದಕ್ಕೆ ಸಹಯೋಗ ನೀಡಬೇಕು ಎಂದು ಮನವಿ ಮಾಡಿದರು.
     ಹೊಸ ಶಿಕ್ಷಣ ನೀತಿಯಿಂದ ಇಂದಿನ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದೆ. ಮಾತೃಭಾಷೆಯ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ ಎಂದು ಹೇಳಿದರು.
     ಮಾತೃಭಾಷೆಯಲ್ಲಿ ಕಲಿಯುವುದರಿಂದ ಲಾಭವಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಕ್ಷೇತ್ರಗಳಲ್ಲೂ ಮಾತೃಭಾಷೆಯ ಬಳಕೆ ಮಾಡುವುದು ಸೂಕ್ತ. ರಷ್ಯಾ, ಚೀನಾ, ಅಮೆರಿಕ, ಜರ್ಮನಿ, ಜಪಾನ್, ಫ್ರಾನ್ಸ್ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳು ಮಾತೃಭಾಷೆಗೆ ಒತ್ತು ನೀಡಿ ಅಭಿವೃದ್ಧಿಯ ಹೆಜ್ಜೆ ಇರಿಸಿವೆ ಎಂದು ಉದಾಹರಣೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts