More

    ಜಿಲ್ಲೆಯಲ್ಲಿ ಒಟ್ಟು 93.42 ಲಕ್ಷ ರೂ. ಮೌಲ್ಯದ ವಸ್ತು ವಶ

    ದಾವಣಗೆರೆ: ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 93.42 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
     ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
     ಅವುಗಳ ಪೈಕಿ 2.53 ಲಕ್ಷ ರೂ. ಮೌಲ್ಯದ 6627 ಲೀಟರ್ ಮದ್ಯ, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 42.06 ಲಕ್ಷ ರೂ. ನಗದು, ಅಕ್ರಮವಾಗಿ ಸಾಗಿಸುತ್ತಿದ್ದ 66.7 ಕೆ.ಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
     ಚುನಾವಣಾ ಅಕ್ರಮಗಳ ಸಂಬಂಧ ಸಿ-ವಿಜಿಲ್ ಆ್ಯಪ್ ಮೂಲಕ 15 ದೂರುಗಳು ಸ್ವೀಕೃತವಾಗಿವೆ. ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ ಎಂದು ತಿಳಿಸಿದರು.
     ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಏ. 11ರ ವರೆಗೂ ಅವಕಾಶವಿದೆ. ಇದುವರೆಗೆ ಮತದಾರರ ಸಂಖ್ಯೆ 14,32,960 ಆಗಿದೆ. 80 ವರ್ಷ ಮೇಲ್ಪಟ್ಟ 27,586 ಮತದಾರರಿದ್ದು ಆ ಪೈಕಿ 24,463 ಮಂದಿಗೆ 12 ಡಿ ಅರ್ಜಿಯನ್ನು ನೀಡಲಾಗಿದೆ. ಅಂಗವಿಕಲ ಮತದಾರರು 19,427 ಇದ್ದು 16,402 ಜನರಿಗೆ 12ಡಿ ಅರ್ಜಿ ತಲುಪಿಸಲಾಗಿದೆ ಎಂದು ತಿಳಿಸಿದರು.
     ಧಾರ್ಮಿಕ ಸ್ಥಳ, ಸಮುದಾಯ ಭವನಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಚಟುವಟಕೆಗಳಿಗೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದರು.
     ಮಹಿಳೆಯರಿಗಾಗಿ 5 ಕಡೆ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸುವ ಚಿಂತನೆಯಿದೆ. ತಾಂಡಾಗಳ ಸಂಸ್ಕೃತಿಯನ್ನು ಬಿಂಬಿಸುವ ಮತಗಟ್ಟೆಯನ್ನು ಹೊನ್ನಾಳಿ ತಾಲೂಕಿನಲ್ಲಿ ಸ್ಥಾಪಿಸಲಾಗುವುದು. ಅಂಗವಿಕಲರಿಗಾಗಿ 2 ಬೂತ್‌ಗಳು ಇರಲಿವೆ. ಯುವ ಅಧಿಕಾರಿಗಳೇ ಇರುವ 8 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts