More

    ಬರಹದಂತೆ ಬದುಕಿದ ಸಾಹಿತಿಗೆ ಮನ್ನಣೆ

    ದಾವಣಗೆರೆ: ಬರಹದಂತೆ ಬದುಕು ನಡೆಸುವ ಸಾಹಿತಿಗಳು ದೊಡ್ಡ ವ್ಯಕ್ತಿಯಾಗಬಲ್ಲರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮ, ಸಿದ್ಧಗಂಗಾ ಮಕ್ಕಳ ಲೋಕ ಸಾಂಸ್ಕೃತಿಕ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

    ಕೆಲವು ಲೇಖಕರು, ಬರಹಗಾರರು ನಿವೃತ್ತಿ ನಂತರದ ಜೀವನದಲ್ಲಿ ರಾಜಕೀಯ ಸ್ಥಾನಮಾನ ಪಡೆಯಲು ಆಸೆ ಪಡುತ್ತಾರೆ. ಆದರೆ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಯಾವ ಸ್ಥಾನಮಾನಕ್ಕೆ ಆಸೆ ಪಡದೆ ಬಡಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಮಾತು-ಕೃತಿ ಎರಡರಲ್ಲೂ ಒಂದಾಗಿದ್ದ ಸಜ್ಜನ ಸಾಹಿತಿಯಾಗಿದ್ದಾರೆ ಎಂದರು.

    ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರೊನಾ ಹಾವಳಿ ನಡುವೆಯೂ ಮಕ್ಕಳಿಗೆ ಶಿಕ್ಷಣ ನೀಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಶಾಲಾ ಕಾಲೇಜುಗಳಲ್ಲಿ ತಿರಸ್ಕಾರಕ್ಕೆ ಒಳಗಾಗಿದ್ದ ಮೊಬೈಲ್ ಇಂದು ಅನಿವಾರ್ಯವಾಗಿದೆ. ಭಾಷಾ ಮಾಧ್ಯಮ ಹಾಗೂ ಜ್ಞಾನದ ಕಲಿಕೆಯ ಮಾಧ್ಯಮವಾಗಿ ಮೊಬೈಲ್ ಬಳಕೆಯಾಗಬೇಕಿದೆ ಎಂದು ಆಶಿಸಿದರು.

    ಮಕ್ಕಳಲ್ಲಿ ಇಂದು ಜೀವಂತ ಸಂವಹನ ಕಳೆದುಹೋಗುತ್ತಿದೆ. ಇದರಿಂದಾಗಿ ಸಾಹಿತ್ಯ ಮತ್ತು ಸಂಸ್ಕೃತಿ ಎರಡೂ ಕಾಲಗರ್ಭದಲ್ಲಿ ಹುದುಗಿ ಹೋಗುವ ಅಪಾಯವಿದೆ. ಹೀಗಾಗಿ ಮಕ್ಕಳಿಗೆ ಬಂಧುಗಳ ಪರಿಚಯ ಮಾಡಿಸಬೇಕು. ಕೃತಜ್ಞತಾ ಮನೋಭಾವ ಹಾಗೂ ಉತ್ತಮ ಸಂಸ್ಕಾರ ಬಿತ್ತಬೇಕು ಎಂದರು.

    ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಮಾತನಾಡಿ, ಪವಿತ್ರ ವೃತ್ತಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಇರುವುದೇ ಶಿಕ್ಷಕ ವೃತ್ತಿ. ಬಹುತೇಕ ನಿವೃತ್ತರು ಕೇವಲ ಪಿಂಚಣಿ, ಪ್ರಶಸ್ತಿ ಇತರೆಯದರಲ್ಲೇ ಮುಳುಗುತ್ತಾರೆ. ಮಕ್ಕಳ ಲೋಕ ಸಂಸ್ಥೆ ಮೂಲಕ ಮಕ್ಕಳನ್ನು ಗುರುತಿಸಿ ಉತ್ತೇಜಿಸುವ ಕೆ.ಎನ್.ಸ್ವಾಮಿ ಅವರು ನಿವೃತ್ತಿ ನಂತರದ ಜೀವನಕ್ಕೆ ಉತ್ತಮ ಉದಾಹರಣೆ ಎಂದರು.

    ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ಸಂಪಾದಕತ್ವದ ಕನ್ನಡ ಕುಲಭೂಣ ಕೆ.ಎನ್.ಸ್ವಾಮಿ ಕೃತಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ಹಿರಿಯರು ಮತ್ತು ಕಿರಿಯರ ಕವಿಗೋಷ್ಠಿ ನಡೆಯಿತು. ಸಾಹಿತಿ ಸತ್ಯಭಾಮ ಮಂಜುನಾಥ, ಶಿಕ್ಷಕಿ ಜಿ.ಸಿ.ನಿರ್ಮಲಾ ದತ್ತಿ ಉಪನ್ಯಾಸ ನೀಡಿದರು.

    ಸಾಹಿತಿ ಕೆ.ಎನ್.ಸ್ವಾಮಿ, ವೈದ್ಯ ಡಾ.ಬಿ.ಎಸ್.ನಾಗಪ್ರಕಾಶ್, ಸಿದ್ದಗಂಗಾ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್.ಜಯಂತ್, ಸೋಮೇಶ್ವರ ಶಾಲೆ ಪ್ರಾಚಾರ್ಯೆ ಪ್ರಭಾವತಿ, ಬ್ಯಾಂಕ್ ಉದ್ಯೋಗಿ ಕೆ.ರಾಘವೇಂದ್ರ ನಾಯರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts