More

    ಜೀವಜಲ ಕಾಪಾಡಲು ಬೇಕು ವರುಣನ ಕೃಪೆ

    ದಾವಣಗೆರೆ : ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ತೀವ್ರ ಅಭಾವ ಏನೂ ಇಲ್ಲ, ಆದರೆ ತಿಂಗಳೊಳಗೆ ದೊಡ್ಡ ಮಳೆಯಾಗಿ ಕೆರೆ, ಕಟ್ಟೆಗಳು ಭರ್ತಿಯಾಗದಿದ್ದರೆ ಸಮಸ್ಯೆ ಗ್ಯಾರಂಟಿ. ಜಲ ಮೂಲಗಳು ಮೈದುಂಬಿದರೆ ಮಾತ್ರ ಜನಜೀವನ ಸುಸೂತ್ರ.
     ಕಳೆದ ವರ್ಷ ತುಂಬಿದ್ದ 54 ಕೆರೆಗಳು ಈ ವರ್ಷ ಖಾಲಿಯಾಗಿವೆ. ಇನ್ನುಳಿದ ಕೆರೆಗಳಲ್ಲಿ ಶೇ. 30ರಿಂದ 50ರಷ್ಟು ನೀರಿದೆ. ಕೆಲವು ಕೆರೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ನೀರಿದೆ. ಕ್ರಮೇಣ ಅವುಗಳಲ್ಲೂ ನೀರಿನ ಪ್ರಮಾಣ ಇಳಿಮುಖ ಆಗುವುದರಿಂದ ಮುಂಬರುವ ದಿನಗಳಲ್ಲಿ ಕೊರತೆ ಉಂಟಾಗಬಹುದು ಎನ್ನುತ್ತಾರೆ ಅಧಿಕಾರಿಗಳು.
     ಜಿಲ್ಲೆಯಲ್ಲಿ 32 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು, 799 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅಲ್ಲದೇ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಕಾಪಾಡಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಮುಖ್ಯವಾಗಿ ಬೇಕಿರುವುದು ದೊಡ್ಡ ಮಳೆ. ಈಗ ಬರುತ್ತಿರುವ ಮಳೆ ಸಾಕಾಗುವುದಿಲ್ಲವಂತೆ.
     ಮುಖ್ಯವಾಗಿ ಜಿಲ್ಲೆಯ ಜೀವನಾಡಿಯಾದ ಭದ್ರಾ ಜಲಾಶಯ ಭರ್ತಿಯಾಗಿ ನಾಲೆಗಳಿಗೆ ನೀರು ಹರಿಯಬೇಕಿದೆ. ಅದರಿಂದ ಅಂತರ್ಜಲ ವೃದ್ಧಿಯಾಗಿ ಅಚ್ಚುಕಟ್ಟಿನಲ್ಲಿರುವ ಪ್ರದೇಶಗಳ ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತವೆ. ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಟಿವಿ ಸ್ಟೇಷನ್ ಕೆರೆಯೂ ಮೈದುಂಬಿಕೊಳ್ಳುತ್ತದೆ.
     …
     * 1 ಕೋಟಿ ರೂ. ಪ್ರಸ್ತಾವನೆ
     ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಅಭಾವ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು 2023-24ನೇ ಸಾಲಿಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಹೆಚ್ಚುವರಿ ಕ್ರಿಯಾಯೋಜನೆ ರೂಪಿಸಿ 1 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಆಯುಕ್ತರಿಗೆ ಕಳಿಸಲಾಗುತ್ತಿದೆ.
     ಐದು ತಾಲೂಕುಗಳಿಗೆ ತಲಾ 20 ಲಕ್ಷ ರೂ.ಗಳನ್ನು ಕೇಳಲಾಗಿದೆ. ದಾವಣಗೆರೆ ತಾಲೂಕಿನಲ್ಲಿ 15, ಚನ್ನಗಿರಿ 13, ಜಗಳೂರು 10, ಹೊನ್ನಾಳಿ 7, ಹರಿಹರ ತಾಲೂಕಿನಲ್ಲಿ 4 ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
     ಕೊಳವೆ ಬಾವಿಗಳಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಹೊಸ ಬೋರ್‌ವೆಲ್ ಕೊರೆಸುವುದು, ಕಿರು ನೀರು ಸರಬರಾಜು ಯೋಜನೆಗಳಿಗೆ ಆಂತರಿಕ ವೈರಿಂಗ್ ಕಾಮಗಾರಿ, ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಪಂಪ್, ಮೋಟಾರ್, ಪೈಪ್‌ಲೈನ್ ಅಳವಡಿಸುವುದು ಪ್ರಸ್ತಾವನೆಯಲ್ಲಿದೆ.
     2022-23ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ 1 ಕೋಟಿ ರೂ. ಅನುದಾನದಲ್ಲಿ 47 ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
     …
     (ಕೋಟ್)
     ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಇನ್ನೂ ಒಂದು ತಿಂಗಳು ಹೀಗೇ ಮುಂದುವರಿದರೆ ಸಮಸ್ಯೆ ಉಂಟಾಗಬಹುದು. ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ನಾಲೆಗಳಿಗೆ ನೀರು ಹರಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ. ದೊಡ್ಡ ಮಳೆ ಬಂದು ಕೆರೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ.
      ಬಿ. ರವೀಂದ್ರ ನಾಯ್ಕ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಪ್ರಭಾರ ಕಾರ್ಯ ನಿರ್ವಾಹಕ ಇಂಜಿನಿಯರ್
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts