More

    ಮುಕ್ತ ಮತದಾನ, ಸಮರ್ಥ ಸರ್ಕಾರದ ಬಗ್ಗೆ ಜಾಗೃತಿ ಅಗತ್ಯ

    ದಾವಣಗೆರೆ: ಸಮರ್ಥ ಸರ್ಕಾರವನ್ನು ತರುವ ನಿಟ್ಟಿನಲ್ಲಿ ಮುಕ್ತ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.
     ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ, ‘ಮುಕ್ತ ಮತದಾನ-ಸಮರ್ಥ ಸರ್ಕಾರ’ ಕುರಿತು ಪ್ರಗತಿಪರ ಚಿಂತಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
     ಜನತಂತ್ರ ವ್ಯವಸ್ಥೆಯಲ್ಲಿ ಮತದಾನ ನ್ಯಾಯಸಮ್ಮತವಾಗಿ ನಡೆಯಬೇಕು. ಭ್ರಷ್ಟಾಚಾರ ಇಲ್ಲದ ಆಡಳಿತವನ್ನು ಪಡೆಯಬೇಕಾದರೆ ಸಮಾಜದಲ್ಲಿ ಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ಚಳವಳಿಗಾರರು, ಸಂಘಟನೆಗಳ ಪಾತ್ರ ದೊಡ್ಡದಿದೆ ಎಂದರು.
     ಬಿಜೆಪಿ ಅಧಿಕಾರದ ಅಮಲಿನಲ್ಲಿದೆ, ಆರ್‌ಎಸ್‌ಎಸ್ ಭ್ರಮೆಯಲ್ಲಿದೆ. ಜಾತ್ಯತೀತತೆ, ಸಮಾಜವಾದದ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಹೀಗಿರುವಾಗ ಪರ್ಯಾಯದ ಕುರಿತು ಗಂಭೀರ ಚಿಂತನೆ ನಡೆಯಬೇಕು ಎಂದು ತಿಳಿಸಿದರು.
     ರಾಜ್ಯದಲ್ಲಿ ಇತ್ತೀಚೆಗೆ ತಾವು ಸಮೀಕ್ಷೆ ನಡೆಸಿದ್ದು, 1 ಸಾವಿರಕ್ಕೂ ಹೆಚ್ಚು ಜನರನ್ನು ಮಾತನಾಡಿಸಿ ಅವರ ಮನದಾಳ ತಿಳಿಯುವ ಪ್ರಯತ್ನ ಮಾಡಿದ್ದಾಗಿ ಹೇಳಿದರು.
     ಆರ್ಥಿಕ ತಜ್ಞ ಜಿ.ವಿ. ಸುಂದರ್ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ಗ್ರಾಮೀಣ ಪ್ರದೇಶ, ರೈತರು ಮತ್ತು ಬಡವರ ವಿರುದ್ಧವಾಗಿದೆ. ಉದ್ಯಮಿಗಳ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುವ ಬಿಜೆಪಿ ಸರ್ಕಾರ ರೈತರ ಕಲ್ಯಾಣದ ಕುರಿತು ಆಸಕ್ತಿ ಹೊಂದಿಲ್ಲ ಎಂದು ಆರೋಪಿಸಿದರು.
     ಶಿಕ್ಷಣ, ಉದ್ಯೋಗ ಖಾತ್ರಿ, ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತದೆ. ಅತಿಹೆಚ್ಚು ಸಾಲ ಮಾಡಿ ರಸ್ತೆ, ಬಂದರು, ವಿಮಾನ ನಿಲ್ದಾಣದಂಥ ಮೂಲಸೌಲಭ್ಯಕ್ಕೆ ಹಣ ಒದಗಿಸುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದರು.
     ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಯೋಗ್ಯವಾದ ರೀತಿಯಲ್ಲಿ ಚುನಾವನೆಗಳು ನಡೆಯಬೇಕು. ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
     ಚುನಾವಣೆಗೆ ಸ್ಪರ್ಧಿಸಲು ಜಾತಿ ಮತ್ತು ಹಣಬಲ ಬೇಕು ಎನ್ನುವ ನಂಬಿಕೆಯೇ ದೊಡ್ಡ ಶತ್ರುವಾಗಿದೆ. ಖರೀದಿ, ಮಾರಾಟ ಮುಂತಾದ ಮಾರುಕಟ್ಟೆಯ ಭಾಷೆಯಿಂದ ಮಾನವೀಯ ಭಾಷೆಗೆ ನಾವು ಬದಲಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
     ವಕೀಲ ಅನೀಸ್ ಪಾಷಾ ಮಾತನಾಡಿದರು. ರೈತ ಮುಖಂಡ ಚಿನ್ನಸಮುದ್ರ ಶೇಖರ ನಾಯ್ಕ, ಪೂಜಾರ್ ಅಂಜಿನಪ್ಪ, ಶಿರೀನ್ ಬಾನು ಮುಂತಾದ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts