More

    ಒಳ ಮೀಸಲಾತಿ ನಿರ್ಧಾರದ ವಿರುದ್ಧ ಆಕ್ರೋಶ

    ದಾವಣಗೆರೆ : ಒಳ ಮೀಸಲಾತಿ ವರ್ಗೀಕರಣ ಕುರಿತ ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
     ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಸಮುದಾಯದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ತಮಗೆ ಅನ್ಯಾಯ ಮಾಡಿದೆ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
     ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳನ್ನು ಮಾಡಿ ಒಳಮೀಸಲಾತಿ ಹಂಚಿಕೆ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ, ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದರು.
     ಒಳ ಮೀಸಲಾತಿಯೇ ಅಸಾಂವಿಧಾನಿಕ ಆಗಿರುವಾಗ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ. 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಅವೈಜ್ಞಾನಿಕ. ಇದನ್ನು ಸಮುದಾಯ ಒಪ್ಪುವುದಿಲ್ಲ. ಸಹೋದರ ಸಮುದಾಯಗಳನ್ನು ಒಡೆಯುವ ಮೂಲಕ ರಾಜಕೀಯ ಮಾಡಲು ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
     ಚುನಾವಣೆ ಘೋಷಣೆಗೆ 3 ದಿನ ಇರುವಾಗ ರಾಜ್ಯ ಸರ್ಕಾರ ತರಾತುರಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಕುರಿತ ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಖಂಡನೀಯ ಎಂದು ಭೋವಿ ಸಮುದಾಯದ ಮುಖಂಡ ಡಿ. ಬಸವರಾಜ್ ಆರೋಪಿಸಿದರು.
     ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತೆಗೆದುಕೊಂಡ ಈ ನಿರ್ಧಾರ ಸಮುದಾಯಗಳ ಮುಂದಿನ ಪೀಳಿಗೆಗೆ ಮರಣ ಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ನಮ್ಮ ನಮ್ಮಲ್ಲಿ ಜಾತಿಗಳನ್ನು ಒಡೆದು ಆಳಲು ಸರ್ಕಾರ ಮುಂದಾಗಿದೆ. ಚರ್ಚೆ ಮಾಡದೆ, ಸಮುದಾಯದವರ ಅಭಿಪ್ರಾಯ ಪಡೆಯದೆ ಏಕಾಏಕಿ ವರದಿಯನ್ನು ಶಿಫಾರಸು ಮಾಡಿರುವುದು ಸರಿಯಲ್ಲ ಎಂದು ದೂರಿದರು.
     ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ್ ಮಹಾರಾಜ್, ನಾಗರಾಜ ಮಹಾರಾಜ್, ಶಿವಸಾಧು ಮಹಾರಾಜ್, ಮಂಜುನಾಥ ಸ್ವಾಮೀಜಿ, ಮುಖಂಡರಾದ ಚಿನ್ನಸಮುದ್ರ ಶೇಖರ ನಾಯ್ಕ, ಮಂಜಾನಾಯ್ಕ, ಬಸವರಾಜ ನಾಯ್ಕ, ನಂಜಾನಾಯ್ಕ, ರಾಜಾನಾಯ್ಕ, ಲಿಂಗರಾಜ ನಾಯ್ಕ, ಹನುಮಂತಪ್ಪ, ಕೊಟ್ರೇಶಪ್ಪ, ಚಂದ್ರಪ್ಪ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ ಇದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts