More

    ದಾವಣಗೆರೆಯನ್ನು ಹಸಿರು ನಗರವನ್ನಾಗಿಸಲು ಸಹಕರಿಸಿ

    ದಾವಣಗೆರೆ : ವಿಶಿಷ್ಟ  ಜೀವ ವೈವಿಧ್ಯದ ಹಸಿರು ನಗರವನ್ನಾಗಿಸಲು ಹಾಗೂ ಮಾಲಿನ್ಯ ಮುಕ್ತ ನಗರ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
     ನಗರದ ಕೆ.ಎಚ್.ಬಿ ತುಂಗಭದ್ರ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ನಾಗರಿಕ ಸಮಾಜದ ಪ್ರತಿಯೊಬ್ಬರೂ ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು. ಉತ್ತಮ ಪರಿಸರದಿಂದ ಜನರ ಆರೋಗ್ಯ ರಕ್ಷಣೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಗಿಡ, ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
     ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಮನುಷ್ಯ ಬದುಕಲು ಮಣ್ಣು, ನೀರು ಮತ್ತು  ಗಾಳಿ ಬಹಳ ಮುಖ್ಯ, ಮನುಷ್ಯನಿಗೆ ಅರಿವಿಲ್ಲದೆಯೇ ಕಾಡು ಕಡಿಯುತ್ತ ತನ್ನ ಅವಸಾನ ತಂದುಕೊಳ್ಳುತ್ತಿದ್ದಾನೆ ಎಂದು ಹೇಳಿದರು.
     ಸ್ಮಾರ್ಟ್ ಸಿಟಿ ಎಂದು ಹೆಸರಾದ ದಾವಣಗೆರೆ ಇಂದು ಮಾಲಿನ್ಯ ನಗರದ ಪಟ್ಟಿಗೆ ಸೇರಿದೆ. ದೇಶದ ಮಾಲಿನ್ಯ ಮುಕ್ತ ನಗರದ ಶ್ರೇಯಾಂಕದಲ್ಲಿ 136ನೇ ಸ್ಥಾನದಲ್ಲಿರುವುದು ವಿಷಾದದ ಸಂಗತಿ. ನಮ್ಮ ನಾಳೆಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಈ ದಿಸೆಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಪರಿಸರ ಉಳಿಸುವಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
     ವನಮಹೋತ್ಸವ ಅಂಗವಾಗಿ ಕೆ.ಎಚ್.ಬಿ. ತುಂಗಭದ್ರ  ಬಡಾವಣೆಯ ನಾಲ್ಕೂವರೆ ಎಕರೆ ಜಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸಿ ನೆಡಲಾಯಿತು.
     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ವಕೀಲರ ಸಂಘದ ಜಿಲ್ಲಾಧ್ಯಕ್ಷ  ಎಲ್.ಎಚ್. ಅರುಣಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಲಕ್ಷ್ಮೀಕಾಂತ, ಡಾ.ಮಂಜುನಾಥ, ಪೊಲೀಸ್ ಅಧಿಕಾರಿ ಯಶವಂತ್, ಗ್ರಾಸಿಂ ಇಂಡಸ್ಟ್ರೀಸ್ ಮುಖ್ಯಸ್ಥ ಡಾ.ಅಜಯ್ ಗುಪ್ತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts