More

    ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

    ದಾವಣಗೆರೆ : ನಿತ್ಯವೂ ಕಚೇರಿಯಲ್ಲಿ ಕಡತ ವಿಲೇವಾರಿ, ಸಭೆ, ವಿಡಿಯೋ ಸಂವಾದ, ಕ್ಷೇತ್ರ ಭೇಟಿ ಹೀಗೆ ಒತ್ತಡದ ನಡುವೆ ಕೆಲಸ ಮಾಡುವ ರಾಜ್ಯ ಸರ್ಕಾರಿ ನೌಕರರು ದಿನದ ಮಟ್ಟಿಗೆ ಅದೆಲ್ಲವನ್ನೂ ಮರೆತು ಅಲ್ಲಿ ಸೇರಿದ್ದರು. ತಾವು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಸೈ ಎಂಬುದನ್ನು ಅವರು ನಿರೂಪಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಉದ್ಘಾಟನೆಯಾದ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅವರು ತಮ್ಮ ಪ್ರತಿಭೆ ಮೆರೆದರು.
    ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಂದಿದ್ದ ಆ ನೌಕರರು ಒಂದೇ ಬಗೆಯ ಟಿ ಶರ್ಟ್ ಧರಿಸಿದ್ದರು. ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಭಾಗವಹಿಸಿ ತಮ್ಮೊಳಗೂ ಒಬ್ಬ ಕ್ರೀಡಾಪಟು ಇದ್ದಾನೆ, ಕಲೆ ಅಡಗಿದೆ ಎಂಬುದನ್ನು ತೋರಿಸಿಕೊಟ್ಟರು.
    ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನೌಕರರು ಹೆಚ್ಚಾಗಿ ಪಾಲ್ಗೊಳ್ಳಬೇಕು. ಸಾಧನೆಯನ್ನು ಉತ್ತಮಪಡಿಸಿಕೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಆಶಿಸಿದರು.
    ಇಂಥ ಚಟುವಟಿಕೆಗಳು ಬುದ್ಧಿಯನ್ನು ಚುರುಕು ಗೊಳಿಸುವ ಜತೆಗೆ ಹುಮ್ಮಸ್ಸು ಮೂಡಿಸುತ್ತವೆ. ಇದು ಒಂದು ದಿನಕ್ಕೆ ಸೀಮಿತವಾಗದೇ ನಿರಂತರ ಅಭ್ಯಾಸದಲ್ಲಿ ತೊಡಗಬೇಕು ಎಂದು ಹೇಳಿದರು.
    ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬ್ಯಾಂಕ್, ವಿಮೆ ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರು ಹೆಚ್ಚಾಗಿ ಪಾಲ್ಗೊಂಡು ಪ್ರಶಸ್ತಿ ಗಳಿಸುವುದನ್ನು ಗಮನಿಸಿದ್ದೇನೆ. ನೀವೂ ಅವರಂತೆಯೇ ಸಾಧನೆ ಮಾಡಬೇಕು. ಈ ಕ್ರೀಡಾಕೂಟದಲ್ಲಿ ಕಡಿಮೆ ಸಂಖ್ಯೆಯ ನೌಕರರು ಸೇರಿದ್ದು ಹೆಚ್ಚು ಮಂದಿ ಭಾಗವಹಿಸಬೇಕು ಎಂದು ತಿಳಿಸಿದರು.
    ಈ ಕ್ರೀಡಾಕೂಟಕ್ಕೆ ಜಿ.ಪಂ.ನಿಂದ 6 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ರಾಜ್ಯ ಸರ್ಕಾರ ಎಲ್ಲ ಇಲಾಖೆಗಳಿಗೂ ಅನುದಾನ ನೀಡುತ್ತಿದೆ. ನೌಕರರ ಹೊಸ ವೇತನ ಆಯೋಗ ರಚನೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ನಮ್ಮ ಸರ್ಕಾರ ಮಾಡಿದಷ್ಟು ಕೆಲಸವನ್ನು ಯಾರೂ ಮಾಡಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts